ಅಮ್ಮ ಮತ್ತು ಆ ೧೦೮ ದಿನಗಳು
ಅಂದು ಅಮ್ಮನ ದಿನದ ಆನಂದದ ಆಚರಣೆ. ಈ ಮಹಾತಾಯಿ ತಮ್ಮ ಮಕ್ಕಳನ್ನು ನವ ಮಾಸಗಳು ಹೆತ್ತು ಹೊತ್ತು ಜಗತ್ತು ನೋಡುವಂತೆ ಮಾಡಿದ ಮಹಾಮುತ್ತು. ನಾವು ಪಂಚತಾರಾ ಹೋಟೆಲ್ ಗಳಿಗೆ ಹೋಗಿ ಸಾವಿರಾರು ರೂಪಾಯಿ ತೆತ್ತು ರುಚಿ ರುಚಿಕರವಾದ ತಿಂಡಿ-ತಿನಿಸು-ಭರ್ಜರಿ ಭೋಜನ ಮಾಡುತ್ತೇವೆ. ಆದರೆ ಅಮ್ಮ ನೀಡುವ ತುಪ್ಪದ ಅನ್ನದ ಆ ಕೈ ತುತ್ತು ಕೊಡುವ ತಾಕತ್ತು ಜಗತ್ತಿಗೆ ಗೊತ್ತು.
ಅಮ್ಮನಿಗೆ ಅನೇಕ ಮಕ್ಕಳಿದ್ದರಂತೂ ಕೊಡುವ ಆಹಾರದಲ್ಲಾಗಿ, ನೀಡುವ ಪ್ರೀತಿಯಲ್ಲಾಗಲಿ ಈ ಮಕ್ಕಳ ನಡುವೆ ಹೆಚ್ಚು ಕಡಿಮೆಯಾದರೂ ಅಮ್ಮನನ್ನು ನಿಂದಿಸುವ , ಪ್ರೀತಿಯಿಂದ ಹೊಡೆಯುವ, ಮುನಿಸಿಕೊಳ್ಳುವ ವಿಷಯಗಳು ಸಹಜ. ಆದರೆ ಮಕ್ಕಳ ಈ ಯಾವುದೇ ಸಕಾರಾತ್ಮಕ ಮತ್ತು ನಕಾರಾತ್ಮಕ ವರ್ತನೆಗಳಿಗೆ ತಲೆ ಕೆಡಿಸಿಕೊಳ್ಳದೆ ತನ್ನ ಮಕ್ಕಳ ಏಳಿಗೆ ಬಗ್ಗೆ ಚಿ೦ತಿಸುವ ಏಕೈಕ ಶಕ್ತಿಯೇ ಅಮ್ಮ.
ಅಮ್ಮ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದ ಮೇಲೆ ಕೆಲವರು ಅಮ್ಮ ಇತರ ಮಕ್ಕಳಂತೆ ನನ್ನನ್ನು ಪ್ರೀತಿಸುತ್ತಿಲ್ಲ, ಆಸ್ತಿ ಅಂತಸ್ತುಗಳಲ್ಲಿ ತನಗಿಂತ ಬೇರೆ ಮಕ್ಕಳಿಗೆ ಹೆಚ್ಚು ಒತ್ತು ಕೊಡುತ್ತಾಳೆ ಎಂದು ನಿಂದಿಸುವವರು ಇದ್ದಾರೆ,
ಮುನಿಸಿಕೊಂಡು ಅಮ್ಮನಿಂದ ದೂರವಾಗಿರುವವರು ಇದ್ದಾರೆ. ಕೆಲವು ಕರ್ಮಠರು ಹೆತ್ತ ತಾಯಿಯನ್ನೇ ಬಡಿದವರು ಇದ್ದಾರೆ. ಆದರೆ ಈ ರೀತಿ ಬಡಿಯುವ ಕೈಗಳಿಗೆ, ಕಾಲುಗಳಿಗೆ ಶಕ್ತಿ ತುಂಬಿದ್ದೆ ಅಮ್ಮ ಎಂಬ ಸತ್ಯ ಆ ಕ್ಷಣದಲ್ಲಿ ಅರಿವಿಗೆ ಬರುವುದಿಲ್ಲ.
ಮುತ್ತು ನೀಡುವವಳು ಪಕ್ಕಕ್ಕೆ ಬಂದಾಗ , ಈ ಮುತ್ತು ನೀಡುವವಳಿಗೆ ಕಾರಣವಾದ ಮಗನನ್ನು ಹೆತ್ತು ಕೊಟ್ಟವಳೇ ನನ್ನ ತಾಯಿ ಎಂದು ಮರೆತುಬಿಡುತ್ತಾರೆ.
ಕ್ಷಣಿಕ ಸುಖಕ್ಕಾಗಿ, ಕಟ್ಟಿಕೊಂಡವಳ ಹಠಕ್ಕೆ ಮಣಿದು ಅಮ್ಮನನ್ನೇ ದೂರ ಮಾಡುವವರು , ಅಮ್ಮನಿಗೆ ಕೊಡಬಾರದ ಕಷ್ಟ ಕೊಡುವವರು ಈ ಭೂಮಿ ತಾಯಿಗೆ ಭಾರವಲ್ಲದೆ ಮತ್ತೇನು?
ಸಿಟ್ಟು ಬಂದಾಗ, ಮತ್ತಾವುದೋ ಕಾರಣಕ್ಕೆ ಅಮ್ಮನನ್ನು ನಿಂದಿಸುತ್ತೇವೆ, ಕೆಲವು ಕರ್ಮಠರಂತೂ ಹಿಡಿದು ಬಡಿಯುತ್ತಾರೆ. ಆದರೆ ಅಮ್ಮ ಆ ಕ್ಷಣದಲ್ಲಿ ಮಾನಸಿಕ ಮತ್ತು ದೈಹಿಕ ನೋವು ಅನುಭವಿಸಲಾರದೆ ನಿಂದಿಸುತ್ತಾಳೆ.
ಆದರೆ ಸಮಾಧಾನವಾದ ಮೇಲೆ ಅಯ್ಯೋ ನನ್ನ ಬುದ್ಧಿಗೆ ಏನಾಗಿತ್ತು ನಾನೆತ್ತ ಮಗನನ್ನೇ ಬಯ್ದನಲ್ಲ, ನನ್ನ ಶಾಪ ತಟ್ಟಿ ನನ್ನ ಮಗ ಎಲ್ಲಿ ಕಷ್ಟಕ್ಕೆ ಸಿಲುಕುತ್ತಾನೋ ಎಂದು ಮಮ್ಮಲ ಮರುಗುತ್ತಾಳೆ. ನನ್ನ ಮಕ್ಕಳಿಗೆ ನನ್ನ ಶಾಪ ತಟ್ಟದ೦ತೆ ಕಾಪಾಡಪ್ಪ ಎಂದು ದೇವರಲ್ಲಿ ಬೇಡಿಕೊಳ್ಳುತ್ತಾಳೆ.
ಅಮ್ಮ ಹಲವಾರು ಸಲ್ಲದ ಕಾರಣಗಳಿಗೆ ಬೇರೆಯವರಿಗೆ ರಾಕ್ಷಸಿ ಆಗಿರಬಹುದು. ಹೆತ್ತ ಮಕ್ಕಳಿಗೂ ಇಂಥ ಅಮ್ಮನ ಬಗ್ಗೆ ಅಸಮಾಧಾನ ಇರಬಹುದು. ಆದರೆ ಹೆತ್ತವರ ಪಾಲಿಗೆ ಅಮ್ಮನೇ ನಿಜವಾದ ದೇವತೆ.
ಅಂಥ ಅಮ್ಮನನ್ನು ಯಾವುದೇ ಕಾರಣಕ್ಕೆ ದೂರ ತಳ್ಳಿದರೆ ಈ ಜನ್ಮದಲ್ಲಿ ಅಲ್ಲದಿದ್ದರೂ ಮುಂದಿನ ಜನ್ಮದಲ್ಲಿ ಅದರ ದುಷ್ಪಲವನ್ನು ಖಂಡಿತಾ ಅನುಭವಿಸಬೇಕಾಗುತ್ತದೆ.
ಕಣ್ಣ ಮುಂದೆ ಇರುವ ಹಣ, ಐಶ್ವರ್ಯ, ಸುಖದ ಸುಪ್ಪತ್ತಿಗೆಯ ಸುಖ ಜೀವನವೇ ಸತ್ಯ ಎಂದು ಹೆತ್ತ ತಾಯಿಯನ್ನು ಹೆಂಡತಿಯ ಮಾತಿಗೋ , ಹಣ ಕೊಡುವಲ್ಲಿ ತಾರತಮ್ಯ ಮಾಡುತ್ತಿದ್ದಾಳೆ ಎಂದೋ..ಇವಳನ್ನು ನೋಡಿಕೊಳ್ಳುವುದೇ ದೊಡ್ಡ ಭಾರ ಎಂದೋ. ಕತ್ತು ಹಿಡಿದು ಆಚೆ ತಳ್ಳಿದರೆ..
ಅಂಥವರನ್ನು ನವ ಮಾಸ ಉದರದಲ್ಲಿ ಇಟ್ಟುಕೊಂಡ ಭಾರದ ಬಗ್ಗೆಯೂ ಇಂಥವರು ಯೋಚಿಸಬೇಕು. ಅಮ್ಮ ಎಂಬ ಜೀವವನ್ನುಆಕೆಯ ಅಂತ್ಯದವರೆಗೂ ಜತನದಿಂದ ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಆದ್ಯ ಕರ್ತವ್ಯ
ಈ ಮಹಾತಾಯಿ. ನನ್ನ ಪಾಲಿಗೆ ಸಾಕ್ಷಾತ್ ಗೌರಮ್ಮ. ನಮ್ಮಮ್ಮ. ನನಗೆ ಕೊಟ್ಟ ಶಿಕ್ಷೆ ಇದೆಯಲ್ಲ ನಮ್ಮ ಮನೆಯಲ್ಲಿ ನನ್ನ ಅಣ್ಣನಿಗಾಗಲಿ, ತಮ್ಮನಿಗಾಗಲಿ ಕೊಟ್ಟಿಲ್ಲ. ಕಾರಣ ಚಿಕ್ಕ ವಯಸ್ಸಿನಿಂದಲೇ ನಾನು ಪುಂಡ. ಏನಾದರೂ ಒಂದು ಜಗಳ ಕಾಯುತ್ತಿದ್ದೆ. ಆಟ ಆಡಲು ಹೋದಾಗ ಯಾರ ಹತ್ತಿರವಾದರೂ ಜಗಳ ಮಾಡಿಕೊಂಡು ಬರುತ್ತಿದೆ. ಆಗ ನಮ್ಮಮ್ಮನಿಗೆ ಕೆಲವರು ದೂರು ನೀಡುತ್ತಿದ್ದರು.
ಆಗ ನಮ್ಮಮ್ಮ ನನ್ನನ್ನು ಹಿಡಿದು ಸಿಕ್ಕಾಬಟ್ಟೆ ಹೊಡೆಯುತ್ತಿದ್ದರು. ಒಮ್ಮೆ ನನ್ನ ಅಮ್ಮನ ಅಕ್ಕ ಅಂದರೆ ನನ್ನ ಶಾ೦ತಮ್ಮ ದೊಡ್ಡಮ್ಮನ ಮನೆಯಲ್ಲಿ ಕಿಟಕಿಯ ಮೂಲಕ ಬೆಲ್ಲ ಕಳ್ಳತನ ಮಾಡಿದೆ.
ಆಗ ಈ ದೊಡ್ಡಮ್ಮ ನಮ್ಮ ಮನೆಗೆ ಬಂದು ನಿನ್ನ ಮಗ ನಮ್ಮ ಮನೆಯ ಕಿಟಕಿಯಿಂದ ಬೆಲ್ಲ ಕದ್ದುಕೊಂಡು ತಿಂದ ಎಂದು ದೂರು ನೀಡಿದರು.
ಆಗ ನಮ್ಮಮ್ಮ ನಾನು ಮನೆಗೆ ಬರುವುದನ್ನೇ ಕಾಯುತ್ತಾ ಇದ್ದರು, ನಾನು ಬಂದದ್ದೇ ತಡ ದೊಡ್ಡಮ್ಮನ ಮನೆಗೆ ಹೋಗಿ ಬೆಲ್ಲ ಕದ್ದು ತಿನ್ನುತ್ತಿಯಾ..ನಮ್ಮ ಮನೆಯಲ್ಲಿ ಬೆಲ್ಲಕ್ಕೇನು ಬರ ಬಂದಿದೆಯಾ..ಎಂದು
ಕಂಬಕ್ಕೆ ಕಟ್ಟಿ ಕೋಲಿನಿಂದ ಹೊಡೆದದ್ದೇ ಹೊಡೆದದ್ದು ಮಾಡಿದರು. ಆಗ ನಮ್ಮ ತಂದೆ ನನಗೆ ಹೊಡೆಯುವುದನ್ನು ನೋಡಲಾರದೆ ಅಮ್ಮನನ್ನು ಬೈಯ್ದು ನನ್ನನ್ನು ಬಿಡಿಸಿದರು..
ಹೀಗೆ ಒಂದಾ ಎರಡಾ ನಾನು ಮಾಡುತ್ತಿದ್ದ ಸಲ್ಲದ ನಡವಳಿಕೆಗಳಿಗೆ ಸಿಕ್ಕಾ ಬಟ್ಟೆ ಏಟು ತಿಂದಿದ್ದೇನೆ. ಒಮ್ಮೆ ತೋಟದಲ್ಲಿ ಪಕ್ಕದ ಮನೆಯವರ ತೋಟಕ್ಕೆ ಹೋಗಿ ಮಾವಿನ ಮರ ಹತ್ತಿ ಮಾವಿನ ಹಣ್ಣು ಕದ್ದು ತಿಂದ ವಿಷಯ ಗೊತ್ತಾಯಿತು.
ನಮ್ಮಮ್ಮ ಬರಲಿ ಮನೆಗೆ ಅವನಿಗೆ ಇವತ್ತು ಇದೆ ಎಂದು ಹೇಳಿದ್ದು ನನ್ನ ಬಗ್ಗೆ ದೂರು ಕೊಟ್ಟಿದ್ದ ವ್ಯಕ್ತಿಗೆ ಹೇಳಿದ್ದಾರೆ. ಆತ ನನಗೆ ತೋಟಕ್ಕೆ ಬರುವ ದಾರಿಯಲ್ಲಿ ಸಿಕ್ಕಾಗ "ಇವತ್ತು ನಿಮ್ಮಮ್ಮನಿಂದ ನಿನಗೆ ಮಾರಿಹಬ್ಬ ಇದೆ ಹೋಗು ಮಾವಿನಹಣ್ಣು ಕದಿಯುತ್ತಿಯಾ ಎಂದ".
ಓ...ಅಮ್ಮನಿಗೆ ಈ ವಿಷಯ ಹೇಳಿಬಿಟ್ಟಿದ್ದಾನೆ. ಇವತ್ತು ಮನೆಗೆ ಹೋದರೆ ಬಿಸಿ ಬಿಸಿ ಕಜ್ಜಾಯ ಗ್ಯಾರಂಟಿ ಎಂದು ಭಯಪಟ್ಟು ರಾತ್ರಿ ನಮ್ಮ ಎಂ ಎಲ್ ಎ ದೊಡ್ಡಪ್ಪನ ಮನೆಯಲ್ಲೇ ಇದ್ದು ಬಿಟ್ಟೆ. ನಮ್ಮ ದೊಡ್ಡಪ್ಪ ಯಾಕೋ ಯಾರ ಹತ್ತಿರವಾದರೂ ಜಗಳ ಮಾಡಿಕೊಂಡೆಯಾ? ಎಂದು ಕೇಳಿದರು.
ಇಲ್ಲ ಪಕ್ಕದ ತೋಟದಲ್ಲಿ ಮಸವಿನ ಹಣ್ಣು ಕದ್ದು ತಿಂದೆ. ಅದಕ್ಕೆ ಅಮ್ಮ ಹೊಡೆಯುತ್ತಾರೆ. ಮನೆಗೆ ಹೋಗಲ್ಲ ಇಲ್ಲೇ ಮಲಗುತ್ತೇನೆ ಎಂದೇ. ಆಯಿತು ಇಲ್ಲೇ ಊಟ ಮಾಡಿ ಮಲಗಿಕೊ ಎಂದರು.
ಆದರೆ ನಮ್ಮಮ್ಮ ಎಂ ಎಲ್ ಎ ಮನೆಗೆ ಹೊಂದಿಕೊಂಡಿದ್ದ ಕಿಟಕಿಯ ಮೂಲಕ ಹೊಡೆಯಲ್ಲ ಬಾರೋ ಎಂದು ಕರೆದರೂ ನಾನು ಅವತ್ತು ಹೋಗಲಿಲ್ಲ.
ಆದರೆ ಮರುದಿನ ಭಯದಿಂದಲೇ ಮನೆಗೆ ಹೋದೆ. ಸ್ನಾನ ಪೂಜೆ ಮಾಡಿಕೊಂಡು ಬಾ ತಿಂಡಿ ಮಾಡಿದ್ದೇನೆ ತಿಂಡಿ ತಿನ್ನುವೆಯಂತೆ ಎಂದು ಕರೆದರು ನಮ್ಮಮ್ಮ.
ಆಗ ನನಗೆ ಭಯ ಹೋಯಿತು. ಆದರೆ ಅಮ್ಮ ತಿಂಡಿ ಮಾಡುವಾಗ ಒಲೆಯಲ್ಲಿ ಕಬ್ಬಿಣದ ತುಂಡು ಬಿಸಿ ಮಾಡಿ ಇಟ್ಟುಕೊಂಡಿದ್ದು ನನ್ನ ಗಮನಕ್ಕೆ ಬರಲಿಲ್ಲ. ನಾನು ತಿಂಡಿ ತಿಂದು ಇನ್ನೇನು ಎದ್ದು ಹೋಗಬೇಕು ಎನ್ನುವಷ್ಟರಲ್ಲಿ ಬಿಸಿ ಮಾಡಿದ ಆ ಕಬ್ಬಿಣದ ಸಲಾಕೆಯಿಂದ ನನ್ನ ಪಾದಕ್ಕೆ ಇಟ್ಟರು. ಕಂಡೊರೋ ಮರ ಹತ್ತಿ ಮಾವಿನಹಣ್ಣು ಕದಿಯುತ್ತಿಯಾ? ಎಂದು ಶಿಕ್ಷೆ ಕೊಟ್ಟೆ ಬಿಟ್ಟರು.
ಇನ್ನೊಂದು ಮರೆಯಲಾರದ ಘಟನೆ ಎಂದರೆ ನಮ್ಮ ಅಮ್ಮ ನನ್ನನ್ನು ಬಯ್ದರು ಎಂಬ ಕಾರಣಕ್ಕೆ ನಾನು ನೀನು ಸರಿಯಿಲ್ಲ ನನಗೆ ಮಾತ್ರ ಯಾಕೆ ಹೊಡೆಯುತ್ತಿ, ಅಣ್ಣ ತಮ್ಮನಿಗೆ ಯಾಕೆ ಹೊಡೆಯಲ್ಲಾ? ಎಂದು ಕೇಳಿದ್ದೆ.
ನನ್ನನ್ನೇ ಸರಿಯಿಲ್ಲ ಆನ್ನುತ್ತೀಯಾ ಎಂದು ಗಾರೆ ನೆಲದ ಮೇಲೆ ಹಾಕಿಕೊಂಡು ನನ್ನನ್ನು ತುಳಿದದ್ದೇ ತುಳಿದದ್ಫು ಮಾಡಿದರು. ಆಗಲೂ ನಮ್ಮ ತಂದೆ ನಮ್ಮಮ್ಮನನ್ನು ಬೈಯ್ದು ಮಕ್ಕಳನ್ನು ಯಾರಾದರೂ ಈ ರೀತಿ ಹೊಡೆಯುತ್ತಾರಾ ಎಂದು ನನ್ನನ್ನು ಕರೆದುಕೊಂಡು ಹೋಗಿ ಪಕ್ಕದಲ್ಲಿ ಸಮಾಧಾನ ಮಾಡಿ ಮಲಗಿಸಿದರು.
ಅದೇ ಕೊನೆ ಅವತ್ತಿನಿಂದ ನಾನು ಅಮ್ಮನಿಗೆ ಸಲ್ಲದ ತಪ್ಪುಗಳನ್ನು ಮಾಡುವುದನ್ನು ಬಿಡುತ್ತಾ ಬಂದೆ.
ಒಂದು ವಿಗ್ರಹ ಸುಂದರಮೂರ್ತಿಯಾಗಿ ರೂಪ ತಾಳಬೇಕಾದರೆ ಉಳಿಗಳ ಅನೇಕ ಪೆಟ್ಟು ತಿನ್ನಲೇ ಬೇಕು. ಹಾಗೆ ನಮ್ಮಮ್ಮ ಸರಿ ದಾರಿಯಲ್ಲಿ ಹೋಗಲು ಕೊಟ್ಟ ಪೆಟ್ಟುಗಳೇ "ನ್ಯಾಯ ನೀತಿ ಧರ್ಮ",ದ ಮಾರ್ಗದಲ್ಲಿ ಸಾಗಲು ಇದುವರೆಗೂ ದಾರಿದೀಪ ಆಗಿದೆ.
ಕೊನೆಯದಾಗಿ, ಹೇಳಬೇಕೆಂದರೆ ಅಂದು ನಾನು ಮೈಸೂರಿನಲ್ಲಿ ಕಾನೂನು ವೃತ್ತಿ ಪ್ರಾಕ್ಟೀಸ್ ಮಾಡುತ್ತಿದ್ದೆ. ಯಾವುದೋ ಕೆಲಸದ ನಿಮಿತ್ತ ಬೆಳಿಗ್ಗೆ ಬೆಂಗಳೂರಿಗೆ ಬಂದು ರಾತ್ರಿ ಮೈಸೂರಿಗೆ ರೈಲಲ್ಲಿ ಹೋಗುತ್ತಿದ್ದೆ. ಮುಂಜಾನೆ ೪ ಗಂಟೆ ಗಾಢವಾದ ನಿದ್ದೆ ಬಂದಿತ್ತು. ಈ ಸಮಯದಲ್ಲಿ ರೈಲ್ ನಲ್ಲಿ ಯಾರೋ ಗಲಾಟೆ ಮಾಡುತ್ತಿದ್ದಾರೆ. ಸಡನ್ನಾಗಿ ಎದ್ದು ನೋಡಿದರೆ ರೈಲು ಒಳಗಡೆ ಕೆಲವರು ಕೂಗಾಡುತ್ತಿದ್ದಾರೆ,
ಅಂದು ಭೀಮನ ಅಮವಾಸೆ ನರಹಂತಕ ವೀರಪ್ಪನ್ ಡಾ. ರಾಜ್ ಕುಮಾರ್ ಅವರನ್ನು ಹಿಡಿದುಕೊಂಡು ಕಾಡಿಗೆ ಹೋಗಿದ್ದ. ಇದರಿಂದಾಗಿ ಕೆರಳಿದ್ದ ಜನರು ಹೊರಗಡೆ ಕೆಲವರು ಬೆಂಕಿ ಹಿಡಿದುಕೊಂಡು ಕೂಗಾಡುತ್ತಿದ್ದದ್ದು ಸಹ ಕಂಡು ಬಂತು.
ಕೂಡಲೇ ನನಗೆ ಗಾಬರಿಯಾಗಿ ಇನ್ನೇನು ರೈಲು ನಿಲ್ದಾಣದ ಸಮೀಪ ರೈಲು ಬರುತ್ತಿದ್ದ೦ತೆ ರೈಲಿನಿಂದ ನಿಜವಾಗಿಯೂ ಚಲಿಸುತ್ತಿದ್ದ ರೈಲಿನಿಂದ ಜಿಗಿದುಬಿಟ್ಟೆ.
ಜಂಪ್ ಮಾಡಿದ್ದಕ್ಕೆ ನನ್ನ ಬಲಗಾಲು ಟ್ವಿಸ್ಟ್ ಆಯಿತು. ಎದ್ದೇಳಲು ಆಗಲಿಲ್ಲ. ಕೂಡಲೇ ಅಲ್ಲಿದ್ದ ರೈಲ್ವೆ ಕೆಲಸಗಾರರನ್ನು ಕರೆದೆ. ಅವರು ನನ್ನನ್ನು ಎತ್ಯಿಕೊಂಡು ಹೋಗಿ ರೈಲ್ವೆ ಸ್ಟೇಶನ್ ಹತ್ತಿರ ಇದ್ದ ಆಟೋದಲ್ಲಿ ಕೂರಿಸಿದರು. ಅಲ್ಲದೆ ಇವರನ್ನು ಅವರಿರುವ ಸ್ಥಳವನ್ನು ತೋರಿಸುತ್ತಾರೆ ಅಲ್ಲಿ ಇಳಿಸಿ ಅಂದರು.
ಆಗ ನಾನು ಬೇಡ ಕಾಲು ಸರಿ ಮಾಡುವವರು ಯಾರು ಇದ್ದಾರೆ ಎಂದು ಕೇಳಿದೆ. ಆಗ ಅವರು ಅವರು ಬಾಗಿಲು ತೆಗೆಯುವುದೇ ೮ ಗಂಟೆಗೆ ಎಂದರು. ಪರವಾಗಿಲ್ಲ ಅಲ್ಲಿಯ ವರೆಗೂ ಆ ಅಂಗಡಿಯ ಮುಂದೆ ಕುಳಿತಿರುತ್ತೇನೆ ಎಂದೇ. ಆಗ ಆಟೋದವನು ಕಾಲು ಸರಿಮಾಡುವವರ ಅಂಗಡಿ ಮುಂದೆ ಆಟೋ ನಿಲ್ಲಿಸಿ ನನ್ನನ್ನು ಅಂಗಡಿಯ ಮುಂದೆ ಕೂರಿಸಿದರು.
ಆಗ ನಾನು ಆಟೋದವರಿಗೆ ಕಾಲು ಸರಿ ಮಾಡುವವರೆಗೂ ಇಲ್ಲೇ ಇರಿ ಮತ್ತೆ ಜಯನಗರದಲ್ಲಿ ನಾನಿರುವ ರೂಮ್ ಗೆ ನಿಮ್ಮ ಆಟೋದಲ್ಲಿ ಬಿಡಿ. ವೈಟಿಂಗ್ ಚಾರ್ಜ್ ಕೊಡುತ್ತೇನೆ ಎಂದೇ. ಆಗಲಿ ಎಂದು ನನ್ನ ಜೊತೆ ಇದ್ದೆ ಬಿಟ್ಟರು.
೮ ಗಂಟೆಗೆ ಕಾಲು ತಿಕ್ಕುವವರು ಬಂದು ಅಂಗಡಿ ಬಾಗಿಲು ತೆಗೆದರು.ಆ. ವೇಳೆಗಾಗಲೇ ಹತ್ತು ಮಂದಿ ಕೈ ಕಾಲು ಮುರಿದುಕೊಂಡ ಚಿಕಿತ್ಸೆ ಪಡೆಯುವವರು ಬಂದಿದ್ದರು
ನನ್ನನ್ನು ನೋಡಿದ ಇವರುಗಳು ಈ ಹುಡುಗನ ಕಾಲು ಮುರಿದುಕೊಂಡು ಸಿಕ್ಕಾಪಟ್ಟೆ ಊದಿದೆ ಮೊದಲು ಇವರಿಗೆ ಹೋಗಲು ಬಿಡೋಣ ಎಂದು ಒಳಗೆ ಕಳುಹಿಸಿದರು.
ಆ ಕಾಲು ಸರಿಮಾಡುವವನು ಮೊದಲು ಏನಾಯಿತು, ಎಲ್ಲಿ ಆಯಿತು ಎಂದು ಕೇಳಿ ಕಾಲು ಮುಟ್ಟಿ ನೋಡಿದ. ಓ..ದೇವರೇ ಎಂದವನೆ ಅಂಗಾತ ಮಲಗಿ ಎಂದನು. ಅಂಗಾತ ಮಲಗಿದಾಗ ಯಾವ ಉರು. ಅದು ಇದು ಏನೇನೋ ಕೇಳುತ್ತಾ..ನನ್ನ ಮನಸ್ಸನ್ನು ಬೇರೆ ಕಡೆ ಕೇಂದ್ರೀ ಕರಿಸಿ ಟ್ವಿಸ್ಟ್ ಆಗಿದ್ದ ಕಾಲನ್ನು ಒತ್ತಿ ಹಿಡಿದು ತಿರುಗಿಸಿಯೇ ಬಿಟ್ಟರು. ಕಟಿರ್.. ಕಟಿರ್.. ಅಂತ ಶಬ್ದ ಬಂದಿದ್ದಲ್ಲದೆ ಜನುಮದಲ್ಲಿ ತಡೆಯಲಾರದ ನೋವು ಆಯಿತು.
ನಂತರ ಸತ್ಯ ವಾಗಿ ಹೇಳುತ್ತೇನೆ ಓದುಗ ರೆ, "ನಿಮ್ಮ ಅಮ್ಮನ ಪುಣ್ಯದಿಂದ ನಿನ್ನ ಕಾಲು ಬಂದಿದೆ" ಊರಿಗೆ ಹೋಗಿ ರೆಸ್ಟ್ ತೆಗೆದುಕೊಳ್ಳಿ ಎಂದರು. ಎಲ್ಲಾ ರೀತಿಯ ಔಷಧಿ ಕೊಟ್ಟು ಕಳುಹಿಸಿದರು.
ನಾನು ಬಂದಿದ್ದ ಆಟೋದಲ್ಲೇ ನಾನು ಇದ್ದ ರೂಮಿಗೆ ಹೋಗಿ, ನನ್ನ ಸ್ನೇಹಿತನಿಗೆ ವಿಷಯ ತಿಳಿಸಿ ನನ್ನ ಎಲ್ಲಾ ಲಗೇಜು ತೆಗೆದುಕೊಂಡು ಆಟೋದಲ್ಲಿ ಕೆ.ಎಸ್. ಅರ್.ಟಿ. ಸಿ ಬಸ್ ನಿಲ್ದಾಣ ಕ್ಕೆ ಹೋದೆ. ಆಟೋದನಿಗೆ ಕೊಡಬೇಕಾದ ದುಡ್ಡು ಕೊಟ್ಟೆ. ಅವರಿಂದಲೇ ತಿಂಡಿ ತರಿಸಿಕೊಂಡು ತಿಂದೆ.
ಮಧ್ಯಾನ್ಹ ಮೈಸೂರಿನಿಂದ ನಮ್ಮ ಪಂಚನಹಳ್ಳಿಗೆ ಹೋಗುವ ಬಸ್ ಬರುವವರೆಗೂ ಕಾದೆ. ಬಸ್ ಬಂದ ಮೇಲೆ ಅಲ್ಲಿದ್ದವರು ನನ್ನ ಸ್ಥಿತಿ ನೋಡಿ ಬಸ್ ಹತ್ತಿಸಿದರು.ರಾತ್ರಿ ಮನೆಗೆ ಹೋಗಿ ಹೆತ್ತವರಿಗೆ ವಿಷಯ ತಿಳಿಸಿದೆ.
ನಮ್ಮ ಅಮ್ಮನಂತೂ ನೀನು ತುಂಬಾ ಅಡಾವುಡಿ . ಇಂಥ ಯಡವಟ್ಟು ಮಾಡಿಕೊಳ್ಳುತ್ತಿಯಾ ಅಂತ ಗೊತ್ತಿತ್ತು ಎಂದರು.
ನಾನು ಅಂದು ಮನೆಯ ಮಂಚದ ಮೇಲೆ ಮಲಗಿಕೊಂಡವನು ಸತ್ಯ ವಾಗಿ ಹೇಳುತ್ತೇನೆ. ಡಾ. ರಾಜ್ ಕುಮಾರ್ ನನ್ನು ನರಹಂತಕ, ಕಾಡುಗಳ್ಳ ವೀರಪ್ಪನ್ ೧೦೮ ನೇ ದಿನದಂದು ಡಾ.ರಾಜ್ ರನ್ನು ಬಿಟ್ಟ ದಿನವೇ ನಾನು ಆಚೆ ಕಡೆ ಓಡಾಡಲು ಮಾಮೂಲಿಯಂತೆ ಪ್ರಾರಂಭಿಸಿದೆ.
ಆ ೧೦೮ ದಿನಗಳಲ್ಲಿ ದಿನಪತ್ರಿಕೆಗಳಾದ ಕನ್ನಡಪ್ರಭ, ಪ್ರಜಾವಾಣಿ, ವಿಜಯ ಕರ್ನಾಟಕ, ಉದಯವಾಣಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳಿಗೆ ವೀರಪ್ಪನ್ ವಿರುದ್ಧ ನೋವಿನಿಂದ ಪತ್ರಗಳ ಅಂಕಣಕ್ಕೆ ಬರೆದದ್ದೇ ಬರೆದದ್ಫು.
ಮೊದಲ ಬಾರಿಗೆ ಕನ್ನಡ ಪ್ರಭ ಪತ್ರಿಕೆಯವರು ನಾನು ಬರೆದ ವಿಷಯವನ್ನು "ಬಾಕ್ಸ್" ನಲ್ಲಿ ಹಾಕಿ ಪ್ರಕಟಿಸಿದ್ದರು. ನಂತರ ಈ ಮೇಲೆ ತಿಳಿಸಿದ ಎಲ್ಲಾ ದಿನಪತ್ರಿಕೆಗಳು ಪ್ರಕಟಿಸಿದವು. ನೀವು ಯಾರಾದರೂ ಈ ಸಮಯದಲ್ಲಿ ಪ್ರಕಟವಾದ ಈ ಪತ್ರಿಕೆ ಇಟ್ಟುಕೊಂಡಿದ್ಧರೆ , ಆಸಕ್ತಿ ಇದ್ದರೆ ಮಾತ್ರ ನೋಡಿ.
ಒಟ್ಟಿನಲ್ಲಿ ಈ ೧೦೮ ದಿನಗಳು ನಮ್ಮಮ್ಮ ನನ್ನ ಕಾಲಿಗೆ ಔಷಧಿ ಹಾಕಿ , ನನ್ನ ಅಣ್ಣ ತಮ್ಮ ಅಕ್ಕ ಕೈಹಿಡಿದು ಕಾಲು ನಡೆಯುವುದಕ್ಕೆ ಬರುವಂತೆ ನಡೆಸುತ್ತಿದ್ದರು.
ಅದರಲ್ಲೂ ನಮ್ಮ ಅಮ್ಮ ನನ್ನನ್ನು ಸೇವೆ ಮಾಡಿದ ಪರಿ ನೋಡಿದಾಗ ನನಗೆ ಇಂಥ ತಾಯಿಯನ್ನು ಪಡೆದದ್ದು ಎಷ್ಟು ಜನ್ಮದ ಪುಣ್ಯದ ಫಲವೋ ಅಂದು ಈಗಲೂ ಅನ್ನಿಸುತ್ತಿದೆ.
ನಾನು ಜೀವಂತ ಇರುವವರೆಗೂ ಯಾರನ್ನೂ ಬೇಕಾದರೂ ದೂರ ಮಾಡಿಕೊಳ್ಳ ಬಲ್ಲೆ. ಆದರೆ ಇಂಥ ನನ್ನಮ್ಮನನ್ನು ದೂರ ಮಾಡಲು ಸಾಧ್ಯವೇ ಇಲ್ಲ.
No comments:
Post a Comment