ಮನುಷ್ಯ ಸಂಬಂಧಗಳು ಸಂಕೀರ್ಣವಾಗುತ್ತಿವೆ...!
ನಂಬಿಕೆ ಮೊಳೆಯುವ ಬದಲು ದ್ವೇಷ ಚಿಗುರೊಡೆಯುತ್ತಿದೆ. ಸಂಬಂಧಗಳು ವಿಶ್ವಾಸ ಬಂಧದಲ್ಲಿ ವಿಸ್ತರಿಸುವ ಬದಲು ಕ್ಷೀಣಿಸುತ್ತಿರುವುದಕ್ಕೆ ಮನಸ್ಸಿನೊಳಗೆ ಬಿತ್ತುತ್ತಿರುವ ಅಪನಂಬಿಕೆ ಬಿತ್ತನೆಗಳೇ ಮೂಲ ಕಾರಣ. ಜೊಳ್ಳು ಬಿತ್ತಿ ಒಳ್ಳೆಯ ಫಲ ಹೇಗೆ ಸಿಗುವುದಿಲ್ಲವೋ, ಹಾಗೇ ನಮ್ಮ ಸಂಬಂಧಗಳಿಗೆ ತೋರಿಕೆಯ ಲೇಪ ಹಾಕಿ ಬಿಗಿಯುವುದರಿಂದ ಸಡಿಲವಾಗುತ್ತಿದೆ. ಹಿಂದೆಲ್ಲ ಕೂಡುಕುಟುಂಬಗಳಿದ್ದವು; ನೂರಾರು ಜನ ಒಂದುಗೂಡಿ ಬದುಕು ಕಟ್ಟಿಕೊಳ್ಳುತ್ತಿದ್ದರು. ಇಂಥ ಅವಿಭಕ್ತ ಕುಟುಂಬಗಳು ಸಡಿಲಗೊಂಡಿದ್ದು ಸಹ ಮನೆಯ ಸದಸ್ಯರ ಅಪನಂಬಿಕೆ-ಅಸೂಯಾಪರ ಮನಃಸ್ಥಿತಿಗಳಿಂದ.ಅವಿಭಕ್ತ ಕುಟುಂಬಗಳು ಕ್ಷೀಣಿಸಿದ ನಂತರ ಮುಂದುವರೆದ ವಿಭಕ್ತ ಕುಟುಂಬಗಳಲ್ಲೂ ಹತ್ತಾರು ಮಂದಿ ಬದುಕುತ್ತಿದ್ದರು. ಈಗಿನ ೨೧ನೇ ಶತಮಾನದ ಹೊತ್ತಿಗೆ ಮೂರ್ನಾಲ್ಕು ಮಂದಿಗೆ ಕುಟುಂಬಗಳು ಸೀಮಿತಗೊಂಡಿವೆ. ಹೀಗಿದ್ದರೂ ಮನೆಯಲ್ಲಿ ಅಪನಂಬಿಕೆ-ಅಸಮಾಧಾನಗಳು ಇಮ್ಮಡಿಸುತ್ತಲೇ ಇವೆ. ಇದರಿಂದ ಸುಮಧುರ ಬಾಂಧವ್ಯಗಳು ಹಾಳಾಗುತ್ತಿವೆ. ಸಂಸಾರವೆಂಬ ಸುಂದರ ವ್ಯವಸ್ಥೆ ಕುರೂಪವಾಗುತ್ತಿವೆ. ದಿನಕಳೆದಂತೆ ಸಾರ ಕಳೆದುಕೊಳ್ಳುತ್ತಿರುವ ಸಂಸಾರವೆಂಬ ಸಾಗರ ಬತ್ತಿದರೆ ಮನುಷ್ಯಕುಲ ನಾಶವಾದಂತೆ ಎಂಬ ಪ್ರಜ್ಞೆ ಯಾರಲ್ಲೂ ಕಾಣದಿರುವುದು ಆತಂಕಕಾರಿಯಾಗಿದೆ.
ಹಿಂದೆಲ್ಲಾ ಮನುಷ್ಯಸಂಬಂಧಗಳ ಮಧ್ಯೆ ಗೋಡೆಗಳೆದ್ದು ಮನೆ-ಮನಗಳನ್ನು ಪ್ರತ್ಯೇಕಿಸುತ್ತಿದ್ದವು. ಈಗ ಮನುಷ್ಯರ ವಾಸ ಊರು-ಕೇರಿಗಳನ್ನು ದಾಟಿ ದೇಶಗಳ ಗಡಿಯಾಚೆ ವಿಸ್ತರಿಸುತ್ತಿರುವುದರಿಂದ ಹತ್ತಾರು ತಲೆಮಾರುಗಳ ವಂಶವೃಕ್ಷಗಳು ಸಂಬಂಧದ ಬೆಸುಗೆ ಕಾಣದೆ ಒಣಗುತ್ತಿವೆ. ತನ್ನ ಮಕ್ಕಳು, ಮೊಮ್ಮಕ್ಕಳು ಬಾಳಿ ಬದುಕಲೆಂದು ಕಡುಕಷ್ಟ ಕಾಲದಲ್ಲಿ ಹೊಟ್ಟೆಬಟ್ಟೆ ಕಟ್ಟಿ ಕಟ್ಟಿದ ಸೂರುಗಳು ಬಾಳುವ ಕುಡಿಗಳಿಲ್ಲದೆ ಸೊರಗಿ ಹೋಗುತ್ತಿವೆ. ಮನೆಗೆ ವಾರಸುದಾರರಿಲ್ಲದೆ ತಮ್ಮ ಕಣ್ಣೆದುರೇ ಪಾಳು ಬೀಳುತ್ತಿರುವ ಮನೆಯನ್ನು ನೋಡಲಾಗದೆ, ನೋಡಿದರೂ ಏನೂ ಮಾಡಲಾಗದೆ ವೃದ್ದಾಶ್ರಮ ಸೇರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅನಾಥಾಶ್ರಮಗಳಿಗಿಂತ ವೃದ್ಧಾಶ್ರಮಗಳು ಹೆಚ್ಚಾಗಿವೆ ಅನ್ನುವ ಮಾತು ಕುಹಕ ಮಾತ್ರವಲ್ಲ, ಈ ಸಮಾಜದ ದುರಂತ ಪರಿಸ್ಥಿತಿಯ ಪ್ರತಿಬಿಂಬವಾಗಿದೆ.
ಸಂಬಂಧಗಳು ಹಾಳಾಗುತ್ತಿರುವುದರ ಹಿಂದೆ ಮನುಷ್ಯರ ಸಲ್ಲದ ದುರಾಸೆಗಳು ಮೂಲ ಕಾರಣವಾಗುತ್ತಿವೆ. ಹಣ ಮತ್ತು ಗುಣದ ನಡುವಿನ ವ್ಯತ್ಯಾಸ ಮತ್ತು ಅದರ ಫಲದ ಅರಿವಿಲ್ಲದ ಜನ, ಸಂಬಂಧಗಳನ್ನು ಬೆಲೆ ಕಟ್ಟಿ ತೂಗಿನೋಡುವ ಅಸಹ್ಯಕರ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಇದರಿಂದ ನಿತ್ಯ ಅನಾರೋಗ್ಯಕರ ಪೈಪೋಟಿಯ ವಾತಾವರಣ ಸೃಷ್ಟಿಯಾಗಿದೆ. ಇಂಥ ಕೃತಕ ಜಗತ್ತಿನಲ್ಲಿ ತಮ್ಮ ಮಾನ-ಪ್ರಾಣಗಳನ್ನು ಹಣದ ನೋಟಿನಲ್ಲಿ ಸಿಂಗರಿಸುವ ಪ್ರಯತ್ನ ಅವ್ಯಾಹತವಾಗಿ ಸಾಗುತ್ತಿದೆ. ತಮ್ಮ ಜೀವನದಲ್ಲಿ ಕಳೆದುಕೊಳ್ಳುತ್ತಿರುವುದೇನು, ತಮ್ಮ ಬದುಕಿಗೆ ಅಮೂಲ್ಯವಾದುದೇನು, ಎಂಬ ಸತ್ಯ ತಿಳಿಯದೆ ಪ್ರತಿ ಜೀವಕ್ಕೂ ಅಗತ್ಯವಾದ ಸುಖ-ಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಮನೆ ಒಳಗೂ-ಹೊರಗೂ, ಮನದೊಳಗೂ ಮನದ ಹೊರಗೂ ನೆಮ್ಮದಿ ಕಾಣದೆ ಚಡಪಡಿಸುತ್ತಿರುವ ಮನುಷ್ಯರ ನಡವಳಿಕೆ ವಿನಾಶದ ಮುನ್ಸೂಚನೆ ಅನಿಸುತ್ತೆ. ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಬರುತ್ತೆ ಅನ್ನೋ ನಾಣ್ನುಡಿಯಂತೆ ಮನುಷ್ಯ ವಿಪರೀತವಾಗಿ ಯೋಚಿಸುತ್ತಾ ವಿಚಿತ್ರವಾಗಿ ಆಡುತ್ತಿದ್ದಾನೆನಿಸುತ್ತೆ.
ಮನುಷ್ಯರ ಒಟ್ಟಾರೆ ಗುಣಗಳು ಜೀವನ್ಮುಖಿಯಾಗಿ ಹೊಮ್ಮುತ್ತಿಲ್ಲ, ಮೃತ್ಯುಮುಖಿಯಾಗಿ ಕಾಣುತ್ತಿವೆ. ಮನುಷ್ಯ ತನ್ನ ತಾನು ಸುಧಾರಿಸಿಕೊಳ್ಳದೆ, ಸಮಾಜವನ್ನು, ಆಮೂಲಕ ಈ ದೇಶವನ್ನು ಸುಧಾರಿಸಲಾರ. ಒಂದು ದೇಶ ಚೆನ್ನಾಗಿರಬೇಕಾದರೆ, ಆ ದೇಶದ ಜನರೂ ಚೆನ್ನಾಗಿರಬೇಕು. ಹಾಗೇ, ಒಂದು ದೇಹ ಉತ್ತಮವಾಗಿರಬೇಕಾದರೆ ಅದರೊಳಗಿನ ಮನಸ್ಸೂ ಉತ್ತಮವಾಗಿರಬೇಕು. ದೇಶದೊಳಗಿನ ಜನ ಒಳ್ಳೆ ಆಲೋಚನೆ ಮಾಡಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ. ಜನ ಕೆಟ್ಟ ಆಲೋಚನೆಯಲ್ಲಿ ಮುಳುಗಿದರೆ, ದೇಶ ಸಹ ಕೆಟ್ಟದರಲ್ಲಿ ಮುಳುಗಿ ಹೋಗುತ್ತದೆ. ಹಾಗೇ ನಮ್ಮ ದೇಹ ಸಹ ಒಳ್ಳೇ ಚಿಂತನೆ ಮಾಡದಿದ್ದರೆ, ಕೆಟ್ಟು ಹೋಗುತ್ತದೆ. ನಾವು, ನಮ್ಮ ಕುಟುಂಬ ಚೆನ್ನಾಗಿದ್ದರೆ, ಈ ದೇಶ ಚೆನ್ನಾಗಿರುತ್ತದೆ ಎಂಬ ಸತ್ಯ ಅರ್ಥವಾದಾಗ ‘ಸಚ್ಚಿದಾನಂದ’ದ ದರ್ಶನವಾಗುತ್ತದೆ.
No comments:
Post a Comment