Monday, January 29, 2024

Poverty

 ಬಡತನ ತಮಗೆ ಅಂಟಿದ ಶಾಪ ಅಂತಾನೇ ಎಲ್ಲರೂ ಭಾವಿಸುತ್ತಾರೆ


ಬಡತನದಿಂದಾಗಿಯೇ ತಾವು ಸಾಧನೆ ಮಾಡಲಾಗಲಿಲ್ಲ ಅಂತ ಕೊರಗುವವರೂ ಇದ್ದಾರೆ. ಬಡತನವೇ ತಮ್ಮೆಲ್ಲ ಸುಖವನ್ನು ಕಿತ್ತುಕೊಂಡಿತು ಅಂತ ದುಃಖಿಸುವವರೂ ಇದ್ದಾರೆ. ಇವರಿಗೆ ಬಡತನವೇ ಈ ಜಗತ್ತನ್ನು ಪೊರೆ ದಿದೆ ಎಂಬ ಸತ್ಯ ತಿಳಿದಿಲ್ಲ. ಬಡತನದಿಂದ ಉತ್ತಮ ಬದುಕು ಕಟ್ಟಿಕೊಂಡ ವರು ಬಹಳಷ್ಟು ಜನರಿದ್ದಾರೆ. ಅದೇ ಶ್ರೀಮಂತಿಕೆಯಿಂದ ನೆಮ್ಮದಿಯ ಬದುಕು ಕಟ್ಟಿಕೊಂಡವರು ವಿರಳ. ಏಕೆಂದರೆ, ಬಡತನ ಕಲಿಸುವಷ್ಟು ಜೀವನಪಾಠವನ್ನು ಶ್ರೀಮಂತಿಕೆ ಕಲಿಸಲಾರದು. ಹೊಟ್ಟೆಯಲ್ಲಿನ ಹಸಿವು ಬುದ್ಧಿಗೆ, ಭುಜಕ್ಕೆ ಕಸುವು ತುಂಬುತ್ತದೆ. ಅದೇ ಹೊಟ್ಟೆ ತುಂಬಿದವರಿಗೆ ಅದ್ಯಾವ ಕಸುಬು ಗೊತ್ತಿರುವುದಿಲ್ಲ. ಇದರಿಂದಾಗಿಯೇ, ಸಾಧಕನ ಮಗ ಸಾಧಕನಾಗಲಾರ. ಸಾಮಾನ್ಯನ ಮಗ ಅಸಾಮಾನ್ಯ ಸಾಧನೆ ಮಾಡುತ್ತಾನೆ. ಹಸಿವಿನ ಶಕ್ತಿ ಅಷ್ಟರ ಮಟ್ಟಿಗೆ ವ್ಯಕ್ತಿಯ ಬದುಕನ್ನು ಉದ್ದೀಪಿಸುತ್ತದೆ. ಹೀಗಾಗಿ ಬಡತನ ಶಾಪವಲ್ಲ, ಅದೊಂದು ವರ.

ಬಡತನ ಶಾಪ ಅಂದುಕೊಂಡರೆ ಅದು ಶಾಪವಾಗಿಯೇ ಕಾಡುತ್ತೆ. ಬಡತನ ಭಗವಂತ ನಮಗೆ ಕೊಟ್ಟಿರುವ ಸವಾಲು ಅಂತ ಸ್ವೀಕರಿಸಿದರೆ ವರವಾಗುತ್ತೆ. ಬಡವನಿರಲಿ, ಶ್ರೀಮಂತನಿರಲಿ ಬದುಕಲು ಬೇಕಿರುವುದು ಛಲ. ನೋವನ್ನು ನುಂಗಿ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಛಲ ಹುಟ್ಟುವುದೇ ಬಡವರಲ್ಲಿ. ಎಲ್ಲಾ ಇದ್ದವನಿಗೆ ಏನೂ ಬೇಕೆನಿಸುವುದಿಲ್ಲ. ಬೇಕು ಎನ್ನುವ ಛಲವೇ ಬದುಕಿಗೆ ಬಲ. ಸಾಕು ಅನ್ನುವುದೇ ಬದುಕಿನ ದೌರ್ಬಲ್ಯ. ಹಸಿವು ಎಲ್ಲವನ್ನೂ ಕಲಿಸುತ್ತದೆ. ಅನ್ನ ಹುಟ್ಟಿಸುವುದರಿಂದ ಅದನ್ನು ಹಂಚುವವರೆಗೂ ಬದುಕಿನ ಪಾಠ ಕಲಿಸುತ್ತದೆ. ಇದರಿಂದಾಗಿಯೇ, ಬಡತನದಲ್ಲಿ ಬೆಳೆಯುವ ಮಕ್ಕಳು ಸಾಧನೆಯ ಶಿಖರದಲ್ಲಿ ಮಿಂಚುತ್ತಾರೆ. ಅದಕ್ಕೆ ಪೂರಕವಾದ ವಾತಾವರಣ ಮತ್ತು ಅವಕಾಶವನ್ನು ಸಮಾಜ ಕಲ್ಪಿಸಿಕೊಡಬೇಕಷ್ಟೆ.

ಬಹಳಷ್ಟು ಬಡಮಕ್ಕಳು ಬಡತನದ ಕೀಳರಿಮೆಯಿಂದಲೇ ಹಿಂದುಳಿಯುತ್ತಿದ್ದಾರೆ. ಇಂಥ ಮಕ್ಕಳಲ್ಲಿ ಆತ್ಮಬಲ ತುಂಬಿ ಬೆಳೆಸಿದರೆ ಈ ದೇಶಕ್ಕೆ ಬಹುದೊಡ್ಡ ಕೊಡುಗೆ ಕೊಡಬಲ್ಲರು. ಏಕೆಂದರೆ ಬಡ-ಮಧ್ಯಮ ವರ್ಗದ ಮಕ್ಕಳಿಂದಲೇ ನಮ್ಮ ದೇಶ ಒಂದಿಷ್ಟು ಸಾಧನೆ ಮಾಡುತ್ತಿದೆ. ಶ್ರೀಮಂತ ಮಕ್ಕಳಿಂದ ದೇಶದ ಪ್ರಗತಿಗೆ ನೀಡುತ್ತಿರುವ ಕಾಣಿಕೆ ಅತ್ಯಲ್ಪ. ಬಡಮಕ್ಕಳಲ್ಲಿ ಉತ್ತಮ ಬದುಕು ಕಟ್ಟಬೇಕೆಂಬ ತುಡಿತವಿರುತ್ತದೆ. ತುಡಿತದ ಒತ್ತಡ ಇದ್ದಾಗಷ್ಟೆ ಮನುಷ್ಯ ಮೇಲೇಳುತ್ತಾನೆ. ಸ್ಥಿತಿವಂತನಾಗಬೇಕೆಂಬ ಒತ್ತಡ ಬಡಮಕ್ಕಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಏಕೆಂದರೆ, ಎಲ್ಲಿ ಕೊರತೆ ಇರುತ್ತದೋ, ಅಲ್ಲಿ ಒರತೆಗೆ ಕಿಚ್ಚು ಹಚ್ಚುತ್ತೆ.

ಪರಿಶ್ರಮದಿಂದಷ್ಟೇ ಸಾಧನೆ ಸಾಧ್ಯ ಅನ್ನೋದನ್ನ ವಿಜ್ಞಾನವೂ ಒಪ್ಪುತ್ತದೆ, ಧರ್ಮಜ್ಞಾನವೂ ಮನಗಾಣುತ್ತದೆ. ಕುಂತಲ್ಲೇ ಸುಖ ಬಯಸುವ ಶ್ರೀಮಂತರ ಮಕ್ಕಳಿಂದ ಸಾಧನೆ ನಿರೀಕ್ಷಿಸುವುದು ಹಾಸ್ಯಾಸ್ಪದ. ಕೂತುಣ್ಣುವವರಿಗೆ ರೋಗಬಾಧೆ ಹೆಚ್ಚುವಂತೆ, ಸುಖದಲ್ಲಿರುವವರಿಗೆ ಸೋಮಾರಿತನದ ಬಾಧೆ ಹೆಚ್ಚಿರುತ್ತದೆ. ಅದೇ ಹಸಿವಿದ್ದವನಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲ ಹೆಚ್ಚಿರುತ್ತದೆ. ಉಳಿ ಪೆಟ್ಟು ತಿಂದಷ್ಟು ಸುಂದರ ಮೂರ್ತಿಯಾಗುವಂತೆ, ಬಡತನದ ಬೇಗೆಯಲ್ಲಿ ಬೆಂದಷ್ಟು ಸಾಧನೆಯ ಅಂಚು ಹರಿತವಾಗಿರುತ್ತದೆ. ‘ಗುಡಿಸಲಲ್ಲಿ ಅರಳಿದ ಕಲೆ ಅರಮನೆಯಲ್ಲಿ ಅಳಿಯುತ್ತೆ’ ಅನ್ನೋ ಮಾತು ಅಕ್ಷರಶಃ ನಿಜ. ಎಲ್ಲಿ ಶ್ರೀಮಂತಿಕೆ ಇರುತ್ತೋ ಅಲ್ಲಿ ಸಾಧನೆ ಕ್ಷೀಣಿಸುತ್ತೆ. ಎಲ್ಲಿ ಬಡತನ ಇರುತ್ತೋ ಅಲ್ಲಿ ಪ್ರಗತಿಯ ಹೆಜ್ಜೆ ಕಾಣಿಸುತ್ತೆ. ಛಲ-ಬಲವುಳ್ಳ ಮಕ್ಕಳಿಗೆ ಹಣದ ಕಾರಣಕ್ಕಾಗಿ ವಿದ್ಯೆ ವಂಚಿಸಬಾರದು. ಹಣದ ಕೊರತೆಯಿಂದ ಬಡಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುವುದು ದೇಶದ ಅಭಿವೃದ್ದಿಗೆ ಮಾರಕ. ಪ್ರತಿಭಾವಂತ ಮಕ್ಕಳನ್ನು ಪೋಷಿಸಿ ಬೆಳೆಸಿದಾಗಷ್ಟೆ ಸಾಧನೆಯ ಪೂರಕ ವಾತಾವರಣದಲ್ಲಿ ‘ಸಚ್ಚಿದಾನಂದ’ದ ಬದುಕು ಅನಾವರಣವಾಗುತ್ತದೆ.

No comments:

Post a Comment