ಮಹಾಭಾರತದಲ್ಲಿ ಎಷ್ಟೊ ಯೋಧರು ನಿಸ್ವಾರ್ಥದಿಂದ, ಲೋಕಕಲ್ಯಾಣಕ್ಕಾಗಿ ಒಳ್ಳೆಯದು ಮಾಡಿ, ಧರ್ಮದಿಂದ, ವೀರ ಮರಣವನ್ನು ಹೊಂದಿರುತ್ತಾರೆ. ಅಂಥವರಲ್ಲಿ, ಧರ್ಮದ ಒಳಿತಿಗಾಗಿ, ಹಸ್ತಿನಾಪುರದ ರಕ್ಷಣೆಗಾಗಿ, ಆಜನ್ಮ ಬ್ರಹ್ಮಚಾರಿ, ಸೋಲಿಲ್ಲದ ಸರದಾರ, ಇಚ್ಛಾಮರಣಿ, ಪರಾಕ್ರಮಿ, ಅಜೇಯರೆ ನಿಸಿಕೊಂಡ ಮೊದಲಿಗರು ಕುರುವಂಶದ ಪಿತಾಮಹ, ಗಂಗಾ ಪುತ್ರ ಭೀಷ್ಮರು ಸಿಂಹಾಸನಕ್ಕಾಗಲಿ, ಅಧಿಕಾರಕ್ಕಾಗಲೀ, ಆಸೆಪಡದೆ, ಕೊಟ್ಟ ಮಾತಿಗೆ ತಪ್ಪದಂತೆ ಕುರುವಂಶದ ಉನ್ನತಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿ, ಹಸ್ತಿನಾಪುರದ ರಕ್ಷಣೆ ಮಾಡುವ ಪಣತೊಟ್ಟು, ಹೋರಾಡಿ ಕೊನೆಗೆ ರಕ್ತಸಿಕ್ತ ದೇಹದ, ಬಾಣಗಳ ಹಾಸಿಗೆ ಮೇಲೆ ೫೮ ದಿನಗಳ ಯಾತನೆ, ನೋವುಗಳನ್ನು ಸಹಿಸಿಕೊಂಡು ಇಚ್ಛಾಮರಣವನ್ನು ಪಡೆದ ಪಿತಾಮಹ ಭೀಷ್ಮರು.
ಪಿತಾಮಹ ಭೀಷ್ಮರು ಮಾಡಿದ ಪಾಪ ಪುಣ್ಯಗಳನ್ನು ಲೆಕ್ಕ ಹಾಕಿದರೆ ಪಾಪಗಳ ಲೆಕ್ಕ ಹುಡುಕಿದರೂ ಒಂದೇ ಒಂದು ಸಿಗುವುದಿಲ್ಲ. ಪುಣ್ಯ ಹಾಗೂ ಧರ್ಮ ಮಾರ್ಗದಲ್ಲಿ ನಡೆದು ಎಲ್ಲರಿಗೂ ಒಳಿತನ್ನೇ ಬಯಸುತ್ತಿದ್ದು, ಅಪಾರ ಪುಣ್ಯ ಕೆಲಸಗಳನ್ನು ಮಾಡಿದ ಭೀಷ್ಮರಿಗೆ ಬಾಣಗಳ ಮೇಲೆ ಮಲಗಿ ಯಾತನೆ ಅನುಭವಿಸುವ ಶಿಕ್ಷೆ ಯಾಕೆ ಬಂದಿತು ಎಂಬ ಪ್ರಶ್ನೆಗೆ ಕೃಷ್ಣನೇ ಉತ್ತರ ಕೊಟ್ಟಿದ್ದಾನೆ.
ಮಹಾಭಾರತದ ಯುದ್ಧದ ಸಮಯದಲ್ಲಿ ಅಧರ್ಮದ ಪಕ್ಷ ಎಂದು ಗೊತ್ತಿದ್ದರೂ ಅವರ ಪರವಾಗಿ ನಿಂತ ಪಿತಾಮಹ ಭೀಷ್ಮರು ವೀರಾವೇಶದಿಂದ ಹೋರಾಡಿ ಯುದ್ಧವನ್ನು ಮಾಡಿದರು. ಕೊನೆಗೆ ಶಿಖಂಡಿ ಎದುರು ಬಂದಾಗ ಕತ್ತಿಯನ್ನು ಬಿಟ್ಟು ನಿಶಸ್ತ್ರರಾಗಿ ನಿಂತಾಗ ಅರ್ಜುನನು ಬಹಳ ದುಃಖದಿಂದ ಕರ್ತವ್ಯ ಪಾಲಿಸುವ ಸಲುವಾಗಿ ತನ್ನ ಬಾಣಗಳಿಂದ ಪಿತಾಮಹರನ್ನು ಹೊಡೆದು ಕೆಳಗೆ ಬೀಳಿಸಿದ. ನಂತರ ಪಿತಾಮಹರ ಆಸೆಯಂತೆ, ದಕ್ಷಿಣಾಯನ ಮುಗಿದು ಉತ್ತರಾಯಣ ಪುಣ್ಯಕಾಲ ಬಂದ ಮೇಲೆ ಪ್ರಾಣೋತ್ಕ್ರ್ ಕ್ರಮಣ ಮಾಡುವೆ ಎಂಬ ಭೀಷ್ಮರ ಮಾತಿನಂತೆ ಬಾಣಗಳ ಹಾಸಿಗೆಯ ಮೇಲೆ ಮಲಗಿಸಿದನು. ಉತ್ತರಾಯಣ ಬರಲು ೫೮ ದಿನಗಳ ಕಾಲ ಬಾಣಗಳ ಹಾಸಿಗೆಯ ಮೇಲೆ ನೋವು ಹಾಗೂ ಯಾತನೆಯನ್ನು ಅನುಭವಿಸಿದರು.
ಬಾಣಗಳ ಹಾಸಿಗೆಯ ಮೇಲೆ ಮಲಗಿದ ಪಿತಾಮಹರನ್ನು ಉಪಚರಿಸಲು ದೇಶದ ಮೂಲೆ ಮೂಲೆಯಿಂದ ವೈದ್ಯ ಪಂಡಿತರುಗಳನ್ನು ಕರೆಸುತ್ತಿದ್ದರು. ಆದರೆ ಅವೆಲ್ಲವನ್ನು ನಿರಾಕರಿಸಿದರು. ಉಳಿದ ಸಮಯದಲ್ಲಿ ಅವರನ್ನು ಕಂಡು ಮಾತನಾಡಿಸಿ ಆಶೀರ್ವಾದ ಪಡೆಯಲು ನೂರಾರು ಜನ ನಿತ್ಯವೂ ಬರುತ್ತಿದ್ದರು. ಎಲ್ಲರೊಂದಿಗೆ ಸಂತೋಷದಿಂದ ಮಾತನಾಡಿದ ಭೀಷ್ಮ ಪಿತಾಮಹರಿಗೆ ಚಿಂತೆಯೊಂದು ಕಾಡುತ್ತಿತ್ತು. ಇಚ್ಛಾಮರಣಿಯಾದ ನಾನು ಯಾವಾಗ ಬೇಕಾದರೂ ದೇಹತ್ಯಾಗ ಮಾಡಬಹುದಿತ್ತು. ಆದರೆ ಹೀಗೇಕೆ ಬಾಣಗಳ ಹಾಸಿಗೆಯ ಮೇಲೆ ಮಲಗಿ ನೋವನ್ನು ಅನುಭವಿಸುವಂತಹ ಶಿಕ್ಷೆ ನನಗೇಕೆ ಬಂದಿತು ಎಂದುಕೊಳ್ಳುತ್ತಿದ್ದ ಭೀಷ್ಮರ ಬಳಿ ಒಂದು ದಿನ ಶ್ರೀಕೃಷ್ಣ ಬಂದನು.
ಶ್ರೀಕೃಷ್ಣನು ಬಂದಾಗ ಅವರ ಮನಸ್ಸಿನಲ್ಲಿ ಕೊರೆಯುತ್ತಿದ್ದ ಪ್ರಶ್ನೆಯನ್ನು ಕೃಷ್ಣನ ಬಳಿ ಕೇಳಿದರು. ಹೇ ವಾಸುದೇವ, ನನಗೆ ನೆನಪಿರುವಂತೆ ನನ್ನ ಹಿಂದಿನ ಹತ್ತು ಜನ್ಮಗಳನ್ನು ನೋಡಿದಾಗ ಆ ಹತ್ತು ಜನ್ಮದಲ್ಲೂ ಒಂದೇ ಒಂದು ಪಾಪ ಕಾರ್ಯವನ್ನು ಮಾಡಿಲ್ಲ ಹೀಗಿರುವಾಗ ಇಚ್ಛಾಮರಣಿಯಾದ ನಾನು ಸಾಯುವ ಸಮಯದಲ್ಲಿ ಬಾಣಗಳ ಹಾಸಿಗೆಮೇಲೆ ಮಲಗಿ ಯಾತನೆ ಹಾಗೂ ಆಗುವ ನೋವನ್ನು ಸಹಿಸಿಕೊಳ್ಳುವಂಥ ಶಿಕ್ಷೆ ನನಗೇಕೆ ಬಂದಿದೆ ಎಂದು ನೊಂದು ಕೇಳಿದರು. ಮುಗುಳ್ನಗುತ್ತಾ ಕೃಷ್ಣನು, ಪಿತಾಮಹ ನಿಮಗೆ ನೆನಪಿರುವಂತೆ ಹತ್ತು ಜನ್ಮಗಳಲ್ಲಿ ನೀವು ಒಂದೇ ಒಂದು ಪಾಪವನ್ನು ಮಾಡಿಲ್ಲ. ಆದರೆ ನಿಮಗೆ ಗೊತ್ತಿರದ ೧೦ ಜನ್ಮದ ಹಿಂದಿನ ಹನ್ನೊಂದನೇ ಜನ್ಮದಲ್ಲಿ ನೀವೊಬ್ಬ ರಾಜರಾಗಿದ್ದೀರಿ. ನೀವು ಶಿಕಾರಿ ಪ್ರಿಯರು ಆಗಿದ್ದಿರಿ ನಿಮ್ಮ ಹೆಚ್ಚಿನ ಸಮಯವನ್ನು ಕಾಡಿನಲ್ಲಿ ಬೇಟೆಯಾಡುವುದರಲ್ಲಿ ಕಳೆಯುತ್ತಿದ್ದಿರಿ. ಒಂದು ದಿನ ಬೇಟೆಯಾಡಲು ಹೋಗುತ್ತಿದ್ದಾಗ ನಿಮಗೆ ಅಡ್ಡವಾಗಿ ಒಂದು ಸರ್ಪ ಬರುತ್ತದೆ ಹೀಗೆ ಅಡ್ಡಬಂದ ಸರ್ಪವನ್ನು ಯಾವ ಯೋಚನೆಯನ್ನೂ ಮಾಡದೆ ಎತ್ತಿ ಅದನ್ನು ಒಂದು ಬದಿಗೆ ಬಿಸಾಡಿದಿರಿ.
ಹಾಗೆ ಬಿಸಾಕಿದ ಸರ್ಪವು ಮುಳ್ಳುಗಳಿರುವ ಪೊದೆಗಳ ಮೇಲೆ ಬಿತ್ತು. ಅದು ಮುಳ್ಳಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟು ಪೊದೆಗಳಲ್ಲಿದ್ದ ಮುಳ್ಳುಗಳು ಚುಚ್ಚಿ ನೋವಾಗುತ್ತಿತ್ತು.
ಈ ರೀತಿಯಾಗಿ ಅದಕ್ಕೆ ಮುಳ್ಳಿನಿಂದ ಚುಚ್ಚಿ ಯಾತನೆ ಯಾಗುತ್ತಿದ್ದಾಗ ಪರಮೇಶ್ವರನನ್ನು ಭಕ್ತಿಯಿಂದ ಪ್ರಾರ್ಥಿಸುತ್ತಿತ್ತು. ಹೇ ಪರಮೇಶ್ವರ ನನ್ನ ನೋವಿಗೆ ಕಾರಣವಾದ ರಾಜನು ಸಹ ನನ್ನ ಹಾಗೆ ಮುಳ್ಳುಗಳಿಂದ ಚುಚ್ಚಿಸಿಕೊಂಡು ಯಾತನೆ ಅನುಭವಿಸುವಂತಾಗಲಿ ಎಂದು ಬೇಡುತ್ತಿತ್ತು.
ಹೀಗೆ ಪರಶಿವನನ್ನು ಪ್ರಾರ್ಥಿಸುತ್ತಲೇ ಯಾತನೆ ಅನುಭವಿಸುತ್ತಾ ೧೮ ದಿನಗಳ ಕಾಲ ಕಳೆದ ಮೇಲೆ ಪ್ರಾಣಬಿಟ್ಟಿತು.
ಕೃಷ್ಣನಿಂದ ಈ ಕಥೆ ಕೇಳಿದ ಪಿತಾಮಹರು ಹತ್ತು ವರ್ಷಗಳ ಹಿಂದಿನ ಪಾಪ ಸುಳ್ಳೋ, ನಿಜವೋ, ಎಂಬ ಅನುಮಾನದಿಂದ ಕೃಷ್ಣನನ್ನು ನೋಡುತ್ತಾ ಕೇಳಿದರು. ವಾಸುದೇವ ಹತ್ತು ಜನ್ಮಗಳ ಹಿಂದಿನ ಶಾಪ ಅಂದರೆ ಶಿಕ್ಷೆಯಾದ ಮುಂದಿನ ಜನ್ಮದಲ್ಲೇ ಈ ಶಿಕ್ಷೆಯನ್ನು ಅನುಭವಿಸಬೇಕಿತ್ತು. ಹತ್ತು ಜನ್ಮಗಳ ನಂತರ ಅನುಭವಿಸುವುದು ಎಂದರೆ ಹೇಗೆ ಎಂದು ಕೇಳಿದರು.
ಪಿತಾಮಹ ಮುಂದಿನ ಹತ್ತು ವರ್ಷದಲ್ಲಿ ಪಾಪದ ಕೊಡ ತುಂಬುವಂಥ ಒಂದೇ ಒಂದು ಪಾಪದ ಕೆಲಸವನ್ನು ನೀವು ಮಾಡಲಿಲ್ಲ. ಹೀಗಾಗಿ ನೀವು ಪುಣ್ಯ ಜೀವಿಗಳು ಆದಿರಿ. ಹಾಗಾಗಿ ಅದೆಲ್ಲ ಈ ಜನ್ಮದಲ್ಲಿ ನಿಮಗೆ ಸಿಕ್ಕಿತು.
ಮತ್ತೂ ಆಶ್ಚರ್ಯದಿಂದ ಭೀಷ್ಮರು, ಹೇ ವಾಸುದೇವ ಈ ಜನ್ಮದಲ್ಲಿ ನನಗೆ ನೆನಪಿರುವಂತೆ ಒಂದೇ ಒಂದು ಅಪರಾಧವನ್ನು ನಾನು ಮಾಡಿಲ್ಲ ಧರ್ಮಮಾರ್ಗದಲ್ಲಿ ನಡೆದಿದ್ದೇನೆ. ಅದಕ್ಕೆ ಕೃಷ್ಣನು ಪಿತಾಮಹ ಯಾಕೆ ಪಾಪ ಮಾಡಿಲ್ಲವೇ? ನೆನಪಿಸಿಕೊಳ್ಳಿ ಹಸ್ತಿನಾಪುರದ ಅಧರ್ಮಿ ರಾಜನ ಪರ ನಿಂತು, ಸಿಂಹಾಸನವನ್ನು ಕೊನೆ ಉಸಿರಿರುವರೆಗೂ ರಕ್ಷಿಸುತ್ತೇನೆ ಎಂದು ಮಾತುಕೊಟ್ಟು, ಅಧರ್ಮಕ್ಕೆ ಟೊಂಕಕಟ್ಟಿ ನಿಲ್ಲಲಿಲ್ಲವೇ? ತುಂಬಿದ ಸಭೆಯಲ್ಲಿ ಕುಲವಧುವಿನ ಮಾನ ಹೋಗುತ್ತಿದ್ದರೂ ಅದನ್ನು ತಡೆಯದೆ ಸಹಿಸಲಿಲ್ಲವೇ?
ಅಧರ್ಮಿಗಳಾದ ದುರ್ಯೋಧನ, ಅವನ ಅಪ್ಪ ದೃತರಾಷ್ಟ್ರ ಮಾಡುವ ಅಧರ್ಮವನ್ನು ಕಂಡು ಕಾಣದಂತೆ ಅವರ ಪಕ್ಷದಲ್ಲಿ ನಿಂತು ಹಸ್ತಿನಾಪುರದ ಸಿಂಹಾಸನವನ್ನು ರಕ್ಷಿಸುತ್ತೇನೆ ಎಂದು ಮಾತು ಕೊಟ್ಟಿರಿ. ಅವರಿಗೆ ಬೆಂಬಲವಾಗಿ ನಿಂತು ಧರ್ಮದ ವಿರುದ್ಧ ಹೋರಾಟಕ್ಕೆ ಇಳಿದಿರಿ.
ಅದೆಷ್ಟು ಅಮಾಯಕರನ್ನು ಅಧರ್ಮದ ಪರವಾಗಿ ನಿಂತು ಕೊಂದುಹಾಕಿದಿರಿ.
ನಿಮ್ಮ ಪಾಪದ ಕೊಡ ತುಂಬಲು ಇಷ್ಟು ಸಾಲದೇ ಎಂದು ಕೇಳಿದನು.
ಪಶ್ಚಾತಾಪದಿಂದ ಕಣ್ಣೀರು ಹರಿಸುತ್ತ ಎಲ್ಲವನ್ನೂ ಕೇಳಿಸಿಕೊಳ್ಳುವ ವೇಳೆಗೆ ಅವರ ಪಾಪದ ಶಿಕ್ಷೆಗಳÀÄ ಮುಗಿದಿತ್ತು ಅವರ ಮುಖದಲ್ಲಿ ತೇಜಸ್ಸು ಮಾಘಮಾಸದ ಶುಕ್ಲ ಪಕ್ಷ ಉತ್ತರಾಯಣದ ಸೂರ್ಯನು ಬಂದಿದ್ದ. ಸಾಕ್ಷಾತ್ ಭಗವಂತನಾದ ಶ್ರೀಕೃಷ್ಣನ ದರ್ಶನ ಭಾಗ್ಯದಿಂದ. ಅವಶೇಷದ ಪಾಪಗಳೆಲ್ಲವು ಸುಟ್ಟು ಭಸ್ಮವಾಯಿತು. ಭಗವಂತನನ್ನು ಕಣ್ತುಂಬಾ ನೋಡುತ್ತಾ ಇಚ್ಛಾಮರಣಿಯಾದ ಭೀಷ್ಮರು ಪ್ರಾಣೋತ್ಕ್ರಮಣಗೈದು ಪರಮಾತ್ಮನ ಸಾನಿಧ್ಯವಾದ ವೈಕುಂಟಕ್ಕೆ ಹೋದರು.
ಯತೇಂದ್ರಿಯ ಮನೋ ಬುದ್ದಿ, ಮುನಿರ್ಮೋಕ್ಷ ಪರಾಯಣ!
ವಿಗತೇಚ್ಚಾಭಯ ಕ್ರೋದ, ಯ ಸದಾ ಮುಕ್ತ ಏವ ಸಹ!
ಇಂದ್ರಿಯಗಳನ್ನೂ ಮನಸ್ಸು ಮತ್ತು ಬುದ್ಧಿಯನ್ನೂ ಯಾವಾಗಲೂ ತನ್ನ ವಶದಲ್ಲಿಟ್ಟುಕೊಂಡು, ಮೋಕ್ಷವನ್ನೇ ತನ್ನ ಪರಮ ಗುರಿಯನ್ನಾಗಿ ಮಾಡಿಕೊಂಡು ಬಯಕೆ, ಭಯ ಮತ್ತು ಕ್ರೋಧಗಳಿಂದ ಬಿಡುಗಡೆ ಹೊಂದಿರುವ ಆ ಮುನಿಯು. ಮೋಕ್ಷವನ್ನು ಪಡೆಯುತ್ತಾನೆ.