Monday, September 26, 2022

A new possibility in the US-India alliance Hope on Joe Biden

ಅಮೆರಿಕ-ಭಾರತ ಮೈತ್ರಿಯಲ್ಲಿ ಹೊಸ ಶಕೆ ಜೋ ಬಿಡೆನ್ ಮೇಲೆ ಭರವಸೆ


ಡೆಮೊಕ್ರಾಟ್ ಪಕ್ಷದ ಜೋ ಬಿಡೆನ್ ಅವರು ಅಧ್ಯಕ್ಷ ಹಾಗೂ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷ ಆಗುವುದರೊಂದಿಗೆ ಅಮೆರಿಕದ ರಾಜಕಾರಣದಲ್ಲಿ ಹೊಸ ಶಕೆ ಆರಂಭವಾಗಿದೆ. ಪಕ್ಷ ನೀತಿಯಲ್ಲಿ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಭಿನ್ನವಾಗಿರುವ ಬೈಡೆನ್ ಕಾಲಾವಧಿಯಲ್ಲಿ ಅಂತಾರಾಷ್ಟ್ರೀಯ ಆಗು ಹೋಗುಗಳ ಜೊತೆಗೆ ಹೇಗೆ ಸಂಬಂಧ ಕಾಪಾಡಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ಹಾಗೆಯೇ ಭಾರತೀಯರಾದ ನಮಗೆ ಮುಖ್ಯವಾಗಿರುವುದು ಬೈಡೆನ್ ನಮ್ಮ ಜೊತೆಗೆ ಹೇಗಿರುತ್ತಾರೆ ಎಂಬುದು. ಉಪಾಧ್ಯಕ್ಷೆ ಕಮಲಾ ಭಾರತೀಯ ಮೂಲದವರಾಗಿರುವುದರಿಂದ ಈ ಕುತೂಹಲ ಇನ್ನಷ್ಟು ಗರಿಗೆದರಿದೆ.

ಕಳೆದ ನಾಲ್ಕು ವರ್ಷಗಳಲ್ಲಿ, ಡೊನಾಲ್ಡ್ ಟ್ರಂಪ್ ಬಹಳಷ್ಟು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಎಡವಿದ್ದರಾದರೂ, ಭಾರತದ ಜೊತೆಗೆ ಉತ್ತಮ ಸಂಬಂಧ ಕಾಪಾಡಿಕೊಂಡಿದ್ದರು. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಒಳ್ಳೆಯ ಮಿತ್ರತ್ವವಿತ್ತು. ಗಲ್ವಾನ್ ಮತ್ತು ಲಡಾಕ್ ಗಡಿಗಳಲ್ಲಿ ಚೀನಾ ನಮ್ಮನ್ನು ಕೆಣಕಿದಾಗ ಭಾರತದ ಪರ ನಿಂತಿದ್ದರು. ವಿದೇಶಾಂಗ ನೀತಿಯಲ್ಲಿ ರಿಪಬ್ಲಿಕನ್ನರಿಗಿಂತ ಡೆಮೊಕ್ರಾಟರು ಭಿನ್ನರಾದರೂ, ಬೈಡೆನ್ ಅವರ ನೀತಿ ದಾಖಲೆಯು ಹೇಳುವಂತೆ, ಅವರು ಭಾರತದ ಜೊತೆಗೆ ಎಲ್ಲ ವ್ಯೂಹಾತ್ಮಕ ಒಪ್ಪಂದಗಳನ್ನು ಮುಂದುವರಿಸಲಿದ್ದಾರೆ; ಹೀಗಾಗಿ ಇಂಡೊ ಪೆಸಿಫಿಕ್ ಭಾಗದಲ್ಲಿ ಭಾರತಕ್ಕೆ ಚೀನಾದಿಂದಾಗಿ ಯಾವುದೇ ತೊಂದರೆ ಉಂಟಾದರೂ ಬೈಡೆನ್ ನಮ್ಮ ಸಹಾಯಕ್ಕೆ ಇರುತ್ತಾರೆ ಎಂದು ಭಾವಿಸಬಹುದು. ಆದರೆ ಬೈಡೆನ್ ಯುದ್ಧೊ?ನ್ಮಾದಿಯಲ್ಲ. ಪಳಗಿದ ರಾಜನೀತಿಜ್ಞ ಹಾಗೂ ಮುತ್ಸದ್ದಿಯಾಗಿರುವ ಅವರಿಂದ ಈ ವಿಚಾರದಲ್ಲಿ ನಿಪುಣ ನಡೆಯನ್ನು ನಿರೀಕ್ಷಿಸಬಹುದು. ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಭಾರತದ ಜೊತೆಗೆ ಪರಮಾಣು ಒಪ್ಪಂದ ಮಾಡಿಕೊಳ್ಳುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಸ್ಥಾನ ಕಲ್ಪಿಸುವ ಬಗ್ಗೆಯೂ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಚೀನಾದಂಥ ಆಕ್ರಮಣಕಾರಿ, ವಿಸ್ತರಣಶೀಲ ದೇಶವನ್ನು ಪಕ್ಕದಲ್ಲಿಟ್ಟುಕೊಂಡಿರುವ ನಾವು ಅಮೆರಿಕದ ವಿದೇಶಾಂಗ ನೀತಿಯನ್ನು ನಮಗೆ ಪೂರಕವಾಗಿ ಬಳಸಿಕೊಳ್ಳುವುದೇ ಜಾಣ್ಮೆ.

ಟ್ರಂಪ್ ಆಡಳಿತದಲ್ಲಿ ಕೌಶಲಭರಿತ ಐಟಿ ಮುಂತಾದ ಭಾರತೀಯ ಉದ್ಯೊ?ಗಿಗಳಿಗೆ ವಿ?ಸಾ ಹಾಗೂ ಪೌರತ್ವದ ವಿಚಾರದಲ್ಲಿ ತೊಡಕು ಉಂಟಾಗಿತ್ತು. ಟ್ರಂಪ್ ಆಡಳಿತ ಒಳಬರುವ ವಿ?ಸಾಗಳನ್ನು ಕಡಿತಗೊಳಿಸಿತ್ತು ಹಾಗೂ ಗ್ರಿ?ನ್ ಕಾರ್ಡ್ ನೀಡುವಿಕೆಯನ್ನು ಸ್ಥಗಿತಗೊಳಿಸಿತ್ತು. ಬೈಡೆನ್ ಅವರು ಹಳೆಯ ನಿಯಮವನ್ನು ತೆಗೆದುಹಾಕಿ, ೫ ಲಕ್ಷಕ್ಕೂ ಅಧಿಕ ಭಾರತೀಯರಿಗೆ ಪೌರತ್ವ ಕಲ್ಪಿಸುವ ಮಾತನಾಡಿದ್ದಾರೆ. ಇದು ಐಟಿ ಮುಂತಾದ ವಲಯಗಳಲ್ಲಿ ಉತ್ಸಾಹದ ಹೊನಲನ್ನೆ? ಹರಿಸಬಹುದು. ಚೀನಾದ ಜೊತೆಗೆ ನಮ್ಮ ವ್ಯಾಪಾರ ವ್ಯವಹಾರ ಹಾನಿಗೀಡಾಗಿರುವುದರಿಂದ, ಅಮೆರಿಕದ ಜೊತೆಗಿನ ವಾಣಿಜ್ಯ ವ್ಯವಹಾರಗಳನ್ನು ವೃದ್ಧಿಸಿಕೊಳ್ಳುವ ಅವಕಾಶಗಳು ತೆರೆದಿವೆ. ಜಗತ್ತಿನ ಅತಿ ಹಳೆಯ ಮತ್ತು ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿರುವ ಅಮೆರಿಕ ಮತ್ತು ಭಾರತ ಸಮಾನ ಗಣರಾಜ್ಯ ಮೌಲ್ಯಗಳನ್ನು ಹಂಚಿಕೊಂಡಿವೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ, ಕಾನೂನಿನಡಿಯಲ್ಲಿ ಎಲ್ಲರಿಗೆ ಸಮಾನತೆ, ಅಭಿವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ‍್ಯ ಇತ್ಯಾದಿ. ಈ ಮೌಲ್ಯಗಳು ಉಭಯ ದೇಶದ ಇತಿಹಾಸದಲ್ಲಿ ಹಾಸು ಹೊಕ್ಕಾಗಿದ್ದು ಭವಿಷ್ಯದಲ್ಲೂ ಹಾಗೇ ಮುಂದುವರಿಯಲಿವೆ ಎಂದು ಬೈಡೆನ್ ಹೇಳಿದ್ದಾರೆ.

ಸೋವಿಯತ್ ರಷ್ಯಾದ ಪತನದ ಬಳಿಕ ಭಾರತಕ್ಕೆ ಆಪ್ತಮಿತ್ರನಾಗಿ ನಿಂತಿರುವ ದೊಡ್ಡ ದೇಶ ಎಂದರೆ ಅಮೆರಿಕ. ಹಾಗೆಯೇ ಅಮೆರಿಕಕ್ಕೂ ಭಾರತದ ಅಗತ್ಯವಿದೆ. ದಕ್ಷಿಣ ಏಷ್ಯಾದಲ್ಲಿ ಚೀನಾದ ಆರ್ಭಟ ತಡೆಯಲು ಭಾರತದಂಥ ಒಬ್ಬ ಆಪ್ತಮಿತ್ರ ಅದಕ್ಕೆ ಬೇಕು; ಭಾರತದ ೧೩೦ ಕೋಟಿ ಜನತೆಯ ಗ್ರಾಹಕಶಕ್ತಿ ಬೇಕು; ಹಾಗೆಯೇ ಇಲ್ಲಿನ ಕೌಶಲಭರಿತ ದುಡಿಯುವ ಶಕ್ತಿಯೂ ಅಮೆರಿಕಕ್ಕೆ ಅಗತ್ಯ. ಇದನ್ನೆಲ್ಲ ಚೆನ್ನಾಗಿಯೇ ಬಲ್ಲ ಬೈಡೆನ್ ಭಾರತದ ಜೊತೆ ಅತ್ಯುತ್ತಮ ಮೈತ್ರಿ ಕಾಪಾಡಿಕೊಳ್ಳಬಲ್ಲರು; ನಾವೂ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಬೇಕಿದೆ.

No comments:

Post a Comment