Wednesday, September 28, 2022

Youth in the development of the country...

ದೇಶದ ಅಭಿವೃದ್ದಿಯಲ್ಲಿ ಯುವಕರು...

‘ರಾಷ್ಟ್ರ’ ಎಂದರೆ ಕೇವಲ ಉದ್ದಗಲಕ್ಕೂ ಹರಡಿದ ಭೂಮಿ, ಎತ್ತರವಾಗಿ ನಿಂತ ಪರ್ವತ ಮಾಲೆ, ಸುತ್ತಿಹರಿವ ನದಿಗಳು, ಹಾಗೂ ಹರಿಯುತ್ತಿರುವ ಹಳ್ಳ ಕೊಳ್ಳ -ಇತ್ಯಾದಿ ಭೌಗೋಲಿಕ ಲಕ್ಷಣಗಳಷ್ಟೇ ಅಲ್ಲ. ಅಲ್ಲಿ ಹುಟ್ಟಿ ಬೆಳೆದು ಜೀವಿಸುತ್ತಿರುವ ಸಹಸ್ರಾರು ಮಾನವ ಜೀವಿಗಳು ಒಂದು ರಾಷ್ಟ್ರವನ್ನು ರೂಪಿಸುತ್ತವೆ. ನಿಸರ್ಗ, ನೈಜವಾಗಿ ನೀಡಿದ ನೆಲ, ನೀರು, ನಿಕ್ಷೇಪಿತ ನಿಧಿಗಳೆಲ್ಲ ನಾಡಿನ ನಿಜವಾದ ನಿಧಿಗಳೇನೋ ಸರಿ. ಆದರೆ ಅವುಗಳ ನ್ಯಾಯಸಮ್ಮತ ನಿರ್ವಹಣೆ ನಾಡಿನ ನಿವಾಸಿಗಳ ನಿಪುಣತೆಯಲ್ಲಿದೆ. ಅಷ್ಟಕ್ಕೂ ರಾಷ್ಟ್ರಾಭಿವೃದ್ದಿ ಎಂದರೆ- ರಾಷ್ಟ್ರದ ಸರ್ವತೋಮುಖ  ಉತ್ಕರ್ಷ, ಉನ್ನತಿ, ಉತ್ಥಾನ, ಸರ್ವತೋಮುಖ  ಅಭಿವೃದ್ಧಿಯೆಂದರೆ ಆ ರಾಷ್ಟ್ರದ ಚಾರಿತ್ರö್ಯ ಶಿಕ್ಷಣ, ಉದ್ಯೋಗ, ವಿಜ್ಞಾನ, ಕಲೆ, ಕೌಶಲ್ಯ, ಕ್ರೀಡೆ ಹೀಗೆ ಅನೇಕ ಆಯಾಮಗಳಲ್ಲಿ ಸಾಧಿಸಿರುವ ಪರಿಣತಿ, ರಾಷ್ಟ್ರದ ಜನತೆಗಳಲ್ಲಿ ಈ ಎಲ್ಲ ಆಯಾಮಗಳ ಪರಿಣತಿ ಇದ್ದಾಗಲೇ ರಾಷ್ಟ್ರಾಭಿವೃದ್ಧಿ ರಾಷ್ಟ್ರದ ಅಭ್ಯುದಯ ಸಾಧ್ಯವಾಗುವುದು.

ಈ ಎಲ್ಲ ಆಯಾಮಗಳಲ್ಲಿ ಪರಿಣತಿ ಪಡೆಯಲು ನಾವು ಚಿಕ್ಕ ಮಕ್ಕಳಿದ್ದಾಗಲೇ ಅದಕ್ಕಾಗಿ ಪರಿಶ್ರಮಪಡಬೇಕಾಗುತ್ತದೆ. ಮಕ್ಕಳಿಗೆ ಈ ಸಂಸ್ಕಾರವನ್ನು ಕೊಡುವುದಕ್ಕಾಗಿ ನಾವು ಅನೇಕ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಅಲ್ಲದೆ ಆ ಯೋಜನೆಗಳ ಸಾಕ್ಷಾತ್ಕಾರಕ್ಕೆ ಶ್ರಮಿಸಬೇಕಾಗುತ್ತದೆ. ಈ ಎಲ್ಲ ಸಾಮರ್ಥ್ಯಗಳನ್ನು ಯಾರೂ ಹುಟ್ಟಿದಾಗಿನಿಂದಲೇ ಹೊಂದಿರಲಾರರು. ಇವುಗಳನ್ನು ನಾವು ಪ್ರಯತ್ನಪೂರ್ವಕವಾಗಿ ಪಡೆದುಕೊಳ್ಳಬೇಕಾಗುತ್ತದೆ.  ಅಂತೆಯೇ ಮಕ್ಕಳಲ್ಲಿ ಅವರ ವಿದ್ಯಾರ್ಥಿ ಜೀವನದಲ್ಲಿಯೇ ಈ  ಎಲ್ಲ ಗುಣಗಳನ್ನೂ, ವಿದ್ಯೆಗಳನ್ನೂ, ಕಲೆಗಳನ್ನೂ ಅಳವಡಿಸಬೇಕಾ ಗುತ್ತದೆ.

ಮಕ್ಕಳನ್ನು ‘ಅವರಿನ್ನೂ ಚಿಕ್ಕವರು, ರಾಷ್ಟ್ರಾಭಿವೃದ್ಧಿಯಲ್ಲಿ ಅವರೇನು ಮಾಡಬಲ್ಲರು?’ ಎನ್ನಬೇಡಿ. ‘ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ’ ಎಂದು ಗಾದೆಯಿದೆ. ಆದ್ದರಿಂದಲೇ ರಾಷ್ಟ್ರದ ಅಭ್ಯುದಯಕ್ಕೆ ಆವಶ್ಯಕವಾದ ಆಯಾಮಗಳ ಪರಿಣತಿ  ಪಡೆಯಲು ಈಗಿನಿಂದಲೇ ಅವರಿಗೆ ತರಬೇತಿ ನೀಡಬೇಕು. ಇಂದಿನ ಮಕ್ಕಳೇ ನಾಳಿನ ನಾಗರಿಕರು. ಆದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮನೋಧರ್ಮ ರೂಪಗೊಳ್ಳಬೇಕು. ಅವರು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಾಗಿದ್ದಾಗಲೇ ಅವರ ದೃಷ್ಟಿಕೋನವನ್ನು ಸಂಸ್ಕರಿಸಬೇಕು. ಅ ಎಳೆಯ ಮನಸ್ಸುಗಳಲ್ಲಿಯೇ ರಾಷ್ಟ್ರಭಕ್ತಿ, ರಾಷ್ಟ್ರಾಭಿಮಾನವನ್ನು ಬಿತ್ತಿ ಪೋಷಿಸುತ್ತ ಬರಬೇಕು.

ವಿದ್ಯಾರ್ಥಿಗಳಲ್ಲಿ ಈ ಮನೋಧರ್ಮವನ್ನು ಮೂಡಿಸಲು ದೃಷ್ಟಿಕೋನವನ್ನು ಸೃಷ್ಟಿಸಲು ಶಾಲಾ ಕಾಲೇಜುಗಳು ಯೋಜನೆ ರಚಿಸಬೇಕಾಗಿದೆ. ಯಾಕೆಂದರೆ ಇಂದಿನ ವಿದ್ಯಾರ್ಥಿಗಳೇ ನಾಳೆ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಕ್ರಿಯಾಶೀಲರಾಗಬೇಕಾಗಿದ್ದು, ಅಂತೆಯೇ ರಾಷ್ಟ್ರದ ಉನ್ನತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಖಂಡಿತವಾಗಿಯೂ ಪ್ರಮುಖವಾದದ್ದು, ವಿಶೇಷವಾದದ್ದು. ಅವರ ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ವಿದ್ಯಾರ್ಥಿಗಳಿಗೆ ತರಬೇತಿಯನ್ನು ಪರಿಣಾಮಕಾರಿಯಾಗಿ ನೀಡಲು ಶಾಲಾ, ಕಾಲೇಜುಗಳಲ್ಲದೆ ಶಿಕ್ಷಣ ವಿಭಾಗವೂ ಸಹ ಅತ್ಯಂತ ಗಹನವಾಗಿ ವಿಚಾರಶೀಲರಾಗಬೇಕು.  ವಿದ್ಯಾರ್ಥಿಗಳಿಗೆ ಈ ರೀತಿಯ ಯೋಗ್ಯ ತರಬೇತಿ ನೀಡಲು ಪೂರಕವಾದ ಪಾಠ್ಯಕ್ರಮ ತಯಾರಿಸುವುದು ಹಾಗೂ ಅವರ ಪಠ್ಯಪುಸ್ತಕಗಳಲ್ಲಿ ಈ ಪಾಠ್ಯಕ್ರಮವನ್ನು ಅಳವಡಿಸುವುದು ತುಂಬಾ ಅವಶ್ಯಕ.

ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಒಳ್ಳೆ ಶಿಕ್ಷಣ ಪಡೆಯುವುದಲ್ಲದೆ ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ಅವರ ಚಾರಿತ್ರö್ಯ ಗೌರವಯುತವಾಗುತ್ತದೆ. ರಾಷ್ಟ್ರಾಭಿವೃದ್ದಿಗೆ ಕೆಲ ಅವಶ್ಯಕ ಮೌಲ್ಯಗಳನ್ನು ಈಗ ವಿವೇಚಿಸೋಣ -

ದೇಶಭಕ್ತಿ - ಚಿಕ್ಕಂದಿನಿಂದಲೂ ದೇಶಪ್ರೇಮ, ದೇಶಾಭಿಮಾನವನ್ನು ಮಕ್ಕಳ ನರ ನರಗಳಲ್ಲಿ ತುಂಬಬೇಕು.  ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಪರ್ವಗಳ ಕುರಿತು ಮಕ್ಕಳಲ್ಲಿ ಅಭಿಮಾನ ಹುಟ್ಟಿಸಬೇಕು. ಅವುಗಳ ವಿಷಯಕ್ಕೆ ಅರಿವನ್ನು ಮೂಡಿಸಬೇಕು. ದೇಶಭಕ್ತಿಗೆ ವಯಸ್ಸಿನ ಮಾನದಂಡ ಬೇಕಿಲ್ಲ. ಉದಾಹರಣೆಗೆ ನಮ್ಮ ಸ್ವಾತಂತ್ರö್ಯ ಹೋರಾಟದಲ್ಲಿ ಸಕ್ರಿಯ ಭಾಗವಹಿಸಿದ ಅನೇಕ ನಾಯಕರು ಶಾಲೆ, ಕಾಲೇಜ್‌ನಲ್ಲಿ ಇರುವಾಗಲೇ ಹೋರಾಟದಲ್ಲಿ ಭಾಗವಹಿಸಿದ್ದರು. 

ನನ್ನ ಬಾಲ್ಯದ ದಿನಗಳನ್ನು ನೆನೆದಾಗ ನನಗೆ ಅಭಿಮಾನ ಎನ್ನಿಸುವುದು, ನಾವೂ ಕೂಡ ಸ್ವಾತಂತ್ರö್ಯದ ಹೋರಾಟದಲ್ಲಿ ಅಳಿಲು ಸೇವೆ ಮಾಡಿದ್ದೇವೆ ಎಂದು. ನನಗಾಗ ಆರು ವರ್ಷ ಪ್ರತಿದಿನ ಬೆಳಗಿನ ಜಾವ ನಮ್ಮ ನೆರೆಯ ಮಕ್ಕಳೆಲ್ಲ ಸೇರಿ ರಾಷ್ಟ್ರಭಕ್ತಿ ಗೀತೆಗಳನ್ನು ಹೇಳುತ್ತ ಕೈಯಲ್ಲಿ ಧ್ವಜ ಹಿಡಿದುಕೊಂಡು ‘ಪ್ರಭಾತ ಫೇರಿ’ಗೆ ಹೋಗುತ್ತಿದ್ದೆವು. ತೋಟದಲ್ಲಿ ಗಿಡಗಳಿಗೆ ಸೀರೆ ಕಟ್ಟಿ ವೇದಿಕೆ ತಯಾರಿಸಿಕೊಂಡು ಭಾಷಣ ಮಾಡುತ್ತಿದ್ದೆವು. ಘೋಷಣೆ ಕೂಗುತ್ತಿದ್ದೆವು. ದಂಟಿನಿಂದ ಮಾಡಿದ ಆಟಿಗೆ ಚಕ್ಕಡಿಗಳಿಗೆ ಪುಟ್ಟ ಧ್ವಜ ಹಚ್ಚಿ ಎಳೆಯುತ್ತಿದ್ದೆವು.

ಈಗಲೂ ಮಕ್ಕಳಿಗೆ ಶಾಲೆಗಳಲ್ಲಿ ದೇಶಭಕ್ತಿ ಗೀತೆಗಳನ್ನು ಕಲಿಸಬೇಕು. ಹೋರಾಟಗಾರರ ಜೀವನ ಚರಿತ್ರೆಗಳನ್ನು ಓದಲು ಪ್ರೋತ್ಸಾಹಿಸಬೇಕು. ಅವರ ಜೀವನದ ಘಟನೆಗಳನ್ನು ನಾಟಕ ರೂಪದಲ್ಲಿ ಪ್ರದರ್ಶಿಸಬೇಕು. ಇಂದಿನ ಶಾಸನ ಪದ್ಧತಿಯ ಕುರಿತು ಚರ್ಚೆ ನಡೆಸಬೇಕು.

ಸಮಯ ಪ್ರಜ್ಞೆ - ನಮ್ಮ ಜೀವನದಲ್ಲಿ ಸಮಯ ತುಂಬಾ ಅಮೂಲ್ಯವಾದದ್ದು. ಅಂತೆಯೇ ಒಂದು ನಿಮಿಷವನ್ನೂ ಅರ್ಥಹೀನವಾಗಿ ವ್ಯಯಿಸದೆ ರಚನಾತ್ಮಕ ಕಾರ್ಯಗಳನ್ನು ಮಾಡುತ್ತ ಆರ್ಥಪೂರ್ಣವಾಗಿ ಸಮಯದ ಸದುಪಯೋಗ ಮಾಡಿಕೊಳ್ಳಬೇಕು.

ಉದ್ಯೋಗಶೀಲತೆ - ಕಾರ್ಯಶೀಲತೆ ಅಥವಾ ಇಂಗ್ಲೀಷ್‌ನಲ್ಲಿ ‘Woಡಿಞ ಛಿuಟಣuಡಿe’ಎಂದು ಹೇಳುವ ಈ ಮೌಲ್ಯವನ್ನು ನಮ್ಮದಾಗಿಸಿಕೊಳ್ಳಬೇಕು. ಸೋಮಾರಿತನವೂ ತರವಲ್ಲ ಹಾಗೇ ‘ನನ್ನ ಕೈಯಿಂದ ಆಗಲಾರದು’ ಎಂಬ ಧೋರಣೆಯೂ ತರವಲ್ಲ. ‘Woಡಿಞ is ತಿoಡಿshiಠಿ’ ಹಾಗೆ ‘ಕಾಯಕವೇ ಕೈಲಾಸ’ ಎಂಬುದನ್ನು ಮನಗಂಡು ನಾವು ಮಾಡುವ ಒಳ್ಳೆಯ ಕೆಲಸವನ್ನೇ ನಮ್ಮ ದೇವರ ಪೂಜೆ ಎಂದುಕೊಳ್ಳಲು ವಿದ್ಯಾರ್ಥಿಗಳಿಗೆ ಕಲಿಸಬೇಕು.

ಪರಿಸರ ಸಂರಕ್ಷಣೆ - ಪರಿಸರವನ್ನು ಪ್ರದೂಷಣೆಯಿಂದ ಮುಕ್ತ ಮಾಡಿದಾಗ ರಾಷ್ಟ್ರ ರೋಗಮುಕ್ತವೂ ಆಗಬಹುದು. ಆದ್ದರಿಂದ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಲು ಮಕ್ಕಳಿಗೆ ತರಬೇತಿ ನೀಡಬೇಕು. ಹಾಗೇ ಮಕ್ಕಳಲ್ಲಿ ಮರಗಿಡಗಳನ್ನು ನೆಡಲು ಪ್ರೇರೇಪಿಸಬೇಕು. ವಿದ್ಯಾರ್ಥಿದೆಶೆಯಿಂದಲೆ ಈ ಅಭ್ಯಾಸ ಅವರಿಗೆ ಆಗಬೇಕಾದ್ದು ಅವಶ್ಯಕ.

ಸಹಜೀವನ - ಮಕ್ಕಳು ಪರಸ್ಪರ ದ್ವೇಷವನ್ನು ತೊರೆದು ಐಕ್ಯತೆಯಿಂದ ಸಹಜೀವನ ನಡೆಸಲು ಕಲಿಯಬೇಕು. ಈ  ಭಾವನೆಯನ್ನು ಮನೆಯ ಜನ ಹಾಗೇ ಶಿಕ್ಷಕರು ಪೋಷಿಸಬೇಕು. “ಐಕ್ಯತೆಯಲ್ಲಿ ಶಕ್ತಿಯಿದೆ” ಎಂದು ಮನಗಾಣಿಸಬೇಕು. ಅವರು ಉಳಿದವರ ದುಃಖದಲ್ಲಿ ಸಂವೇದಿಸಲಿ.

ಧರ್ಮ ನಿರಪೇಕ್ಷತೆ - ಮಕ್ಕಳಲ್ಲಿ ಧರ್ಮ, ಜಾತಿ, ಪಂಥಗಳ ಭೇದಭಾವ ಇರುವುದು ಬೇಡ. ಚಿಕ್ಕವರಿದ್ದಾಗಿನಿಂದಲೇ ಅವರಲ್ಲಿ ವಿಶ್ವಬಂಧುತ್ವ, ವಿಶ್ವ ಕುಟುಂಬದ ಭಾವನೆ ಬೆಳೆಸಬೇಕು.

ಮಿತವ್ಯಯ - ಮೊಟ್ಟ ಮೊದಲು ಮಕ್ಕಳು ಕಾಸಿಗೆ ಮಹತ್ವ ಕೊಡದೆ ಮಾನವತೆಗೆ ಗೌರವ ನೀಡಲು. ಅಲ್ಲದೆ       ಅನವಶ್ಯಕ ವಸ್ತುಗಳಿಗಾಗಿ ದುಡ್ಡು ವ್ಯಯಿಸುವುದು ಬೇಡ. ಈ ದೃಷ್ಟಿಕೋನ ಮುಂದೆ ದೇಶದ ಸಂಪತ್ತನ್ನು ಕೂಡಾ ಅಪವ್ಯಯ ಮಾಡದಂತೆ ಸಹಕರಿಸುತ್ತದೆ.

ಹವ್ಯಾಸಗಳ ಪೋಷಣೆ - ಪ್ರತಿಯೊಬ್ಬ ಮಗುವಿನಲ್ಲೂ ಏನಿಲ್ಲ ಏನು ಪ್ರತಿಭೆ ಇದ್ದೇ ಇರುತ್ತದೆ. ತಂದೆ-ತಾಯಿಗಳು ಹಾಗೂ ಶಿಕ್ಷಕರು ಈ ಪ್ರತಿಭೆಯನ್ನು ಗುರುತಿಸಿ ಪೋಷಿಸಬೇಕು, ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅದು ಸಾಹಿತ್ಯ,  ಸಂಗೀತ, ನೃತ್ಯ,  ಚಿತ್ರಕಲೆ, ಹಸ್ತಕಲೆ ಇವುಗಳಲ್ಲಿ ಒಂದಾಗಿರಬಹುದು ಅಥವಾ ಅನೇಕ ಕ್ರೀಡೆಗಳಲ್ಲಿ ಒಂದಾಗಿರಬಹುದು. ಇವುಗಳನ್ನು ಗುರುತಿಸಿ ಪೋಷಿಸಿ ಬೆಳೆಸಬೇಕು. ರಾಷ್ಟ್ರದ ಅಭಿವೃದ್ಧಿ ಅದರ ಸಾಂಸ್ಕೃತಿಕ ವಲಯದಲ್ಲೂ ವಿಕಾಸದ ಅಭ್ಯಿವ್ಯಕ್ತಿ ತೋರುತ್ತದೆ. ವಿದ್ಯಾರ್ಥಿಗಳು ತಮ್ಮ ಪಾಠದ ಜೊತೆಗೆ ಇಂಥ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತ ಪ್ರಾವೀಣ್ಯತೆ ಪಡೆಯಬೇಕು. ಅನೇಕ ರಾಷ್ಟ್ರಗಳು ತಮ್ಮ ಸಾಂಸ್ಕೃತಿಕ ಪ್ರತಿಭೆ ಹಾಗೂ ಕ್ರೀಡೆಗಳಿಗಾಗಿಯೇ ಪ್ರಸಿದ್ಧಿ ಪಡೆದಿವೆ.

ಈ ಎಲ್ಲ ವಿಷಯಗಳನ್ನು ವಿವೇಚಿಸಿದಾಗ ನಮಗೆಲ್ಲ ಮನದಟ್ಟಾಗುವ ಒಂದು ಸತ್ಯವೆಂದರೆ ಇಂದಿನ ವಿದ್ಯಾರ್ಥಿಗಳು ನಾಳಿನ ರಾಷ್ಟ್ರದ ಉತ್ಥಾನಕ್ಕೆ, ಉತ್ಕರ್ಷಕ್ಕೆ, ಉನ್ನತಿಗೆ ಸನ್ನದ್ಧರಾಗುತ್ತಿರುವ ಸೇನಾನಿಗಳು. ಅಂತೆಯೇ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಶಿಕ್ಷಣ, ಚಾರಿತ್ರö್ಯ, ಉದ್ಯಮ ಕೌಶಲ್ಯ, ರಾಷ್ಟ್ರಾಭಿಮಾನಗಳನ್ನು ಬೆಳೆಸಿಕೊಂಡು ರಾಷ್ಟ್ರದ ಗೌರವವನ್ನು ಹೆಚ್ಚಿಸಬೇಕು. “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಮಾತನ್ನು ಮರೆಯದೆ ಸತತವಾಗಿ ರಾಷ್ಟ್ರದ ಆರಾಧನೆ, ರಾಷ್ಟ್ರದ ಸೇವೆ ಮಾಡುತ್ತ ರಾಷ್ಟ್ರದ ಹಿರಿಮೆ-ಗರಿಮೆಗಳನ್ನು ಚರಮ ಸೀಮೆಗೆ ಕೊಂಡೊಯ್ಯಬೇಕು. ಈ ಉತ್ತರದಾಯಿತ್ವವನ್ನು ಅರ್ಥ ಮಾಡಿಕೊಂಡು ಎಲ್ಲ ವಿದ್ಯಾರ್ಥಿಗಳು ರಾಷ್ಟ್ರದ ಅಭ್ಯುದಯ, ಅಭಿವೃದ್ಧಿಗಳಲ್ಲಿ ತಮ್ಮ ಪಾತ್ರದ ಔಚಿತ್ಯ ಹಾಗೂ ತಮ್ಮ ಭೂಮಿಕೆಯ ಅವಶ್ಯಕತೆ ಹಾಗೂ ಪ್ರಾಮುಖ್ಯತೆಯನ್ನು ಅರಿಯಬೇಕು. ಈ ನಿಟ್ಟಿನಲ್ಲಿ ಸಕಾರಾತ್ಮಕ ಪ್ರಯತ್ನ ನಡೆಯುವುದೆಂದು ಆಶಿಸುತ್ತೇನೆ.

No comments:

Post a Comment