ಬೆಂಗಳೂರು ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅವಿಸ್ಮರಣೀಯ: ಸಚಿವ ಕೆ.ಗೋಪಾಲಯ್ಯ ಬಣ್ಣನೆ
ರಾಜಧಾನಿ ಬೆಂಗಳೂರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಬಣ್ಣಿಸಿದರು.
ಬೆಂಗಳೂರು-ಪುಣೆ ಹೆದ್ದಾರಿ ಮಲ್ಲೇಶ್ವರಂ ಬಳಿ ಕೆಎಸ್ ಅಂಡ್ ಡಿಎಲ್ ಸಂಕೀರ್ಣದಲ್ಲಿಂದು ರಾಜರ್ಷಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಶ್ರೀಗಂಧವನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕೆಎಸ್‌ಡಿಎಲ್ ದೇಶದಲ್ಲಿಯೇ ಅತ್ಯುತ್ತಮ ಕಾರ್ಖಾನೆ ಯಾಗಿದ್ದು, ಕಾರ್ಮಿಕರು ಶ್ರದ್ದೆಯಿಂದ ದುಡಿದರೆ ಕಾರ್ಖಾನೆಗೆ ಇನ್ನೂ ಹೆಚ್ಚಿನ ಹೆಸರು ಬರುತ್ತದೆ ಎಂದರು.
ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ಒಂದರಲ್ಲಿಯೇ ನಾಲ್ವಡಿ ಕೃಷ್ಣರಾಜ ಒಡೆಯರು ೧ ಸಾವಿರ ಎಕರೆಗೂ ಅಧಿಕ ಜಾಗವನ್ನು ಸಾರ್ವಜನಿಕ ಸೇವೆಗಾಗಿ ನೀಡಿ ಹೋಗಿದ್ದಾರೆ. ಮಿಂಟೋ ಆಸ್ಪತ್ರೆ, ಸಾಬೂನು ಕಾರ್ಖಾನೆ ಹೀಗೆ ಅನೇಕ ಶಾಶ್ವತ ಕಾರ್ಯಗಳಿಗೆ ಭೂಮಿ ನೀಡಿರುವುದನ್ನು ಯಾರೂ ಕೂಡ ಮರೆಯುವಂತಿಲ್ಲ ಎಂದರು.
ಇಡೀ ಬೆಂಗಳೂರಿಗೆ ವಿದ್ಯುತ್ ದೀಪ ಅಳವಡಿಕೆಯಾಗಿದ್ದು ಅವರ ಕಾಲದಲ್ಲಿಯೇ. ಪಾರಂಪರಿಕ ಕಟ್ಟಡಗಳು ಕಟ್ಟಲ್ಪಟ್ಟಿದ್ದು ಕೂಡ ಅವರ ಅವಧಿಯಲ್ಲಿಯೇ. ಇದೀಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಂಗಳೂರಿನ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಒಂದು ದಿನವೂ ಮನೆಯಲ್ಲಿ ಕುಳಿತುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ರಾಜರ್ಷಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಶ್ರೀಗಂಧವನ ಲೋಕಾರ್ಪಣೆಗೊಳಿಸಿದರು. ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ನಿಯಮಿತದಿಂದ ಹಮ್ಮಿಕೊಂಡಿದ್ದ ಈ ಹೃದಯಸ್ಪರ್ಶಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ನಿಗಮದ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಸನ್ಮಾನಿಸಿದರು.
ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಮಂಡಳಿಯ ನಿರ್ದೇಶಕರಾದ ಮಲ್ಲಿಕಾರ್ಜುನ ಸಾವಕಾರ, ಕೆ.ನಿವೇದಿತಾ ರಾಜು, ಶಿವಕುಮಾರ್ ಹುಡೇದ್, ವ್ಯವಸ್ಥಾಪಕ ನಿರ್ದೇಶಕ ವಿಕಾಶ್ ಕುಮಾರ್ ವಿಕಾಶ್, ಕೆ.ನಿತೀಶ್, ಸಿದ್ದಿಕ್ ಪಾಷಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
No comments:
Post a Comment