Wednesday, September 28, 2022

Sri Kailasanath Temple Ellora

ಶ್ರೀ ಕೈಲಾಸನಾಥ ದೇವಸ್ಥಾನ ಎಲ್ಲೋರಾ

“ದೇವಾಲಯದ ಸುತ್ತ ಸುತ್ತೋಣ ಬನ್ನಿ” 

“ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿ”ಯಲ್ಲಿ ಸ್ಥಾನ ಪಡೆದ, ಜಗದ್ವಿಖ್ಯಾತ ಎಲ್ಲೋರಾದ ಕೈಲಾಸನಾಥ ದೇವಸ್ಥಾನದ ಒಂದು ಕಿರುನೋಟ...

“ಹಿನ್ನೆಲೆ”

ವಿಶ್ವದ ಜೀವಕೋಟಿಗಳಲ್ಲಿ ಮಾನವನೇ ಅತೀ ಶ್ರೇಷ್ಠ ಎಂದು, ಆತನು ಮನಸ್ಸು ಮಾಡಿದಲ್ಲಿ ಯಾವ ಕೆಲಸವನ್ನಾದರೂ ಹಿಡಿದು ಸಾಧಿಸಬಲ್ಲ ಛಾತಿ ಆತನಿಗಿದೆ ಎಂಬುದು ಹಲವಾರು ಬಾರಿ ಸಾಬೀತುಗೊಂಡಿದೆ. ಇದು “ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಎಲ್ಲೋರ (ಎಲ್ಲಾಪುರ)ದಲ್ಲಿರುವ ಕೈಲಾಸನಾಥ” ದೇವಾಲಯ ನೋಡಿದರೆ ತಿಳಿಯುತ್ತದೆ. ಯಾವುದೇ ಕಟ್ಟಡವನ್ನು ಕೆಳಗಿನಿಂದ ಅಂದರೆ  ಅಡಿಪಾಯದಿಂದ ಪ್ರಾರಂಭ ಮಾಡಿ ತುದಿಯ ತನಕ ಕಟ್ಟಿ ಮುಗಿಸುತ್ತಾರೆ. ಆದರೆ ಈ ದೇವಾಲಯವು ಸಹ್ಯಾದ್ರಿ ಶ್ರೇಣಿಯ ಚÀರಣಾದ್ರಿ ಬೆಟ್ಟದ ಏಕಬಂಡೆಯಲ್ಲಿ ಕೊರೆದಿದ್ದಾಗಿದೆ. ಇದರ ಕೆಲಸವನ್ನು ಪರ್ವತದ ತುದಿಯಲ್ಲಿ ಪ್ರಾರಂಭ ಮಾಡಿ “ಯು” ಆಕಾರದಲ್ಲಿ ಇಡೀ ಬೆಟ್ಟವನ್ನು ಕೊರೆದು ನಿರ್ಮಿಸಲಾಗಿದೆ. ಬರೀ ಸುತ್ತಿಗೆ ಮತ್ತು ಚಾಣು ಉಪಯೋಗಿಸಿ ನಿರ್ಮಿಸಿದ ಈ ದೇವಸ್ಥಾನದ ನಿರ್ಮಾಣ ಮತ್ತು ಅದರ ಕಾಲದ ಬಗ್ಗೆ ಬಹಳಷ್ಟು ಊಹಾ ಪೋಹಗಳು ಇಂದಿಗೂ ನಡೆಯುತ್ತಲೇ ಇದೆ. ಇದನ್ನು ರಾಷ್ಟ್ರಕೂಟರ ರಾಜನಾದ “ಕೃಷ್ಣ” ಸುಮಾರು ಕ್ರಿ.ಶ. ೭೫೦ರ ಆಸುಪಾಸಿನಲ್ಲಿ ನಿರ್ಮಿಸಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಅಲ್ಲಿ ನೆಡೆದಿರುವ ಕೆಲಸದ ಪ್ರಮಾಣವನ್ನು ನೋಡಿದರೆ ಅದು ಬಹುಶಃ ಸುಮಾರು ಶತಮಾನಗಳಿಂದಲೇ ಆಗಿರಬಹುದೆಂದು ಕೆಲವರ ಅಭಿಪ್ರಾಯವಾಗಿದೆ. ಏಕೆಂದರೆ ಸುಮಾರು ನಾಲ್ಕು ಲಕ್ಷ ಟನ್ನ್ಗಳಷ್ಟು ಬಂಡೆಯ ಚೂರುಗಳನ್ನು ಅಲ್ಲಿಂದ ತೆಗದಿರಬಹುದೆಂದು ಲೆಕ್ಕಿಸಲಾಗಿದೆ. ಹೀಗೆ ಭೂಮಿಯ ಮೇಲಿನ ಅತ್ಯಂತ ಗಟ್ಟಿಯಾದ ಪದಾರ್ಥವಾದ ಗ್ರಾನೈಟ್ ಶಿಲೆಯನ್ನು ಸ್ವಲ್ಪವೂ ಆಕಾರಕ್ಕೆ ಚ್ಯುತಿಬಾರದಂತೆ ಕತ್ತರಿಸಿ ತೆಗೆಯುವುದು ಇಂದಿನ ಲೇಸರ್ ಕಟಿಂಗ್ ತಂತ್ರಜ್ಞಾನದಿಂದಲೂ ಅಷ್ಟು ಸುಲಭ ಸಾಧ್ಯವಲ್ಲ. ಅಂತಹುದರಲ್ಲಿ ಸಾವಿರಾರು ವರ್ಷಗಳ ಹಿಂದೆ ಇಡೀ ಬಂಡೆಯನ್ನು ಕಲಾತ್ಮಕವಾಗಿ ಕೆತ್ತಿದ ಅಂದಿನ ಶಿಲ್ಪಿಗಳ ನೈಪುಣ್ಯತೆ, ಅರ್ಪಣಾ ಮನೋಭಾವ, ಏಕಾಗ್ರತೆ ಇವುಗಳು ನಮ್ಮ ಊಹೆಗೂ ನಿಲುಕದ್ದು. ಅದರಲ್ಲೂ ವಿಶೇಷವಾಗಿ ಇಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ಮತ್ತು ನೆಲ ಮಟ್ಟದಿಂದ ಎರಡು ಅಡಿಗೂ ಕಡಿಮೆ ಎತ್ತರದಲ್ಲಿ ಕೊರೆಯಲಾಗಿರುವ ಹಲವಾರು ರಂಧ್ರಗಳು. ಇವುಗಳ ಕೊನೆ ಕಣ್ಣಿಗೆ ಕಾಣುವುದಿಲ್ಲ. ಕೈಗೆಟುಕದ ಆಳಕ್ಕೆ ಅಂತಹಾ ಗ್ರಾನೈಟ್ ಶಿಲೆಯನ್ನು ಸಾವಿರಾರು ವರ್ಷಗಳ ಹಿಂದೆ ಯಾವ ತಾಂತ್ರಿಕತೆ ಬಳಸಿ ಕೊರೆದಿರಬಹುದೆಂಬುದು ನಿಗೂಢವಾಗಿದೆ. 

ಮತ್ತೊಂದು ವಿಶೇಷವೆಂದರೆ, ಅಂದಿನ ದಿನಗಳಲ್ಲಿ ಇಲ್ಲಿ ಕೆತ್ತನೆ ಕಾರ್ಯಕ್ಕಾಗಿ ಬೆಳಕಿಗೆ ಏನು ವ್ಯವಸ್ಥೆ ಮಾಡಿಕೊಂಡಿರಬಹುದೆಂಬುದು. ಏಕೆಂದರೆ, ಈ ದಿನಗಳಲ್ಲೇ ಈ ದೇವಾಲಯದ ಒಳಗೆ ಬೆಳಕು ಕಡಿಮೆ ಎಂದೇ ಹೇಳಬಹುದು. ದೈವಕೃಪೆಯೊಂದೇ ಈ ಅಸಾಧ್ಯ ವಾದುದನ್ನು ಸಾಧ್ಯ ಮಾಡಿ ತನ್ನ ಇರುವಿಕೆಯನ್ನು ಪ್ರಕಟಿಸಿದ್ದಾನೆ. ಇದನ್ನು ಪರಶಿವನ ವಾಸಸ್ಥಾನವಾದ ಹಿಮಾಲಯದ ಕೈಲಾಸ ಪರ್ವತದ ಪ್ರತಿರೂಪವಾಗಿ ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಹೇಳಿದ್ದಾರೆ.

“ದೇವಾಲಯದ ಬಗ್ಗೆ ಮಾಹಿತಿ”

ಕೈಲಾಸನಾಥ ದೇವಾಲಯದ ಒಟ್ಟು ಉದ್ದ ೮೨ ಮೀಟರ್, ಅಗಲ ೪೬ ಮೀಟರ್. ಬಂಡೆಯ ಮೇಲಿಂದ ಸುಮಾರು ೧೫೦ ಅಡಿಗೂ ಹೆಚ್ಚು ಆಳ ಕೊರೆಯಲಾಗಿದೆ. ದೇವಾಲಯದ ಮುಖ್ಯ ದೇವತೆಯಾಗಿ ಲಿಂಗರೂಪಿಯಾದ ಶಿವನಿದ್ದು, ಅದರ ಎದುರಿಗೆ ನಂದಿಯಿದೆ. ದೇವಾಲಯಕ್ಕೆ ಹೋಲಿಸಿದರೆ ದೇವಾಲಯದ ಶಿಖರದ ಮೇಲಿನ ಕಳಶವು ಸ್ವಲ್ಪ ಚಿಕ್ಕದೆಂದು ಹೇಳಬಹುದು. ದೇವಾಲಯದ ಮುಂಭಾಗದಲ್ಲಿ ಆನೆಯ ಪ್ರತಿಮೆಗಳಿವೆ ಹಾಗೂ ದೇವಾಲಯದ ಸುತ್ತೆಲ್ಲಾ ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ಕೆತ್ತಲಾಗಿದೆ. ದೇವಾಲಯದ ತಳ ಭಾಗದಲ್ಲಿರುವ ಆನೆಗಳನ್ನು ಇಡೀ ದೇವಾಲಯದ ಭಾರವನ್ನು ಹೊತ್ತಿರುವುದೇನೋ ಎನ್ನುವಂತೆ ಕೆತ್ತಲಾಗಿದೆ. ಶಿವ ದೇವಾಲಯ ಮತ್ತು ನಂದಿ ಮಂಟಪ ಎರಡೂ ಸುಮಾರು ಏಳು ಮೀಟರ್‌ಗಳಷ್ಟು ಎತ್ತರವಿದೆ. ನಂದಿ ಮಂಟಪ ಮತ್ತು ಮುಖಮಂಟಪದ ಮಧ್ಯೆ ಒಂದು ಸೇತುವೆಯನ್ನು ನಿರ್ಮಿಸಲಾಗಿದೆ. ದೇವಾಲಯದ ಎದುರಿಗೆ ಇರುವ ಸ್ತಂಭವು ಸುಮಾರು ನೂರು ಅಡಿಗೂ ಹೆಚ್ಚು ಎತ್ತರವಿದೆ. ಇದನ್ನು ಪಲ್ಲವ ಮತ್ತು ಚಾಲುಕ್ಯ ಶೈಲಿಯ ಶಿಲ್ಪಿಗಳು ನಿರ್ಮಿಸಿದ್ದಾರೆ. ಆ ಕಾಲದಲ್ಲಿ ಸಾವಿರಾರು ಜನ ಶಿವಭಕ್ತರು “ತಾವು ಶಿವನ ಸಾನಿಧ್ಯದಲ್ಲೇ ಇರಬೇಕೆಂದು, ತಮಗೆ ನಿತ್ಯವೂ ಆ ಪರಶಿವನ ದರ್ಶನವಾಗಿ, ಆತನ ಧ್ಯಾನದಲ್ಲಿಯೇ ಮುಳುಗಿರಬೇಕೆಂದು” ಬಯಕೆ ವ್ಯಕ್ತಪಡಿಸಿದಾಗ ಈ ದೇವಾಲಯವನ್ನು  ನಿರ್ಮಿಸಿ ಆ ಶಿವನ ಕೈಲಾಸವನ್ನೇ ಇಲ್ಲಿಗೆ ತರಲಾಯಿತೆಂದು ಪ್ರತೀತಿ ಇದೆ. ಇದನ್ನು ನಿಜವಾದ ಭೂ ಕೈಲಾಸವೆಂದೇ ಕರೆಯುತ್ತಾರೆ. ಇದನ್ನು ನೋಡಿದವರು ಮಾನವ ನಿರ್ಮಿತ ಎನ್ನುವುದರ ಬಗ್ಗೆ ಸಂದೇಹ ವ್ಯಕ್ತ ಪಡಿಸುತ್ತಾರೆ. ಇದನ್ನು ದೈವನಿರ್ಮಿತವೆಂದು ಭಾವಿಸುತ್ತಾರೆ. ಇದಕ್ಕೆ ಸರಿಯಾಗಿ ದೇವಾಲಯದ ನಿರ್ಮಾಣದ ಬಗ್ಗೆ ಐತಿಹಾಸಿಕವಾದ ಯಾವುದೇ ದಾಖಲೆಗಳು ದೊರಕುವುದಿಲ್ಲ.

ಈ ದೇವಾಲಯವು ಇರುವ ಸ್ಥಳ :

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಎಲ್ಲೋರಾದಲ್ಲಿರುವ ೩೪ ಗುಹಾಂತರ ದೇವಾಲಯಗಳಲ್ಲಿ ಈ ದೇವಾಲಯವು ೧೬ನೇ ಗುಹೆಯಲ್ಲಿದೆ. ಔರಂಗಾಬಾದ್ ನಿಂದ ಸುಮಾರು ೩೦ ಕಿಲೋಮೀಟರ್ ಅಂತರದಲ್ಲಿರುವ ಇಲ್ಲಿಗೆ ಹೋಗಿ ಬರಲು ಬಸ್ ಮತ್ತು ಇತರೆ ವ್ಯವಸ್ಥೆಗಳಿವೆ. ಔರಂಗಾಬಾದ್ ಜಿಲ್ಲಾ ಸ್ಥಳವಾದುದರಿಂದ ಅಲ್ಲಿ ಉಳಿಯುವ ವ್ಯವಸ್ಥೆಯಿದೆ.

ಈ ದೇವಾಲಯದ ಮಹಿಮೆಯನ್ನು ಸಹಿಸದ ಮೊಗಲ್ ದೊರೆ ಔರಂಗಾಜೇಬನು ಇದರ ಮೇಲೆ ಹಲವಾರು ಬಾರಿ ದಾಳಿ ನಡೆಸಿದನೆಂದೂ ಮತ್ತು ಅಷ್ಟಕ್ಕೇ ತೃಪ್ತನಾಗದ ಅವನು ಸುಮಾರು ಒಂದು ಸಾವಿರ ಸೈನಿಕರನ್ನು ಬಿಟ್ಟು ದೇವಾಲಯವನ್ನು ದ್ವಂಸಗೊಳಿಸಲು ಬಿಟ್ಟಿದ್ದನೆಂದು ಹೇಳಲಾಗಿದೆ. ಆದರ ಸ್ವತಃ ಪರಶಿವನ ನೆಲೆಯಾದ ಈ ದೇವಾಲಯವು ಕೆಲವು ಭಾಗಗಳಲ್ಲಿ ಸಣ್ಣಪುಟ್ಟ ಹಾನಿಯಾಗಿದ್ದು ಬಿಟ್ಟರೆ ಮತ್ತೇನು ಹೆಚ್ಚಿನ ಹಾನಿಗೊಳಗಾಗಿಲ್ಲ. ಆದರೆ ಈ ದೇವಾಲಯದ ದ್ವಂಸದ ಯೋಚನೆ ಬಂದಾಗಿನಿಂದ, ಆತನಿಗೆ ಹಿನ್ನೆಡೆ ಆರಂಭವಾಗಿ ಇಡೀ ಸಾಮ್ರಾಜ್ಯವೇ ಪತನಗೊಂಡು ನಾಶವಾಯಿತು. ಇಂತಹ ಮಹಿಮೆಯ ಕ್ಷೇತ್ರಕ್ಕೆ ಒಮ್ಮೆಯಾದರೂ ಹೋಗಬೇಕೆನಿಸುತ್ತೆ ಅಲ್ಲವೇ...?

No comments:

Post a Comment