ಖಾನ್‌ತ್ರಯರು ಒಟ್ಟಿಗೆ ನಟಿಸಿದರೂ ರಾಕಿಭಾಯ್ ಬರೆದ ಆ ದಾಖಲೆ ಅಳಿಸಲು ಕಷ್ಟ!
'KGF-2' ಸಿನಿಮಾ ಸಾವಿರ ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಹಳೇ ಬಾಕ್ಸಾಫೀಸ್ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದ್ದು ಗೊತ್ತೇಯಿದೆ. ಕನ್ನಡ ಸಿನಿಮಾವೊಂದು ಹಿಂದಿಗೆ ಡಬ್ ಆಗಿ ೪೩೪ ಕೋಟಿ ರೂ. ಕಲೆಕ್ಷನ್ ಮಾಡುತ್ತೆ ಎಂದು ಕನ್ನಡ ಸಿನಿರಸಿಕರು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಸದ್ಯದ ಬಾಲಿವುಡ್ ಪರಿಸ್ಥಿತಿ ನೋಡುತ್ತಿದ್ದರೆ ರಾಕಿ ಭಾಯ್ ಬರೆದ ಅದೊಂದು ದಾಖಲೆ ಅಳಿಸಲು ಖಾನ್‌ತ್ರಯರ ಜೊತೆಗೆ ಹೃತಿಕ್ ರೋಷನ್, ಅಕ್ಷಯ್ ಕುಮಾರ್ ಒಂದೇ ಸಿನಿಮಾದಲ್ಲಿ ನಟಿಸಿದರೂ ಕಷ್ಟ ಅನ್ನಿಸ್ತಿದೆ. ಏಪ್ರಿಲ್ ೧೪ರಂದು ವಿಶ್ವದಾದ್ಯಂತ ತೆರೆಗಪ್ಪಳಿಸಿದ 'KGF-2' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ವಾರವಿಡೀ ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಂಡು ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ರಾಕಿಂಗ್ ಸ್ಟಾರ್ ಯಶ್ ಪರ್ಫಾರ್ಮೆನ್ಸ್ ನೋಡಿದವರು ದಂಗಾಗಿದ್ದರು. ಮಾಸ್ ಸಿನಿಮಾಗಳಿಗೆಲ್ಲಾ ರೋಲ್ ಮಾಡೆಲ್ ಎನ್ನುವಂತೆ ಚಿತ್ರವನ್ನು ಪ್ರಶಾಂತ್ ನೀಲ್ ತಿದ್ದಿ ತೀಡಿದ್ದರು. ಪ್ರತಿ ಚಿತ್ರದಲ್ಲಿ ಹೀರೊಗೆ ಒಂದೇ ಎಂಟ್ರಿ ಸೀನ್ ಇರುತ್ತೆ. ಆದರೆ 'ಕೆಜಿಎಫ್' ಸರಣಿಯ ಎರಡೂ ಸಿನಿಮಾಗಳಲ್ಲಿ ಪ್ರತಿ ಸೀನ್ ಹೀರೊ ಎಂಟ್ರಿಗೆ ಸಿಕ್ಕಷ್ಟೇ ಎಲಿವೇಷನ್ ಸಿಕ್ಕಿತ್ತು. ಹಾಲಿವುಡ್ ಸಿನಿಮಾಗಳ ರೇಂಜಿಗೆ ರಾಕಿಭಾಯ್ ಬಂಗಾರದ ಕಥೆಯನ್ನು ಹೇಳಲಾಗಿತ್ತು. ಥಿಯೇಟರ್‌ಗಳಲ್ಲಿ ಮಾತ್ರವಲ್ಲದೇ ಓಟಿಟಿಯಲ್ಲೂ ಸದ್ದು ಮಾಡಿದ ಸಿನಿಮಾ ಇತ್ತೀಚೆಗೆ ಟಿವಿಯಲ್ಲೂ ಪ್ರಸಾರವಾಗಿ ಪ್ರೇಕ್ಷಕರನ್ನು ರಂಜಿಸಿದೆ.
ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ೧೦೦ ಕೋಟಿ ರೂ. ಕಲೆಕ್ಷನ್ ಮಾಡುವುದಕ್ಕೂ ತಿಣುಕಾಡುವಂತಾಯಿತು. ಇನ್ನು ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನ ಯಾವುದೇ ಸಿನಿಮಾ ಸದ್ದು ಮಾಡ್ತಿಲ್ಲ. ತೆಲುಗಿನ 'ಪುಷ್ಪ' ಸಿನಿಮಾ ಕೂಡ ಹಿಂದಿ ಬೆಲ್ಟ್ನಲ್ಲಿ ಸಖತ್ ಕಲೆಕ್ಷನ್ ಮಾಡಿತ್ತು. ಸದ್ಯ ಯುವನಟ ನಿಖಿಲ್ ನಟನೆಯ ತೆಲುಗಿನ 'ಕಾರ್ತಿಕೇಯ'-೨ ಕೂಡ ಬಾಲಿವುಡ್‌ನಲ್ಲಿ 'ಲಾಲ್ ಸಿಂಗ್ ಚಡ್ಡಾ' ಹಾಗೂ 'ರಕ್ಷಾ ಬಂಧನ್' ಸಿನಿಮಾಗಳನ್ನು ಮೀರಿ ಕಲೆಕ್ಷನ್ ಮಾಡ್ತಿದೆ. ಇನ್ನು ರಾಕಿ ಭಾಯ್ ಬರೆದಿರುವ ಆ ದಾಖಲೆ ಅಳಿಸಲು ಬಿಟೌನ್ ಸ್ಟಾರ್‌ಗಳೆಲ್ಲಾ ಒಂದೇ ಚಿತ್ರದಲ್ಲಿ ನಟಿಸಬೇಕೆನೋ.
KGF-2 ಫಸ್ಟ್ ಡೇ ರೆಕಾರ್ಡ್ ಮುರಿಯೋದು ಕಷ್ಟ! ಕನ್ನಡ ಸಿನಿಮಾಗಳು ಹಿಂದಿಗೆ ಡಬ್ ಆಗಿ ಬಿಡುಗಡೆಯಾಗುವುದೇ ಕಷ್ಟ ಅನ್ನುವ ಕಾಲವೊಂದಿತ್ತು. ಆದರೆ `KGF-2' ಹಿಂದಿ ಬೆಲ್ಟ್ನಲ್ಲಿ ಮೊದಲ ದಿನವೇ ೫೪ ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಏಪ್ರಿಲ್ ೧೪ರಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದ ಸಿನಿಮಾ ೧೫೪ ಕೋಟಿ ರೂ. ದೋಚಿ ದಾಖಲೆ ಬರೆದಿತ್ತು. ಬಾಲಿವುಡ್ ಸೂಪರ್ ಸ್ಟಾರ್‌ಗಳ ಸಿನಿಮಾಗಳೇ ಮೊದಲ ದಿನ ೫೦ ಕೋಟಿ ರೂ. ಕಲೆಕ್ಷನ್ ಮಾಡಲು ಸರ್ಕಸ್ ಮಾಡ್ತಿವೆ. ಅಂಥಾದ್ದರಲ್ಲಿ ಕನ್ನಡ ಸಿನಿಮಾವೊಂದು ಹಿಂದಿಗೆ ಡಬ್ ಆಗಿ ೫೪ ಕೋಟಿ ರೂ. ಗಳಿಸುವುದು ಅಂದರೆ ತಮಾಷೆ ಮಾತಲ್ಲ. ಬಾಲಿವುಡ್‌ನಲ್ಲಿ ಮಲ್ಟಿಸ್ಟಾರರ್ ಸಿನಿಮಾಗಳು ಬಂದರೂ ಈ ದಾಖಲೆ ಅಳಿಸುವುದು ಕಷ್ಟ ಆಗಬಹುದು. ರಾಜಮೌಳಿ `RRR' ಚಿತ್ರಕ್ಕೂ ಇದು ಸಾಧ್ಯವಾಗಲಿಲ್ಲ.
ಹಿಂದಿಯಲ್ಲಿ ಒಟ್ಟು ಕಲೆಕ್ಷನ್ ೪೩೪ ಕೋಟಿ ರೂ. ಬಾಲಿವುಡ್ ಸೂಪರ್ ಸ್ಟಾರ್‌ಗಳ ಸಿನಿಮಾಗಳೇ ೧೦೦ ಕೋಟಿ ೨೦೦ ಕೋಟಿ ಕಲೆಕ್ಷನ್ ಮಾಡಲು ಸಾಧ್ಯವಾಗುತ್ತಿಲ್ಲ. ಅಂಥಾದ್ದರಲ್ಲಿ 'KGF-2' ಹಿಂದಿ ವರ್ಷನ್ ಒಟ್ಟು ೪೩೪ ಕೋಟಿ ರೂ. ಕೋಟಿ ಬಾಚಿತ್ತು. ಡಬ್ ಸಿನಿಮಾವೊಂದು ಉತ್ತರ ಭಾರತದಲ್ಲಿ ಈ ಪಾಟಿ ಪ್ರೇಕ್ಷಕರನ್ನು ರಂಜಿಸಿದ್ದು ಇದೇ ಮೊದಲು. 'ಬಾಹುಬಲಿ' ಸರಣಿಯನ್ನು ಮೀರಿ `KGF' ಸರಣಿ ಬಾಲಿವುಡ್ ಪ್ರೇಕ್ಷಕರ ಮನಗೆದ್ದಿದ್ದು ಸುಳ್ಳಲ್ಲ. ಒಟ್ನಲ್ಲಿ ಅಷ್ಟು ಸುಲಭವಾಗಿ ಯಾವುದೇ ಸಿನಿಮಾ ಮುರಿಯಲು ಸಾಧ್ಯವಾಗದಂತಹ ದಾಖಲೆಯನ್ನು ರಾಕಿಭಾಯ್ ಬರೆದಿದ್ದಾನೆ.
'KGF-2' ಒಟ್ಟು ಕಲೆಕ್ಷನ್ ೧೩೦೦ ಕೋಟಿ ರೂ. ಮೊದಲ ದಿನವೇ ೧೫೪ ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಒಟ್ಟಾರೆಯಾಗಿ ಪ್ರಪಂಚದಾದ್ಯಂತ ೧೩೦೦ ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿತ್ತು. ಭಾರತೀಯ ಚಿತ್ರರಂಗದಲ್ಲಿ ಎರಡೂ ಮೂರು ಸಿನಿಮಾಗಳು ಮಾತ್ರ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆ ಸಾಲಿಗೆ ಚಾಪ್ಟರ್-೨ ಕೂಡ ಸೇರಿಕೊಂಡಿದೆ. ಚಾಪ್ಟರ್-೩ ಬರುವ ಸಾಧ್ಯತೆಯಿದ್ದು, ಈ ಎಲ್ಲಾ ದಾಖಲೆಗಳನ್ನು ಆ ಸಿನಿಮಾ ಮುರಿಯುವ ನಿರೀಕ್ಷೆ ಇದೆ. ಯಶ್ ೧೯ಗಾಗಿ ಬಾಲಿವುಡ್ ಕಾತರ 'ಏಉಈ-೨' ನಂತರ ಯಶ್ ಜೊತೆ ಸಿನಿಮಾ ಮಾಡಲು ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಮುಗಿಬಿದ್ದಿದ್ದಾರೆ. ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಬರೀ ಸ್ಯಾಂಡಲ್‌ವುಡ್ ಮಾತ್ರವಲ್ಲ ಬಾಲಿವುಡ್‌ನಲ್ಲೂ ಇದೆ. ರಾಕಿ ಭಾಯ್ ಆಗಿ ಯಶ್ ಉತ್ತರ ಭಾರತದಲ್ಲಿ ಭಾರೀ ಕ್ರೇಜ್ ಕ್ರಿಯೇಟ್ ಆಗಿದೆ. ಹಾಗಾಗಿ ಯಶ್ ನಟಿಸುವ ಮುಂದಿನ ಸಿನಿಮಾಗಳೆಲ್ಲಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹಿಂದಿಗೂ ಡಬ್ ಆಗಿ ರಿಲೀಸ್ ಆಗಲಿದೆ.
No comments:
Post a Comment