Sunday, February 18, 2024

youth in nation building

ದೇಶದ ಅಭಿವೃದ್ದಿಯಲ್ಲಿ ಯುವಕರು...


 ‘ರಾಷ್ಟ್ರ’ ಎಂದರೆ ಕೇವಲ ಉದ್ದಗಲಕ್ಕೂ ಹರಡಿದ ಭೂಮಿ, ಎತ್ತರವಾಗಿ ನಿಂತ ಪರ್ವತ ಮಾಲೆ, ಸುತ್ತಿಹರಿವ ನದಿಗಳು, ಹಾಗೂ ಹರಿಯುತ್ತಿರುವ ಹಳ್ಳ ಕೊಳ್ಳ -ಇತ್ಯಾದಿ ಭೌಗೋಲಿಕ ಲಕ್ಷಣಗಳಷ್ಟೇ ಅಲ್ಲ. ಅಲ್ಲಿ ಹುಟ್ಟಿ ಬೆಳೆದು ಜೀವಿಸುತ್ತಿರುವ ಸಹಸ್ರಾರು ಮಾನವ ಜೀವಿಗಳು ಒಂದು ರಾಷ್ಟ್ರವನ್ನು ರೂಪಿಸುತ್ತವೆ. ನಿಸರ್ಗ, ನೈಜವಾಗಿ ನೀಡಿದ ನೆಲ, ನೀರು, ನಿಕ್ಷೇಪಿತ ನಿಧಿಗಳೆಲ್ಲ ನಾಡಿನ ನಿಜವಾದ ನಿಧಿಗಳೇನೋ ಸರಿ. ಆದರೆ ಅವುಗಳ ನ್ಯಾಯಸಮ್ಮತ ನಿರ್ವಹಣೆ ನಾಡಿನ ನಿವಾಸಿಗಳ ನಿಪುಣತೆಯಲ್ಲಿದೆ. ಅಷ್ಟಕ್ಕೂ ರಾಷ್ಟ್ರಾಭಿವೃದ್ದಿ ಎಂದರೆ- ರಾಷ್ಟ್ರದ ಸರ್ವತೋಮುಖ  ಉತ್ಕರ್ಷ, ಉನ್ನತಿ, ಉತ್ಥಾನ, ಸರ್ವತೋಮುಖ  ಅಭಿವೃದ್ಧಿಯೆಂದರೆ ಆ ರಾಷ್ಟ್ರದ ಚಾರಿತ್ರö್ಯ ಶಿಕ್ಷಣ, ಉದ್ಯೋಗ, ವಿಜ್ಞಾನ, ಕಲೆ, ಕೌಶಲ್ಯ, ಕ್ರೀಡೆ ಹೀಗೆ ಅನೇಕ ಆಯಾಮಗಳಲ್ಲಿ ಸಾಧಿಸಿರುವ ಪರಿಣತಿ, ರಾಷ್ಟ್ರದ ಜನತೆಗಳಲ್ಲಿ ಈ ಎಲ್ಲ ಆಯಾಮಗಳ ಪರಿಣತಿ ಇದ್ದಾಗಲೇ ರಾಷ್ಟ್ರಾಭಿವೃದ್ಧಿ ರಾಷ್ಟ್ರದ ಅಭ್ಯುದಯ ಸಾಧ್ಯವಾಗುವುದು.

ಈ ಎಲ್ಲ ಆಯಾಮಗಳಲ್ಲಿ ಪರಿಣತಿ ಪಡೆಯಲು ನಾವು ಚಿಕ್ಕ ಮಕ್ಕಳಿದ್ದಾಗಲೇ ಅದಕ್ಕಾಗಿ ಪರಿಶ್ರಮಪಡಬೇಕಾಗುತ್ತದೆ. ಮಕ್ಕಳಿಗೆ ಈ ಸಂಸ್ಕಾರವನ್ನು ಕೊಡುವುದಕ್ಕಾಗಿ ನಾವು ಅನೇಕ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಅಲ್ಲದೆ ಆ ಯೋಜನೆಗಳ ಸಾಕ್ಷಾತ್ಕಾರಕ್ಕೆ ಶ್ರಮಿಸಬೇಕಾಗುತ್ತದೆ. ಈ ಎಲ್ಲ ಸಾಮರ್ಥ್ಯಗಳನ್ನು ಯಾರೂ ಹುಟ್ಟಿದಾಗಿನಿಂದಲೇ ಹೊಂದಿರಲಾರರು. ಇವುಗಳನ್ನು ನಾವು ಪ್ರಯತ್ನಪೂರ್ವಕವಾಗಿ ಪಡೆದುಕೊಳ್ಳಬೇಕಾಗುತ್ತದೆ.  ಅಂತೆಯೇ ಮಕ್ಕಳಲ್ಲಿ ಅವರ ವಿದ್ಯಾರ್ಥಿ ಜೀವನದಲ್ಲಿಯೇ ಈ  ಎಲ್ಲ ಗುಣಗಳನ್ನೂ, ವಿದ್ಯೆಗಳನ್ನೂ, ಕಲೆಗಳನ್ನೂ ಅಳವಡಿಸಬೇಕಾ ಗುತ್ತದೆ.

ಮಕ್ಕಳನ್ನು ‘ಅವರಿನ್ನೂ ಚಿಕ್ಕವರು, ರಾಷ್ಟ್ರಾಭಿವೃದ್ಧಿಯಲ್ಲಿ ಅವರೇನು ಮಾಡಬಲ್ಲರು?’ ಎನ್ನಬೇಡಿ. ‘ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ’ ಎಂದು ಗಾದೆಯಿದೆ. ಆದ್ದರಿಂದಲೇ ರಾಷ್ಟ್ರದ ಅಭ್ಯುದಯಕ್ಕೆ ಆವಶ್ಯಕವಾದ ಆಯಾಮಗಳ ಪರಿಣತಿ  ಪಡೆಯಲು ಈಗಿನಿಂದಲೇ ಅವರಿಗೆ ತರಬೇತಿ ನೀಡಬೇಕು. ಇಂದಿನ ಮಕ್ಕಳೇ ನಾಳಿನ ನಾಗರಿಕರು. ಆದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮನೋಧರ್ಮ ರೂಪಗೊಳ್ಳಬೇಕು. ಅವರು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಾಗಿದ್ದಾಗಲೇ ಅವರ ದೃಷ್ಟಿಕೋನವನ್ನು ಸಂಸ್ಕರಿಸಬೇಕು. ಅ ಎಳೆಯ ಮನಸ್ಸುಗಳಲ್ಲಿಯೇ ರಾಷ್ಟ್ರಭಕ್ತಿ, ರಾಷ್ಟ್ರಾಭಿಮಾನವನ್ನು ಬಿತ್ತಿ ಪೋಷಿಸುತ್ತ ಬರಬೇಕು.

ವಿದ್ಯಾರ್ಥಿಗಳಲ್ಲಿ ಈ ಮನೋಧರ್ಮವನ್ನು ಮೂಡಿಸಲು ದೃಷ್ಟಿಕೋನವನ್ನು ಸೃಷ್ಟಿಸಲು ಶಾಲಾ ಕಾಲೇಜುಗಳು ಯೋಜನೆ ರಚಿಸಬೇಕಾಗಿದೆ. ಯಾಕೆಂದರೆ ಇಂದಿನ ವಿದ್ಯಾರ್ಥಿಗಳೇ ನಾಳೆ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಕ್ರಿಯಾಶೀಲರಾಗಬೇಕಾಗಿದ್ದು, ಅಂತೆಯೇ ರಾಷ್ಟ್ರದ ಉನ್ನತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಖಂಡಿತವಾಗಿಯೂ ಪ್ರಮುಖವಾದದ್ದು, ವಿಶೇಷವಾದದ್ದು. ಅವರ ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ವಿದ್ಯಾರ್ಥಿಗಳಿಗೆ ತರಬೇತಿಯನ್ನು ಪರಿಣಾಮಕಾರಿಯಾಗಿ ನೀಡಲು ಶಾಲಾ, ಕಾಲೇಜುಗಳಲ್ಲದೆ ಶಿಕ್ಷಣ ವಿಭಾಗವೂ ಸಹ ಅತ್ಯಂತ ಗಹನವಾಗಿ ವಿಚಾರಶೀಲರಾಗಬೇಕು.  ವಿದ್ಯಾರ್ಥಿಗಳಿಗೆ ಈ ರೀತಿಯ ಯೋಗ್ಯ ತರಬೇತಿ ನೀಡಲು ಪೂರಕವಾದ ಪಾಠ್ಯಕ್ರಮ ತಯಾರಿಸುವುದು ಹಾಗೂ ಅವರ ಪಠ್ಯಪುಸ್ತಕಗಳಲ್ಲಿ ಈ ಪಾಠ್ಯಕ್ರಮವನ್ನು ಅಳವಡಿಸುವುದು ತುಂಬಾ ಅವಶ್ಯಕ.

ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಒಳ್ಳೆ ಶಿಕ್ಷಣ ಪಡೆಯುವುದಲ್ಲದೆ ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ಅವರ ಚಾರಿತ್ರö್ಯ ಗೌರವಯುತವಾಗುತ್ತದೆ. ರಾಷ್ಟ್ರಾಭಿವೃದ್ದಿಗೆ ಕೆಲ ಅವಶ್ಯಕ ಮೌಲ್ಯಗಳನ್ನು ಈಗ ವಿವೇಚಿಸೋಣ -

ದೇಶಭಕ್ತಿ - ಚಿಕ್ಕಂದಿನಿಂದಲೂ ದೇಶಪ್ರೇಮ, ದೇಶಾಭಿಮಾನವನ್ನು ಮಕ್ಕಳ ನರ ನರಗಳಲ್ಲಿ ತುಂಬಬೇಕು.  ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಪರ್ವಗಳ ಕುರಿತು ಮಕ್ಕಳಲ್ಲಿ ಅಭಿಮಾನ ಹುಟ್ಟಿಸಬೇಕು. ಅವುಗಳ ವಿಷಯಕ್ಕೆ ಅರಿವನ್ನು ಮೂಡಿಸಬೇಕು. ದೇಶಭಕ್ತಿಗೆ ವಯಸ್ಸಿನ ಮಾನದಂಡ ಬೇಕಿಲ್ಲ. ಉದಾಹರಣೆಗೆ ನಮ್ಮ ಸ್ವಾತಂತ್ರö್ಯ ಹೋರಾಟದಲ್ಲಿ ಸಕ್ರಿಯ ಭಾಗವಹಿಸಿದ ಅನೇಕ ನಾಯಕರು ಶಾಲೆ, ಕಾಲೇಜ್‌ನಲ್ಲಿ ಇರುವಾಗಲೇ ಹೋರಾಟದಲ್ಲಿ ಭಾಗವಹಿಸಿದ್ದರು. 

ನನ್ನ ಬಾಲ್ಯದ ದಿನಗಳನ್ನು ನೆನೆದಾಗ ನನಗೆ ಅಭಿಮಾನ ಎನ್ನಿಸುವುದು, ನಾವೂ ಕೂಡ ಸ್ವಾತಂತ್ರö್ಯದ ಹೋರಾಟದಲ್ಲಿ ಅಳಿಲು ಸೇವೆ ಮಾಡಿದ್ದೇವೆ ಎಂದು. ನನಗಾಗ ಆರು ವರ್ಷ ಪ್ರತಿದಿನ ಬೆಳಗಿನ ಜಾವ ನಮ್ಮ ನೆರೆಯ ಮಕ್ಕಳೆಲ್ಲ ಸೇರಿ ರಾಷ್ಟ್ರಭಕ್ತಿ 

Dwajasthamba in temples

ಗುಡಿಯಲ್ಲಿ ಧ್ವಜಸ್ತಂಭ ಯಾಕೆ ಇರುತ್ತದೆ? 
ಧ್ವಜಸ್ತಂಭದ ಹಿಂದೆ ಒಂದು ಕಥೆ ಇದೆ....


 ನಮ್ಮಲ್ಲಿ ಬಹಳಷ್ಟು ಮಂದಿ ದೇವಸ್ಥಾನಕ್ಕೆ ಹೋಗಿ ಬರುತ್ತಿರುತ್ತೇವೆ.. ನಮ್ಮ ಕೋರಿಕೆಗಳನ್ನು ನೆರವೇರಿಸು ಎಂದು ದೇವರನ್ನು ಬೇಡಿಕೊಳ್ಳುತ್ತಿರುತ್ತೇವೆ... ಗುಡಿಗೆ ಹೋಗುವ ಮೊದಲು ನಮಗೆ ಧ್ವಜಸ್ತಂಭ ದರ್ಶನ ನೀಡುತ್ತದೆ. ನಾವು ಧ್ವಜಸ್ತಂಭಕ್ಕೆ ಕೈಮುಗಿದ ಬಳಿಕ ದೇವರ ಬಳಿಗೆ ಹೋಗುತ್ತೇವೆ. ಆದರೆ ಗುಡಿಯಲ್ಲಿ ಧ್ವಜಸ್ತಂಭ ಯಾಕೆ ಇರುತ್ತದೆ ಎಂಬುದನ್ನು ಎಂದಾದರೂ ಅಲೋಚಿಸಿದ್ದೀರಾ...? ಗುಡಿಯಲ್ಲಿರುವ ಧ್ವಜಸ್ತಂಭದ ಹಿಂದೆ ಒಂದು ಕಥೆ ಇದೆ.

ಕುರುಕ್ಷೇತ್ರದ ಬಳಿಕ ಧರ್ಮರಾಜ ಸಿಂಹಾಸನವನ್ನು ಏರಿ ರಾಜ್ಯವನ್ನು ಪರಿಪಾಲಿಸುತ್ತಿರುತ್ತಾನೆ. ಪ್ರಜೆಗಳ ಬಳಿ ಒಳ್ಳೆಯವನೆನಿಸಿಕೊಳ್ಳಲು ಧರ್ಮಮೂರ್ತಿಯಾಗಿ ಹೆಸರು ಮಾಡಲು ಅನೇಕ ದಾನ ಧರ್ಮಗಳನ್ನು ಮಾಡುತ್ತಿರುತ್ತಾನೆ. ಇದು ಸರಿಯಲ್ಲ ಎಂದು ಶ್ರೀಕೃಷ್ಣನು ಧರ್ಮರಾಜನಿಗೆ ಗುಣಪಾಠ ಕಲಿಸಬೇಕು ಎಂದುಕೊಳ್ಳುತ್ತಾನೆ. ಅದಕ್ಕಾಗಿ ಅಶ್ವಮೇಧ ಯಾಗ ಮಾಡಿ, ಶತ್ರು ರಾಜರನ್ನು ಗೆದ್ದು ದೇವತೆಗಳನ್ನು, ಬ್ರಾಹ್ಮಣರನ್ನು ಗೆದ್ದು ರಾಜ್ಯವನ್ನು ಸುಭಿಕ್ಷವಾಗಿ ಮಾಡಬೇಕೆಂದು ಕೋರುತ್ತಾನೆ. 

ಧರ್ಮರಾಜನು ಶ್ರೀಕೃಷ್ಣನ ಮಾತನ್ನು ಶಿರಸಾ ಪಾಲಿಸಿ ಅಶ್ವಮೇಧಕ್ಕೆ ತಯಾರು ಮಾಡಿ, ಯಾಗಾಶ್ವಕ್ಕೆ ರಕ್ಷಕರನ್ನಾಗಿ ನಕುಲ ಸಹದೇವರನ್ನು ಸೈನ್ಯದೊಂದಿಗೆ ಕಳುಹಿಸುತ್ತಾನೆ. ಆ ಯಾಗಾಶ್ವ ಎಲ್ಲಾ ರಾಜ್ಯಗಳನ್ನೂ ಸುತ್ತಿ ಕೊನೆಗೆ ಮಣಿಪುರ ರಾಜ್ಯ ಸೇರುತ್ತದೆ. ಆ ರಾಜ್ಯಕ್ಕೆ ರಾಜ ಮಯೂರ ಧ್ವಜ. ಅವನು ಮಹಾ ಪರಾಕ್ರಮಶಾಲಿ. ಭಾರಿ ಹೆಸರು ಮಾಡಿರುವಂತಹವನು. ಮಯೂರಧ್ವಜನ ಪುತ್ರ ತಾಮ್ರ ಧ್ವಜ ಪಾಂಡವರ ಯಾಗದ ಅಶ್ವವನ್ನು ಬಂಧಿಸುತ್ತಾರೆ.

ತಾಮ್ರ ಧ್ವಜನ ಜತೆಗೆ ಯುದ್ಧ ಮಾಡಿದ ನಕುಲ ಸಹದೇವರು, ಭೀಮಾರ್ಜುನರು ಸೋತುಹೋಗುತ್ತಾರೆ. ತಮ್ಮಂದಿರೆಲ್ಲಾ ಸೋತ ಸುದ್ದಿಯನ್ನು ತಿಳಿದುಕೊಂಡ ಧರ್ಮರಾಜ ಯುದ್ಧಕ್ಕಾಗಿ ಹೊರಡುತ್ತಾನೆ. ಆಗ ಶ್ರೀಕೃಷ್ಣನು ಆತನನ್ನು ತಡೆದು ಮಯೂರಧ್ವಜನನ್ನು ಯುದ್ಧದಲ್ಲಿ ಜಯಿಸುವುದು ಸಾಧ್ಯವಿಲ್ಲ, ಕುಟಿಲೋಪಾಯದಿಂದ ಮಾತ್ರ ಗೆಲ್ಲಬಹುದು ಎನ್ನುತ್ತಾನೆ.

ಶ್ರೀಕೃಷ್ಣನು, ಧರ್ಮರಾಜ ಜತೆಯಾಗಿ ವಯಸ್ಸಾದ ಬ್ರಾಹ್ಮಣರ ರೂಪದಲ್ಲಿ ಮಣಿಪುರಕ್ಕೆ ಹೋಗುತ್ತಾರೆ. ಅವರನ್ನು ನೋಡಿದ ಮಯೂರ ಧ್ವಜ ಅವರಿಗೆ ದಾನ ನೀಡಬೇಕೆಂದು ಏನು ಬೇಕು ಕೇಳಿಕೊಳ್ಳಿ ಎಂದು ಕೇಳುತ್ತಾನೆ. ಅದಕ್ಕೆ ಶ್ರೀಕೃಷ್ಣನು, "ರಾಜಾ! ನಿಮ್ಮ ದರ್ಶನಕ್ಕಾಗಿ ನಾವು ಬರುತ್ತಿದ್ದ ದಾರಿಯಲ್ಲಿ ಒಂದು ಸಿಂಹ ಅಡ್ಡ ಬಂದು ಈತನ ಪುತ್ರನನ್ನು ಹಿಡಿದುಕೊಂಡಿದೆ. ಮಗುವನ್ನು ಬಿಟ್ಟುಬಿಡುವಂತೆ ನಾವು ಪ್ರಾರ್ಥಿಸಿದೆವು. ಸಿಂಹ ಮಾನವ ಭಾಷೆಯಲ್ಲಿ, "ನಿಮ್ಮ ಪುತ್ರ ನಿಮಗೆ ಬೇಕಾದರೆ ಮಣಿಪುರ ರಾಜನಾದ ಮಯೂರಧ್ವಜನ ದೇಹದ ಅರ್ಧದಷ್ಟು ಭಾಗವನ್ನು ನನಗೆ ಆಹಾರವಾಗಿ ಆತನ ಪತ್ನಿ ಪುತ್ರರು ಸ್ವತಃ ಕೊಯ್ದು ಕೊಟ್ಟಿದ್ದನ್ನು ತಂದುಕೊಟ್ಟರೆ, ಈತನನ್ನು ಬಿಟ್ಟುಬಿಡುತ್ತೇನೆ ಎಂದು ಹೇಳಿದ್ದಾಗಿ, ಆದಕಾರಣ ಪ್ರಭುಗಳು ನಮ್ಮ ಬಗ್ಗೆ ದಯ ತೋರಿ ತಮ್ಮ ದೇಹದ ಅರ್ಧ ಭಾಗವನ್ನು ದಾನ ನೀಡಿ ಇವರ ಕುಮಾರನನ್ನು ಕಾಪಾಡಬೇಕೆಂದು ಕೋರುತ್ತಾರೆ.

ಅವರ ಕೋರಿಕೆ ಕೇಳಿದ ಮಯೂರಧ್ವಜ ಅಂಗೀಕರಿಸಿ ಅದಕ್ಕೆ ಸೂಕ್ತ ಏರ್ಪಾಡುಗಳನ್ನು ಮಾಡಿಸಿ ಪತ್ನಿ ಪುತ್ರರಿಗೆ ಆತನ ದೇಹವನ್ನು ಮಧ್ಯಕ್ಕೆ ಕತ್ತರಿ ಕೊಡಬೇಕೆಂದು ಹೇಳುತ್ತಾನೆ. ಅವರು ಅವನ ದೇಹವನ್ನು ಅರ್ಧದಷ್ಟು ಕತ್ತರಿಸುವುದನ್ನು ನೋಡಿದ ಧರ್ಮರಾಜ ಆತನ ದಾನ ಗುಣಕ್ಕೆ ಬೆರಗಾಗುತ್ತಾನೆ. ಅಷ್ಟರಲ್ಲಿ ಮಯೂರ ಧ್ವಜನ ಎಡಗಣ್ಣಿನಿಂದ ನೀರು ಸೋರುವುದನ್ನು ನೋಡಿದ ಧರ್ಮರಾಜ "ತಾವು ಕಣ್ಣೀರು ಸುರಿಸುತ್ತಾ ಕೊಟ್ಟ ದಾನ ನಮಗೆ ಬೇಡ ಎಂದರೆ ಬೇಡ ಎನ್ನುತ್ತಾನೆ" ಅದಕ್ಕೆ ಮಯೂರಧ್ವಜ, "ಮಹಾತ್ಮಾ ತಾವು ತಪ್ಪಾಗಿ ಭಾವಿಸುತ್ತಿದ್ದೀರಾ. ನೋವಿನಿಂದ ನನ್ನ ದೇಹವನ್ನು ನಿಮಗೆ ನೀಡುತ್ತಿಲ್ಲ. ನನ್ನ ಬಲಭಾಗ ಪರೋಪಕಾರಕ್ಕೆ ಉಪಯೋಗವಾಯಿತು. ಆದರೆ ಆ ಭಾಗ್ಯ ತನಗಿಲ್ಲವಲ್ಲ ಎಂದು ಎಡಗಣ್ಣು ತುಂಬಾ ನೋವನ್ನನುಭವಿಸುತ್ತಾ ಕಣ್ಣೀರು ಹಾಕುತ್ತಿದೆ" ಎಂದು ವಿವರಿಸುತ್ತಾನೆ. ಮಯೂರ ಧ್ವಜನ ದಾನಶೀಲ ಗುಣವನ್ನು ಮೆಚ್ಚಿ ಶ್ರೀಕೃಷ್ಣನು ತನ್ನ ನಿಜ ರೂಪವನ್ನು ತೋರಿಸಿ "ಮಯೂರಧ್ವಜ, ನಿನ್ನ ದಾನ ಗುಣ ಅಮೋಘ... ಏನಾದರೂ ವರ ಕೋರಿಕೋ" ಎನ್ನುತ್ತಾನೆ.

"ಪರಮಾತ್ಮ, ನನ್ನ ದೇಹ ನಶಿಸಿದರೂ ನನ್ನ ಆತ್ಮ ಪರೋಪಕಾರಕ್ಕಾಗಿ ಉಪಯೋಗಪಡುವಂತೆ ನಿತ್ಯ ನಿಮ್ಮ ಮುಂದಿರುವಂತೆ ಅನುಗ್ರಹಿಸಿ" ಎಂದು ಕೋರಿಕೊಳ್ಳುತ್ತಾನೆ ಮಯೂರ ಧ್ವಜ. ಅದಕ್ಕೆ ಶ್ರೀಕೃಷ್ಣನು ತಥಾಸ್ತು ಎನ್ನುತ್ತಾನೆ. "ಮಯೂರ ಧ್ವಜ, ಇಂದಿನಿಂದ ಪ್ರತಿ ದೇವಾಲಯದ ಮುಂದೆ ನಿನ್ನ ನೆನಪಿಗಾಗಿ ಧ್ಜಜಸ್ತಂಭಗಳಿರುತ್ತವೆ. ಅದನ್ನು ಆಶ್ರಯಿಸಿದ ನಿನ್ನ ಆತ್ಮ, ನಿತ್ಯ ದೈವ ಸನ್ನಿಧಿಯಲ್ಲಿ ಇರುತ್ತದೆ. ಮೊದಲು ನಿನ್ನ ದರ್ಶನ ಪಡೆದು ಪ್ರದಕ್ಷಿಣಿ ನಮಸ್ಕಾರಗಳನ್ನು ಆಚರಿಸಿದ ಬಳಿಕವಷ್ಟೇ ಪ್ರಜೆಗಳು ತಮ್ಮ ಇಷ್ಟ ದೈವದ ದರ್ಶನ ಪಡೆಯುತ್ತಾರೆ. ಪ್ರತಿನಿತ್ಯ ನಿನ್ನ ದೇಹದಲ್ಲಿ ದೀಪ ಯಾರು ಇಡುತ್ತಾರೋ ಅವರ ಜನ್ಮ ಸಾರ್ಥಕವಾಗುತ್ತದೆ. ನಿನ್ನ ನೆತ್ತಿಯ ಮೇಲೆ ಇಟ್ಟ ದೀಪ ರಾತ್ರಿ ಹೊತ್ತು ದಾರಿಹೋಕರಿಗೆ ದಾರಿ ತೋರುವ ದೀಪವಾಗುತ್ತದೆ" ಎಂದು ಅನುಗ್ರಹಿಸುತ್ತಾನೆ.

ಅಂದಿನಿಂದ ಆಲಯಗಳ ಮುಂದೆ ಧ್ವಜಸ್ತಂಭಗಳನ್ನು ಕಡ್ಡಾಯವಾಗಿ ಪ್ರತಿಷ್ಠಾಪಿಸುವ ಆಚಾರ ಆರಂಭವಾಯಿತು. ಭಕ್ತರು ಮೊದಲು ಧ್ವಜಸ್ತಂಭಕ್ಕೆ ನಮಿಸಿ ಬಳಿಕ ಮೂಲವಿರಾಟ್ ದರ್ಶನ ಮಾಡಿಕೊಳ್ಳುವುದು ಸಾಂಪ್ರದಾಯಿಕವಾಗಿ ಬದಲಾಗಿದೆ

Kailasa Temple at Ellora

ಶ್ರೀ ಕೈಲಾಸನಾಥ ದೇವಸ್ಥಾನ ಎಲ್ಲೋರಾ 


“ದೇವಾಲಯದ ಸುತ್ತ ಸುತ್ತೋಣ ಬನ್ನಿ” 

“ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿ”ಯಲ್ಲಿ ಸ್ಥಾನ ಪಡೆದ, ಜಗದ್ವಿಖ್ಯಾತ ಎಲ್ಲೋರಾದ ಕೈಲಾಸನಾಥ ದೇವಸ್ಥಾನದ ಒಂದು ಕಿರುನೋಟ...

“ಹಿನ್ನೆಲೆ”

ವಿಶ್ವದ ಜೀವಕೋಟಿಗಳಲ್ಲಿ ಮಾನವನೇ ಅತೀ ಶ್ರೇಷ್ಠ ಎಂದು, ಆತನು ಮನಸ್ಸು ಮಾಡಿದಲ್ಲಿ ಯಾವ ಕೆಲಸವನ್ನಾದರೂ ಹಿಡಿದು ಸಾಧಿಸಬಲ್ಲ ಛಾತಿ ಆತನಿಗಿದೆ ಎಂಬುದು ಹಲವಾರು ಬಾರಿ ಸಾಬೀತುಗೊಂಡಿದೆ. ಇದು “ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಎಲ್ಲೋರ (ಎಲ್ಲಾಪುರ)ದಲ್ಲಿರುವ ಕೈಲಾಸನಾಥ” ದೇವಾಲಯ ನೋಡಿದರೆ ತಿಳಿಯುತ್ತದೆ. ಯಾವುದೇ ಕಟ್ಟಡವನ್ನು ಕೆಳಗಿನಿಂದ ಅಂದರೆ  ಅಡಿಪಾಯದಿಂದ ಪ್ರಾರಂಭ ಮಾಡಿ ತುದಿಯ ತನಕ ಕಟ್ಟಿ ಮುಗಿಸುತ್ತಾರೆ. ಆದರೆ ಈ ದೇವಾಲಯವು ಸಹ್ಯಾದ್ರಿ ಶ್ರೇಣಿಯ ಚÀರಣಾದ್ರಿ ಬೆಟ್ಟದ ಏಕಬಂಡೆಯಲ್ಲಿ ಕೊರೆದಿದ್ದಾಗಿದೆ. ಇದರ ಕೆಲಸವನ್ನು ಪರ್ವತದ ತುದಿಯಲ್ಲಿ ಪ್ರಾರಂಭ ಮಾಡಿ “ಯು” ಆಕಾರದಲ್ಲಿ ಇಡೀ ಬೆಟ್ಟವನ್ನು ಕೊರೆದು ನಿರ್ಮಿಸಲಾಗಿದೆ. ಬರೀ ಸುತ್ತಿಗೆ ಮತ್ತು ಚಾಣು ಉಪಯೋಗಿಸಿ ನಿರ್ಮಿಸಿದ ಈ ದೇವಸ್ಥಾನದ ನಿರ್ಮಾಣ ಮತ್ತು ಅದರ ಕಾಲದ ಬಗ್ಗೆ ಬಹಳಷ್ಟು ಊಹಾ ಪೋಹಗಳು ಇಂದಿಗೂ ನಡೆಯುತ್ತಲೇ ಇದೆ. ಇದನ್ನು ರಾಷ್ಟ್ರಕೂಟರ ರಾಜನಾದ “ಕೃಷ್ಣ” ಸುಮಾರು ಕ್ರಿ.ಶ. ೭೫೦ರ ಆಸುಪಾಸಿನಲ್ಲಿ ನಿರ್ಮಿಸಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಅಲ್ಲಿ ನೆಡೆದಿರುವ ಕೆಲಸದ ಪ್ರಮಾಣವನ್ನು ನೋಡಿದರೆ ಅದು ಬಹುಶಃ ಸುಮಾರು ಶತಮಾನಗಳಿಂದಲೇ ಆಗಿರಬಹುದೆಂದು ಕೆಲವರ ಅಭಿಪ್ರಾಯವಾಗಿದೆ. ಏಕೆಂದರೆ ಸುಮಾರು ನಾಲ್ಕು ಲಕ್ಷ ಟನ್ನ್ಗಳಷ್ಟು ಬಂಡೆಯ ಚೂರುಗಳನ್ನು ಅಲ್ಲಿಂದ ತೆಗದಿರಬಹುದೆಂದು ಲೆಕ್ಕಿಸಲಾಗಿದೆ. ಹೀಗೆ ಭೂಮಿಯ ಮೇಲಿನ ಅತ್ಯಂತ ಗಟ್ಟಿಯಾದ ಪದಾರ್ಥವಾದ ಗ್ರಾನೈಟ್ ಶಿಲೆಯನ್ನು ಸ್ವಲ್ಪವೂ ಆಕಾರಕ್ಕೆ ಚ್ಯುತಿಬಾರದಂತೆ ಕತ್ತರಿಸಿ ತೆಗೆಯುವುದು ಇಂದಿನ ಲೇಸರ್ ಕಟಿಂಗ್ ತಂತ್ರಜ್ಞಾನದಿಂದಲೂ ಅಷ್ಟು ಸುಲಭ ಸಾಧ್ಯವಲ್ಲ. ಅಂತಹುದರಲ್ಲಿ ಸಾವಿರಾರು ವರ್ಷಗಳ ಹಿಂದೆ ಇಡೀ ಬಂಡೆಯನ್ನು ಕಲಾತ್ಮಕವಾಗಿ ಕೆತ್ತಿದ ಅಂದಿನ ಶಿಲ್ಪಿಗಳ ನೈಪುಣ್ಯತೆ, ಅರ್ಪಣಾ ಮನೋಭಾವ, ಏಕಾಗ್ರತೆ ಇವುಗಳು ನಮ್ಮ ಊಹೆಗೂ ನಿಲುಕದ್ದು. ಅದರಲ್ಲೂ ವಿಶೇಷವಾಗಿ ಇಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ಮತ್ತು ನೆಲ ಮಟ್ಟದಿಂದ ಎರಡು ಅಡಿಗೂ ಕಡಿಮೆ ಎತ್ತರದಲ್ಲಿ ಕೊರೆಯಲಾಗಿರುವ ಹಲವಾರು ರಂಧ್ರಗಳು. ಇವುಗಳ ಕೊನೆ ಕಣ್ಣಿಗೆ ಕಾಣುವುದಿಲ್ಲ. ಕೈಗೆಟುಕದ ಆಳಕ್ಕೆ ಅಂತಹಾ ಗ್ರಾನೈಟ್ ಶಿಲೆಯನ್ನು ಸಾವಿರಾರು ವರ್ಷಗಳ ಹಿಂದೆ ಯಾವ ತಾಂತ್ರಿಕತೆ ಬಳಸಿ ಕೊರೆದಿರಬಹುದೆಂಬುದು ನಿಗೂಢವಾಗಿದೆ. 

ಮತ್ತೊಂದು ವಿಶೇಷವೆಂದರೆ, ಅಂದಿನ ದಿನಗಳಲ್ಲಿ ಇಲ್ಲಿ ಕೆತ್ತನೆ ಕಾರ್ಯಕ್ಕಾಗಿ ಬೆಳಕಿಗೆ ಏನು ವ್ಯವಸ್ಥೆ ಮಾಡಿಕೊಂಡಿರಬಹುದೆಂಬುದು. ಏಕೆಂದರೆ, ಈ ದಿನಗಳಲ್ಲೇ ಈ ದೇವಾಲಯದ ಒಳಗೆ ಬೆಳಕು ಕಡಿಮೆ ಎಂದೇ ಹೇಳಬಹುದು. ದೈವಕೃಪೆಯೊಂದೇ ಈ ಅಸಾಧ್ಯ ವಾದುದನ್ನು ಸಾಧ್ಯ ಮಾಡಿ ತನ್ನ ಇರುವಿಕೆಯನ್ನು ಪ್ರಕಟಿಸಿದ್ದಾನೆ. ಇದನ್ನು ಪರಶಿವನ ವಾಸಸ್ಥಾನವಾದ ಹಿಮಾಲಯದ ಕೈಲಾಸ ಪರ್ವತದ ಪ್ರತಿರೂಪವಾಗಿ ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಹೇಳಿದ್ದಾರೆ.

“ದೇವಾಲಯದ ಬಗ್ಗೆ ಮಾಹಿತಿ”

ಕೈಲಾಸನಾಥ ದೇವಾಲಯದ ಒಟ್ಟು ಉದ್ದ ೮೨ ಮೀಟರ್, ಅಗಲ ೪೬ ಮೀಟರ್. ಬಂಡೆಯ ಮೇಲಿಂದ ಸುಮಾರು ೧೫೦ ಅಡಿಗೂ ಹೆಚ್ಚು ಆಳ ಕೊರೆಯಲಾಗಿದೆ. ದೇವಾಲಯದ ಮುಖ್ಯ ದೇವತೆಯಾಗಿ ಲಿಂಗರೂಪಿಯಾದ ಶಿವನಿದ್ದು, ಅದರ ಎದುರಿಗೆ ನಂದಿಯಿದೆ. ದೇವಾಲಯಕ್ಕೆ ಹೋಲಿಸಿದರೆ ದೇವಾಲಯದ ಶಿಖರದ ಮೇಲಿನ ಕಳಶವು ಸ್ವಲ್ಪ ಚಿಕ್ಕದೆಂದು ಹೇಳಬಹುದು. ದೇವಾಲಯದ ಮುಂಭಾಗದಲ್ಲಿ ಆನೆಯ ಪ್ರತಿಮೆಗಳಿವೆ ಹಾಗೂ ದೇವಾಲಯದ ಸುತ್ತೆಲ್ಲಾ ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ಕೆತ್ತಲಾಗಿದೆ. ದೇವಾಲಯದ ತಳ ಭಾಗದಲ್ಲಿರುವ ಆನೆಗಳನ್ನು ಇಡೀ ದೇವಾಲಯದ ಭಾರವನ್ನು ಹೊತ್ತಿರುವುದೇನೋ ಎನ್ನುವಂತೆ ಕೆತ್ತಲಾಗಿದೆ. ಶಿವ ದೇವಾಲಯ ಮತ್ತು ನಂದಿ ಮಂಟಪ ಎರಡೂ ಸುಮಾರು ಏಳು ಮೀಟರ್‌ಗಳಷ್ಟು ಎತ್ತರವಿದೆ. ನಂದಿ ಮಂಟಪ ಮತ್ತು ಮುಖಮಂಟಪದ ಮಧ್ಯೆ ಒಂದು ಸೇತುವೆಯನ್ನು ನಿರ್ಮಿಸಲಾಗಿದೆ. ದೇವಾಲಯದ ಎದುರಿಗೆ ಇರುವ ಸ್ತಂಭವು ಸುಮಾರು ನೂರು ಅಡಿಗೂ ಹೆಚ್ಚು ಎತ್ತರವಿದೆ. ಇದನ್ನು ಪಲ್ಲವ ಮತ್ತು ಚಾಲುಕ್ಯ ಶೈಲಿಯ ಶಿಲ್ಪಿಗಳು ನಿರ್ಮಿಸಿದ್ದಾರೆ. ಆ ಕಾಲದಲ್ಲಿ ಸಾವಿರಾರು ಜನ ಶಿವಭಕ್ತರು “ತಾವು ಶಿವನ ಸಾನಿಧ್ಯದಲ್ಲೇ ಇರಬೇಕೆಂದು, ತಮಗೆ ನಿತ್ಯವೂ ಆ ಪರಶಿವನ ದರ್ಶನವಾಗಿ, ಆತನ ಧ್ಯಾನದಲ್ಲಿಯೇ ಮುಳುಗಿರಬೇಕೆಂದು” ಬಯಕೆ ವ್ಯಕ್ತಪಡಿಸಿದಾಗ ಈ ದೇವಾಲಯವನ್ನು  ನಿರ್ಮಿಸಿ ಆ ಶಿವನ ಕೈಲಾಸವನ್ನೇ ಇಲ್ಲಿಗೆ ತರಲಾಯಿತೆಂದು ಪ್ರತೀತಿ ಇದೆ. ಇದನ್ನು ನಿಜವಾದ ಭೂ ಕೈಲಾಸವೆಂದೇ ಕರೆಯುತ್ತಾರೆ. ಇದನ್ನು ನೋಡಿದವರು ಮಾನವ ನಿರ್ಮಿತ ಎನ್ನುವುದರ ಬಗ್ಗೆ ಸಂದೇಹ ವ್ಯಕ್ತ ಪಡಿಸುತ್ತಾರೆ. ಇದನ್ನು ದೈವನಿರ್ಮಿತವೆಂದು ಭಾವಿಸುತ್ತಾರೆ. ಇದಕ್ಕೆ ಸರಿಯಾಗಿ ದೇವಾಲಯದ ನಿರ್ಮಾಣದ ಬಗ್ಗೆ ಐತಿಹಾಸಿಕವಾದ ಯಾವುದೇ ದಾಖಲೆಗಳು ದೊರಕುವುದಿಲ್ಲ.

ಈ ದೇವಾಲಯವು ಇರುವ ಸ್ಥಳ :

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಎಲ್ಲೋರಾದಲ್ಲಿರುವ ೩೪ ಗುಹಾಂತರ ದೇವಾಲಯಗಳಲ್ಲಿ ಈ ದೇವಾಲಯವು ೧೬ನೇ ಗುಹೆಯಲ್ಲಿದೆ. ಔರಂಗಾಬಾದ್ ನಿಂದ ಸುಮಾರು ೩೦ ಕಿಲೋಮೀಟರ್ ಅಂತರದಲ್ಲಿರುವ ಇಲ್ಲಿಗೆ ಹೋಗಿ ಬರಲು ಬಸ್ ಮತ್ತು ಇತರೆ ವ್ಯವಸ್ಥೆಗಳಿವೆ. ಔರಂಗಾಬಾದ್ ಜಿಲ್ಲಾ ಸ್ಥಳವಾದುದರಿಂದ ಅಲ್ಲಿ ಉಳಿಯುವ ವ್ಯವಸ್ಥೆಯಿದೆ.

ಈ ದೇವಾಲಯದ ಮಹಿಮೆಯನ್ನು ಸಹಿಸದ ಮೊಗಲ್ ದೊರೆ ಔರಂಗಾಜೇಬನು ಇದರ ಮೇಲೆ ಹಲವಾರು ಬಾರಿ ದಾಳಿ ನಡೆಸಿದನೆಂದೂ ಮತ್ತು ಅಷ್ಟಕ್ಕೇ ತೃಪ್ತನಾಗದ ಅವನು ಸುಮಾರು ಒಂದು ಸಾವಿರ ಸೈನಿಕರನ್ನು ಬಿಟ್ಟು ದೇವಾಲಯವನ್ನು ದ್ವಂಸಗೊಳಿಸಲು ಬಿಟ್ಟಿದ್ದನೆಂದು ಹೇಳಲಾಗಿದೆ. ಆದರ ಸ್ವತಃ ಪರಶಿವನ ನೆಲೆಯಾದ ಈ ದೇವಾಲಯವು ಕೆಲವು ಭಾಗಗಳಲ್ಲಿ ಸಣ್ಣಪುಟ್ಟ ಹಾನಿಯಾಗಿದ್ದು ಬಿಟ್ಟರೆ ಮತ್ತೇನು ಹೆಚ್ಚಿನ ಹಾನಿಗೊಳಗಾಗಿಲ್ಲ. ಆದರೆ ಈ ದೇವಾಲಯದ ದ್ವಂಸದ ಯೋಚನೆ ಬಂದಾಗಿನಿಂದ, ಆತನಿಗೆ ಹಿನ್ನೆಡೆ ಆರಂಭವಾಗಿ ಇಡೀ ಸಾಮ್ರಾಜ್ಯವೇ ಪತನಗೊಂಡು ನಾಶವಾಯಿತು. ಇಂತಹ ಮಹಿಮೆಯ ಕ್ಷೇತ್ರಕ್ಕೆ ಒಮ್ಮೆಯಾದರೂ ಹೋಗಬೇಕೆನಿಸುತ್ತೆ ಅಲ್ಲವೇ...?

-ಕೃಪೆ

Vishnu Sahasranama

ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ


೧. ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣು ಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣ ಮಾಡಿದÀರೆ ಒಳ್ಳೆಯದು.

೨. ವಿಷ್ಣು ಸಹಸ್ರನಾಮದಲ್ಲಿ ಎಲ್ಲಾ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರಿಗೆ ಅಷ್ಟೇ ಅಲ್ಲ ಕೇಳುವವರು ಕೂಡ ಪ್ರಯೋಜನ ಪಡೆಯುತ್ತೀರಿ.

೩.  ವಿಷ್ಣು ಸಹಸ್ರನಾಮ ಪಾರಾಯಣಕ್ಕೂ ಭೇದವೇನೂ ಇರುವುದಿಲ್ಲ. ಹಾಗೆ ಪಠಣಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭದಲ್ಲಿ ಯಾವುದೇ ಸಮಯದಲ್ಲಿ ನೀವು ಎಲ್ಲಿಯಾದರೂ ಪಠಿಸಬಹುದು.

೪. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ  ನಿಮ್ಮ ಹಿಂದಿನ ಜನ್ಮದ ಕರ್ಮದ ಪ್ರತಿಕ್ರಿಯೆಗಳಿಂದ ನಿಮ್ಮನ್ನು ಮುಕ್ತಗಒಳಿಸುತ್ತದೆ.

೫.  ವಿಷ್ಣು ಸಹಸ್ರನಾಮ ಪಠಸುವ ಭಕ್ತರಿಗೆ ಎಂದು ಭಯವಿಲ್ಲ. ಇದರಿಂದ ವಿಶೇಷ ಶಾಂತಿ, ವಚ್ಸು÷್ಸ, ಆತ್ಮವಿಶ್ವಾಸ, ಮನೋಬಲ, ದೇಹಬಲ ಇಂದ್ರಿಯಬಲ ಹೆಚ್ಚಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು.

೬.  ವಿಷ್ಣು ಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರವಾಗುತ್ತವೆ.

೭. ಶುದ್ಧ ಮನಸ್ಸಿನಿಂದ  ವಿಷ್ಣು ಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ, ಆದಿ ದೈವಿಕ ಹಾಗೂ ಆದಿ ಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ. 

೮.  ವಿಷ್ಣು ಸಹಸ್ರನಾಮ ಅಂದರೆ ಮಾಹಾವಿಷ್ಣುವಿನ ಸಹಸ್ರನಾಮ ಪಠಣ ಇದರಲ್ಲಿ ಅಲೌಕಿಕ ಶಕ್ತಿ ಇರುವುದನ್ನು ಅನೇಕ ಸಾಧಕರು ಕಂಡಿದ್ದಾರೆ, ಅನುಭವಿಸಿದ್ದಾರೆ.  ವಿಷ್ಣು ಸಹಸ್ರನಾಮ ಪಾರಾಯಣದಿಂದ ಕ್ಯಾನ್ಸರ್ ನಂತಹ ಭಯಂಕರ ಖಾಯಿಲೆಯಿಂದ ಹಿಡಿದು ಇನ್ನು ಇತರೆ ಕಾಯಿಲೆಗಳು ಕೂಡ ವಾಸಿಯಾಗುತ್ತವೆ.

೯. ಮನೆಯಲ್ಲಿ ಸಾಮೂಹಿಕ ಪಾರಾಯಣ ಪಠಿಸಿದರೆ ಮನೆಯ ವಾತಾವರಣವೇ ಬದಲಾಗುತ್ತದೆ. ಮನೆಯಲ್ಲಿ ಮೈಯಲ್ಲಿ ಮನಸ್ಸಿನಲ್ಲಿ ಆಧ್ಯಾತ್ಮಿಕ ಶಕ್ತಿ ಸಂಚಾರವಾದಂತಹ ಅನುಭವವಾಗುತ್ತದೆ. ಸಾಮೂಹಿಕ ಪಾರಾಯಣದಲ್ಲಿ ವಿಶೇಷ ಶಕ್ತಿ ಇದೆ.

೧೦.  ವಿಷ್ಣು ಸಹಸ್ರನಾಮಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೂತ್ರವನö್ನೆಲ್ಲ ವರ್ಗದವರು ಮತ್ತು ಎಲ್ಲ ವಯಸ್ಸಿನವರು ಪಠಿಸಬಹುದಾಗಿದೆ.

೧೧. ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ನಾವಾಗಿಯೇ ಪಠಣ ಮಾಡಿ ಬರಬಹುದು. ಸಮಯವಿಲ್ಲದವರು ತಮ್ಮ ತಮ್ಮö ಮನೆಯಲ್ಲಿಯೇ ನಿತ್ಯ ಪಠಣ ಮಾಡಿದರೆ ನಮಗೂ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರಕ್ಕೂ ವಿಶೇಷ ಶಕ್ತಿ ಪ್ರಾಪ್ತಿಯಾಗುವುದು.

೧೨. ಪ್ರಾಕೃತಿಕ ಸಮತೋಲನಕ್ಕಾಗಿ, ಗ್ರಾಮದ ಶಾಂತಿಗಾಗಿ, ಕುಟುಂಬ ರಕ್ಷಣೆಗಾಗಿ, ನಮ್ಮೆಲ್ಲರ ಉನ್ನತಿಗಾಗಿ ನಿತ್ಯ ಪಠಿಸೋಣ.