ಕಲ್ಯಾಣಕ್ರಾಂತಿ ನಡೆದಾಗ ಸಾವಿರಾರು ಶರಣರ ಕಗ್ಗೊಲೆಗಳಾದವು
ಕಲ್ಯಾಣಕ್ರಾಂತಿ ನಡೆದಾಗ ಸಾವಿರಾರು ಶರಣರ ಕಗ್ಗೊಲೆಗಳಾದವು, ಶರಣರ ರಕ್ತ ಬೀದಿಬೀದಿಗಳಲ್ಲಿ ನೀರಿನಂತೆ ಹರಿಯಿತು. ಕನ್ನಡದ ಅತ್ಯಮೂಲ್ಯ ವಚನಸಾಹಿತ್ಯಗಳನ್ನ ಅಂದು ಅಮಾನುಶವಾಗಿ ಸುಟ್ಟು ಹಾಕಲಾಯಿತು.
ಹಾಗಿದ್ದರೆ ಕಲ್ಯಾಣಕ್ರಾಂತಿಗೆ ಮೂಲವಾದರೂ ಏನು?
ಬಸವಣ್ಣ ತನ್ನ ಅನುಭವಮಂಟಪದ ಮುಖಾಂತರ ವಿಚಾರಗೋಷ್ಠಿಗಳು ನಡೆಸುತ್ತಿದ್ದದ್ದು, ಎಲ್ಲಾ ಕಾಯಕ ಜಾತಿಗಳಿಗೂ ಇಷ್ಟಲಿಂಗದೀಕ್ಷೆ ಕೊಡುತ್ತಿದ್ದದ್ದು, ಬಸವಣ್ಣನ ಪ್ರತಿಪಾದಿಸುತ್ತಿದ್ದ ಸಮಾನತೆ, ಎಲ್ಲಾ ಕಾಯಕ ವರ್ಗಗಳು ಒಟ್ಟಿಗೆ ದಾಸೋಹ ಮಾಡುತ್ತಿದ್ದದ್ದು, ಜಾತಿ ವ್ಯವಸ್ಥೆಯ ವಿರುದದ್ದ ಹೋರಾಟ, ಬಾಯಿಲ್ಲದ ಕೆಳಕ್ಕೆ ತಳ್ಳಲ್ಪಟ್ಟ ಸಮುದಾಯಗಳೂ ಕೂಡ ವಚನಗಳನ್ನು ರಚಿಸುವಂತಾಗಿದ್ದು, ಇವ್ಯಾವು ಅಲ್ಲಿನ ಸಂಪ್ರದಾಯವಾದಿಗಳಿಗೆ, ಪುರೋಹಿತರಿಗೆ ಹಿಡಿಸುತ್ತಲೇ ಇರಲಿಲ್ಲ. ಈ ವಿಷಯದಲ್ಲೇ ಬಸವಣ್ಣನ ಮೇಲೆ ಅವರಿಗೆ ವಿಪರೀತವಾದ ದ್ವೇಷ, ಅಸೂಯೆ ಆವರಿಸಿಕೊಂಡಿತ್ತು.
ಆದರೆ ವಿಶ್ವಗುರು ಬಸವಣ್ಣನ ಮೇಲೆ ಬಿಜ್ಜಳನಿಗೆ ಅಪಾರ ನಂಬುಗೆಯಿತ್ತು. ಆದ್ದರಿಂದ ಈ ಪುರೋಹಿತಶಾಹಿಗಳಾರು ಬಹಿರಂಗವಾಗಿ ಅಲ್ಲಿಯವರೆಗೆ ಬಸವಣ್ಣನನ್ನ ದೊಡ್ಡ ಮಟ್ಟದಲ್ಲಿ ವಿರೋಧಿಸಿರಲಿಲ್ಲ.
ಇಂತಿಪ್ಪ ಕಲ್ಯಾಣದಲ್ಲಿ ನಡೆದ ಸಮಗಾರ(ಚಪ್ಪಲಿ ತಯಾರಿಸುವ ಮಾದಾರ ಸಮುದಾಯ) ಜಾತಿಯ ಹರಳಯ್ಯ, ಬ್ರಾಹ್ಮಣನಾಗಿದ್ದ ಮಧುವರಸನ ಮಕ್ಕಳ ವಿವಾಹವು ಕಲ್ಯಾಣಕ್ರಾಂತಿಗೆ ಕಾರಣವಾಯಿತು.
ಹರಳಯ್ಯ, ಮಧುವರಸ ಇಬ್ಬರೂ ಇಷ್ಟಲಿಂಗದೀಕ್ಷೆ ಪಡೆದಿದ್ದರು. ಮಧುವರಸನ ಮಗಳು ಲಾವಣ್ಯ, ಹರಳಯ್ಯನ ಮಗ ಶೀಲವಂತನ ವಿವಾಹವು ಪುರೋಹಿತಶಾಹಿಗಳ ವಿರೋಧದ ನಡುವೆಯೂ ನೆರವೇರಿತು.
ಆದರೆ ಪುರೋಹಿತಶಾಹಿಗಳು ತಮ್ಮ ಮಡಿವಂತಿಕೆ, ಸಂಪ್ರದಾಯಗಳ ವಿರುದ್ದವಾಗಿ ನಡೆದ ವರ್ಣಸಂಕರ ವಿವಾಹವನ್ನ ಹೇಗಾದರೂ ಸಹಿಸಿಯಾರು? ಕೀಳು ಜಾತಿಯ ಸಮಗಾರನಿಗೆ, ಬ್ರಾಹ್ಮಣ ಕನ್ಯೆಯನ್ನು ಕೊಟ್ಟು ಮದುವೆ ಮಾಡುವುದು ಅನುಲೋಮ ವಿವಾಹ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಬಾರದು ಇದು ಧರ್ಮಬಾಹಿರ ಎಂದು ಬಿಜ್ಜಳನಲ್ಲಿ ದೂರಿತ್ತರು.
ನಂತರ ಬಸವಣ್ಣನನ್ನು ರಾಜ್ಯದಿಂದ ಗಡಿಪಾರು ಮಾಡಿಸಲಾಯಿತು...
ಇತ್ತ ಹರಳಯ್ಯ, ಮಧುವರಸ, ಶೀಲವಂತನಿಗೆ ಎಳೆಹೂಟೆ ಶಿಕ್ಷೆ (ಮನುಷ್ಯರನ್ನ ಸರಪಳಿಗಳಲ್ಲಿ ಆನೆಗಳ ಕಾಲಿಗೆ ಕಟ್ಟಿ ಎಳೆಸುವುದು) ಎಳೆಸಿ ಅಮಾನವೀಯವಾಗಿ ಕೊಲ್ಲಲಾಯಿತು.
ನಂತರ ಪಟ್ಟಭದ್ರ ಹಿತಾಸಕ್ತಿಗಳಿಂದ ಬಿಜ್ಜಳನ ಕೊಲೆಯಾಯಿತು. ನಂತರ ಬಿಜ್ಜಳನ ಸೈನ್ಯದ ತಲೆಕೆಡಿಸಿದ ಪುರೋಹಿತಶಾಹಿಗಳು ಶರಣರ ಕಗ್ಗೊಲೆಗಳಿಗೆ ಮುನ್ನುಡಿ ಬರೆದರು. ವಚನಕಾರರನ್ನ, ಶರಣರನ್ನ ಪ್ರಭುತ್ವ ವಿರೋಧಿಗಳೆಂದು ಅವರ ಮಾರಣಹೋಮ ನಡೆಸಲಾಯಿತು. ಸುಮಾರು ೧ಲಕ್ಷದ ೯೬ಸಾವಿರ ಶರಣರಿದ್ದ ಕಲ್ಯಾಣದಲ್ಲಿ, ಭಾಗಶಃ ಶರಣರನ್ನು ಕೊಲ್ಲಲಾಯಿತು. ಕಲ್ಯಾಣದಲ್ಲಿ ರಕ್ತದ ಹೊಳೆಯೇ ಹರಿಯಿತು. ವಚನಕಾರರ ವಚನಗಳ ಕಟ್ಟುಗಳನ್ನು ಬೆಂಕಿಯಿಟ್ಟು ಸುಡಲಾಯಿತು. ಇದು ನಡೆದದ್ದು ಮಹಾನವಮಿಯಂದು. ಆನಂತರ ಉಳಿದ ವಚನಕಾರರು, ವಚನಗಳೊಂದಿಗೆ ಬೇರೆಡೆಗೆ ಪ್ರಯಾಣ ಬೆಳೆಸಿ, ಶರಣರ ವಚನಗಳನ್ನು, ಲಿಂಗಾಯತ ದೀಕ್ಷೆಯನ್ನು ನೀಡಿ ಲಿಂಗಾಯತ ಧರ್ಮವನ್ನ ಉಳಿಸಿದರು.
ಈ ಕೊಲೆಗಳಾವೂ ರಾಜ್ಯ ವಿಸ್ತರಿಸುವುದಕ್ಕೆ ನಡೆದ ಕೊಲೆಗಳಲ್ಲ, ಕೇವಲ ಪುರೋಹಿತಶಾಹಿಗಳ ಗೊಡ್ಡು ಸಂಪ್ರದಾಯ, ವರ್ಣಸಂಕರ, ಜಾತಿವ್ಯವಸ್ಥೆ ಮೀರಿದ್ದಕ್ಕಾಗಿ ನಡೆದ ಕೊಲೆಗಳಾಗಿದ್ದವು.
ಊರಿನೊಳಗೆ, ಗುಡಿಯೊಳಗೆ ಪ್ರವೇಶವಿರದಿದ್ದ ಶೂದ್ರರಿಗೆ ಅಂದು ಬಸವಣ್ಣ ಅಂಗೈಯಲ್ಲೇ ಲಿಂಗ ಕೊಟ್ಟು ಲಿಂಗಾಯತರನ್ನಾಗಿ ಮಾಡಿದ. ಇಂದು ಭಾಗಶಃ ಲಿಂಗಾಯತ ಯುವಕರಿಗೆ ಈ ಕಲ್ಯಾಣ ಕ್ರಾಂತಿಯ ಬಗ್ಗೆಯೇ ತಿಳಿದಿಲ್ಲ. ಅಂದು ಯಾರು ಬಸವಣ್ಣ, ವಚನಕಾರರನ್ನ ವಿರೋಧಿಸಿ ಲಕ್ಷಾಂತರ ಶರಣರನ್ನ ಕೊಂದರೋ ಇಂದು ಅಂತವರ ತಾಳಕ್ಕೆ ನಮ್ಮ ಹುಡುಗರೇ ಕುಣಿಯುತ್ತಿರೋದು ಈ ಕಾಲದ ಚೋದ್ಯ.
ಈ ರೀತಿ ಅಮಾನವೀಯವಾಗಿ ಶರಣರನ್ನ ಕೊಲೆಗೈದ ಪುರೋಹಿತಶಾಹಿಗಳು ಹೇಳುವ ಧರ್ಮವನ್ನ ಲಿಂಗಾಯತರು ಏತಕ್ಕಾಗಿ ಪಾಲಿಸಬೇಕು? ಎಲ್ಲಾ ಪುಸ್ತಕ ಮಳಿಗೆಗಳಲ್ಲೂ ಕಲ್ಯಾಣಕ್ರಾಂತಿ ಪುಸ್ತಕ ಸಿಗುತ್ತದೆ, ತಪ್ಪದೇ ಓದಿ.
ಇನ್ನೊಂದಷ್ಟು ವರುಷಗಳಾದ ಮೇಲೆ ಈ ಪುರೋಹಿತಶಾಹಿಗಳು ಲಿಂಗಾಯತ ಯುವಕರ ಮನಸ್ಸಿನಲ್ಲಿ ಬಸವಣ್ಣನೇ ಸರಿಯಿಲ್ಲ ಎನ್ನುವ ಮಟ್ಟಿಗೆ ವಿಷ ತುಂಬದಿದ್ದರೆ ಅದೇ ನಮ್ಮ ಅದೃಷ್ಟ.
No comments:
Post a Comment