Friday, September 30, 2022

Sneha

ಸ್ನೇಹ- ಗೆಳೆತನದ ಹಾದಿಯಲ್ಲಿ ಸಂಬಂಧಗಳ ಅನುಬಂಧ

 ನಮ್ಮ  ನಿತ್ಯದ  ಜೀವನದಲ್ಲಿ  ನಮಗೆ ಪರಿಚಯ  ಆಗುವವರೆಲ್ಲರೂ ಫ್ರೆಂಡ್ಸ್  ಆಗಲಾರರು. ಸ್ನೇಹ  ಎನ್ನುವುದು   ಒಂದು ಪವಿತ್ರವಾದ  ಸಂಬಂಧ. ಗೆಳೆಯರನ್ನು ಸಂಪಾದಿಸುವುದು ಗೆಳೆತನವನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ತುಂಬಿದ ಬದುಕನ್ನು ನಡೆಸುವ ಪರಿಯಲ್ಲಿ ಜೀವನಕ್ಕೆ ಅವಶ್ಯ ಎನ್ನಿಸುವುದನ್ನೆಲ್ಲ ಸಂಪಾದಿಸುತ್ತಾ ಹೋಗುತ್ತೇವೆ, ಆದರೆ ಅದೆಲ್ಲಕ್ಕಿಂತಲೂ  ಮಿಗಿಲಾಗಿ ನಾವು ಸಂಪಾದಿಸ  ಬೇಕಾಗಿರುವುದು ಸ್ನೇಹ, ಪ್ರೀತಿ, ವಿಶ್ವಾಸ, ಹಾಗು ಉತ್ತಮ ನಡತೆಯನ್ನು.

          ಸ್ನೇಹಿತರನ್ನು ಸಂಪಾದಿಸುವುದು ಕಷ್ಟವಾದರು ಬಹು ಸಹಜವಾದದ್ದು, ವಿಶ್ವಾಸದ ನಿಟ್ಟಿನಲ್ಲಿ ಎಲ್ಲರೊಂದಿಗೂ ಆತ್ಮೀಯವಾಗಿದ್ದರೆ  ಎಲ್ಲರ ಸ್ನೇಹವನ್ನು ಸಂಪಾದಿಸಬಹುದು. ಗೆಳೆಯರಿದ್ದಾರೆ ಜೀವನಕ್ಕೆ ಒಂದು ಹೊಸ ರೂಪು ಬರಲು ಸಾಧ್ಯ.  ಆ ಗೆಳೆತನದ ಹಾದಿಯಲ್ಲಿ ಸಂಬಂಧಗಳ ಅನುಬಂಧಗಳನ್ನು ಕಾಣಬಹುದು.
       
         
ಇಂಗ್ಲೀಷ್ ನಲ್ಲಿ ಹೇಳುತ್ತಾರಲ್ಲ a friend in need is a friend in deed ಎಂಬ ಮಾತನ್ನು ನೆನೆಪುಮಾಡಿಕೊಳ್ಳಿ. ಕಷ್ಟದಲ್ಲಿರುವಾಗಲೂ ಸಹಾಯಕ್ಕೆ ಬರುವವನೇ ಸ್ನೇಹಿತ. ಅವನು ಜೀವನ ಪರ್ಯಂತವೂ ಸ್ನೇಹಿತನಾಗಿಯೇ ಉಳಿಯುತ್ತಾನೆ. ಒಬ್ಬ ಉತ್ತಮ ಗೆಳೆಯ ತನ್ನ ಗೆಳೆಯನ ಹಿತಾಸಕ್ತಿಯನ್ನು ಬಯಸುತ್ತಾನೆ. ಆತನ ಬಗ್ಗೆ ಚೆನ್ನಾಗಿ ಅರಿತಿರುತ್ತಾನೆ. ಅವರ ಮಧ್ಯೆ ಒಂದೂ ಮುಚ್ಚೂ ಮರೆ ಇರುವುದಿಲ್ಲ. ಅವರಲ್ಲಿರುವ ಬಾಂಧವ್ಯವನ್ನು ಯಾರಿಂದಲೂ ಬಿಡಿಸಲಾಗುವುದಿಲ್ಲ.
       
         
ನೀವೇ ಯೋಚನೆ ಮಾಡಿ, ಜೀವನದಲ್ಲಿ ಫ್ರೆಂಡ್ಸ್ ಇದ್ದರೆ ಎಷ್ಟು ಚೆನ್ನಾಗಿರುತ್ತದೆ. ನಮ್ಮ ನೋವು ನಲಿವುಗಳನ್ನು ಅಂಚಿಕೊಳ್ಳಲು ಒಂದು ಹೃದಯದ ಅನಿವಾರ್ಯ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ. ಆ ಹೃದಯ ತಾಯಿಯದ್ದಾಗಿರಬಹುದು, ತಂದೆಯದ್ದಾಗಿರಬಹುದು, ಅಥವ ಅಣ್ಣ, ತಮ್ಮ, ಅಕ್ಕ, ತಂಗಿ, ಹೆಂಡತಿ, ಗೆಳತಿಯಾಗಿರಬಹುದು. ಆದರೆ ಅವರೆಲ್ಲರೂ ನಂಟಸ್ತರಾಗುತ್ತಾರೆ. ಯಾವ ನಂಟು ಇಲ್ಲದೆ ಒಂದು ಸಂಬಂಧವನ್ನು ಕಲ್ಪಿಸಿಕೊಡುವುದೇ ಸ್ನೇಹ.
     
         
ಹೀಗೆ ಯೋಚಿಸುತ್ತಾ ಹೋದರೆ ನಮ್ಮ ಸ್ನೇಹಿತರೆಲ್ಲಾ ನೆನಪಿಗೆ ಬರುತ್ತಾರೆ. ಅವರೊಂದಿಗೆ ಆಡಿದ ಮಾತುಗಳು, ಸ್ಕೂಲು, ಕಾಲೇಜುಗಳ ಆವರಣದಲ್ಲಿ ಕಳೆದ ಕ್ಷಣಗಳು, ಕ್ಯಾಂಪಸ್ ಗಳಲ್ಲಿ ಅಡ್ಡಾಡಿದ ನೆನಪುಗಳು, ಅವರಿವರನ್ನು ಗೇಲಿಮಾಡುತ್ತ  ನಗಾಡಿಕೊಂಡು ತಿರುಗಾಡಿದ ಆ ದಿನಗಳು ಕಣ್ಣಿನ ಮುಂದೆ ಫಿಲಂ ನೋಡುವಾಗ ಕಾಣುವ ದೃಶ್ಯಗಳಂತೆ ಗೋಚರಿಸುತ್ತದೆ. ಕ್ಲಾಸ್ ಗಳನ್ನು ಬಂಕ್ ಮಾಡಿ ಸಿನಿಮಾಗಳಿಗೆ ಹೋದ ನೆನಪುಗಳು, ರಿಸಲ್ಟ್ ಡೌನ್ ಆಗಿದ್ದಕ್ಕೆ ಬೈಗುಳಗಳು ಸದ್ದು ಎಲ್ಲವು ಫ್ಲಾಶ್ ಆಗುತ್ತದೆ.
       
         
ಅಂತಹ ಸುಮಧುರವಾದ ಘಟನೆಗಳು ನಮ್ಮ ಜೀವನದಲ್ಲಿ ನಡೆಯುವುದು ಕೇವಲ ಫ್ರೆಂಡ್ಸ್ ಜೋತೆಯಲ್ಲಿದ್ದಾಗ ಮಾತ್ರ. ಎಲ್ಲರೂ ಕೂಡಿದ್ದಾಗ ಜಗವೇ ನಮ್ಮ ಅಂಗೈನಲ್ಲಿದೆಯೋ ಏನೋ ಎಂಬ ಭಾವನೆ ಎಲ್ಲರಲ್ಲೂ ಮೂಡುವುದು ಸಹಜ. ಎಲ್ಲರೊಂದಿಗೆ ಕೂಡಿ ಮಾಡುವ ಮೋಜು ಮಸ್ತಿಗಳನ್ನೆಲ್ಲಾ ಒಂಟಿಯಾಗಿ ಮಾಡಲು ಸಾದ್ಯವೇ? ಅದಕ್ಕೆ ಜೀವನದಲ್ಲಿ ಏನನ್ನೂ ಸಂಪದಿಸದಿದ್ದರೂ ಗೆಳೆತನವನ್ನು ಸಂಪದಿಸೋಣ, ಎಲ್ಲರ ಪ್ರೀತಿಗೆ ಪಾತ್ರರಾಗೋಣ. ಉತ್ತಮ ನಡತೆಯನ್ನು, ಉತ್ತಮ ಸ್ನೇಹವನ್ನು ಸಂಪಾದಿಸೋಣ. ಬಾಳನ್ನು ಸುಂದರವಾಗಿಸಿ ಅತ್ಯಂತ ಸುಗಮವಾಗಿ ಕಳೆಯೋಣ.  

- ಜಿ.ಕೆ. 

ವಾತ್ಸಲ್ಯದ ದಡದಲ್ಲಿ ಕನವರಿಕೆಯ ಕವಲು

 

ಕ್ಲಾಸಿನಲ್ಲಿ ಬೇರೆಯವರ ಪರಿಚಯ ಅಷ್ಟಾಗಿ ಇಲ್ಲದ ಕಾರಣ ಅವಳನ್ನೇ ಮಾತನಾಡಿಸಲು ಆರಂಬಿಸಿದೆ. ಅವಳಿಗೂ ಯಾರ ಪರಿಚಯ ಇಲ್ಲದ ಕಾರಣ ನನ್ನೊಂದಿಗೆ ಬಹಳ  ಆತ್ಮಿಯವಾಗಿದ್ದಳು. 
         
         
ಹೀಗೆ ಕಾಲ ಕಳೆಯ ತೊಡಗಿತು. ಅವಳೊಂದಿಗೆ ಆಡಿದ ಮಾತುಗಳು, ಕಳೆದ  ಕ್ಷಣಗಳು, ಭೇಟಿಯಾದ  ಸ್ಥಳಗಳು ಎಲ್ಲವೂ ನನ್ನೆದೆಯ ಅಂತರಾಳದಲ್ಲಿ ಅಡಗಿ ಕುಂತಿದೆ. ಅವಳೊಂದಿಗಿನ ಆತ್ಮೀಯತೆ ಕಾಲೇಜಿನಲ್ಲಿ ಯಾರೊಂದಿಗೂ ನನಗಿರಲಿಲ್ಲ.  ಎಲ್ಲದಕ್ಕೂ ಅವಳ ಮೇಲೆ ಅವಲಂಬಿತನಗುತ್ತಿದ್ದೆ.  ಅವಳೂ ಸಹ ನನೊಂದಿಗೆ ತುಂಬಾ ಸಲಿಗೆ ಇಂದ ಇದ್ದಳು.  ನಮಿಬ್ಬರ  ನಡುವಿನ ಸ್ನೇಹವನ್ನು ನಾನೇ ಪ್ರೀತಿ ಎಂದು ಭವಿಸಿದ್ದೆನೋ ಅಥವಾ ನಿಜವಾಗಿಯೂ ಪ್ರೀತಿಯಾ? ಎಂದು ಈಗಲು ನನಗೆ  ತಿಳಿಯದು. "ಅವಳಲ್ಲಿದ್ದ  ವಾತ್ಸಲ್ಯದ  ಮುಂದೆ  ನನ್ನ  ಪ್ರೀತಿ  ನಿಲ್ಲಲೇ ಇಲ್ಲ."  ಅವಳೂ  ಸಹ  ನನ್ನನ್ನು ಪ್ರೀತಿಸುತ್ತಿದ್ದಳೋ  ಇಲ್ಲವೋ  ನನಗೆ  ತಿಳಿದಿಲ್ಲ, ಆದರೆ ನನಗೊಂತ್ತು  ಅವಳ  ಮೇಲೆ  ಅತೀವವಾದ ವಿಶ್ವಾಸ  ಇತ್ತು.  ನನ್ನ ಹಿಂಜರಿಕೆಯೋ, ಎದರಿಕೆಯೋ ಅಥವ  ಮುಜುಗರವೋ ನಾನು ಅವಳೊಂದಿಗೆ ಈ  ವಿಷಯವನ್ನು ಚರ್ಚಿಸಲೇ  ಇಲ್ಲ. ಅವಳೆದುರಿನಲ್ಲಿ ನನ್ನ ಮಾತೆಲ್ಲವೂಮೌನವಾಗಿಬಿಡುತ್ತಿತ್ತು. 
         
         
  ನೆನಪುಗಳು, ಎಳೆ  ವಯಸ್ಸಿನಲ್ಲಿ ಮೃದು ಮನಸ್ಸುಗಳ ಆ ಪ್ರೀತಿ ಇಂದಿಗೂ ಅತಿ ಮಧುರ. ನನ್ನ ಬಾಳಿನುದ್ದಕ್ಕೂ  ಈಸವಿನೆನಪುಗಳು ಸನಿಹದಲ್ಲಿರುತ್ತದೆ. ಅವಳ ಮನಸ್ಸಿನಲ್ಲಿ ನನಿರುತ್ತೇನೋ ಇಲ್ಲವೋ? ಆದರೆ  ನನ್ನೆದೆಯಲ್ಲಿ ಅವಳಿಗೊಂದು ಜಾಗ ಕಂಡಿತ ಇದೆ. 

  ಅವಳ  ಮೇಲೆ ನನಗಿದದ್ದು ಕೇವಲ ಆಕರ್ಷಣೆಯೋ, ಸ್ನೇಹವೋ, ಪ್ರೇಮವೋ, ಯಾವ ಭಂದವೋ ನನಗೆ ತಿಳಿಯುವ ವೇಳೆಗೆ  ನಮ್ಮ ಪರಿಕ್ಷೆಯೂ ಅತ್ತಿರ ಬಂದಿತ್ತು. ಕಡೆಗೆ ಪರಿಕ್ಷೆಯಲ್ಲಾ ಮುಗಿದು ಹೋದರೂ ಸಹ  ನನ್ನ  ಪ್ರೀತಿಯನ್ನು  ಅವಳ  ಮುಂದೆ ಇಡಲೇ ಇಲ್ಲ. ನಂತರದಲ್ಲಿ ಅವಳೊಂದು ತೀರಕ್ಕೆ  ಹೋದಳು ನಾನೊಂದು ತೀರಕ್ಕೆ ಹೋದೆ. ನನ್ನ ಪ್ರೀತಿ ಪ್ರೀತಿಯಗಿಯೇ ಉಳಿಯಿತು ಅವಳ ವಾತ್ಸಲ್ಯದ ಎದುರಿನಲ್ಲಿ. 
         
         
ಎಳೆ ವಯಸ್ಸಿನಲ್ಲಿ ನಡೆದು ಹೋದ ಒಂದು ಸಣ್ಣ  ಪ್ರೇಮ  ಕಥೆ  ಎಂದಿಗೂ ಅಳಿಸಲಾಗದೆ ನನ್ನ ಹೃದಯಾಂತರಾಳದಲ್ಲಿ ಅಮರವಾಗಿದೆ. 
- ಜಿ.ಕೆ.

Wednesday, September 28, 2022

Youth in the development of the country...

ದೇಶದ ಅಭಿವೃದ್ದಿಯಲ್ಲಿ ಯುವಕರು...

‘ರಾಷ್ಟ್ರ’ ಎಂದರೆ ಕೇವಲ ಉದ್ದಗಲಕ್ಕೂ ಹರಡಿದ ಭೂಮಿ, ಎತ್ತರವಾಗಿ ನಿಂತ ಪರ್ವತ ಮಾಲೆ, ಸುತ್ತಿಹರಿವ ನದಿಗಳು, ಹಾಗೂ ಹರಿಯುತ್ತಿರುವ ಹಳ್ಳ ಕೊಳ್ಳ -ಇತ್ಯಾದಿ ಭೌಗೋಲಿಕ ಲಕ್ಷಣಗಳಷ್ಟೇ ಅಲ್ಲ. ಅಲ್ಲಿ ಹುಟ್ಟಿ ಬೆಳೆದು ಜೀವಿಸುತ್ತಿರುವ ಸಹಸ್ರಾರು ಮಾನವ ಜೀವಿಗಳು ಒಂದು ರಾಷ್ಟ್ರವನ್ನು ರೂಪಿಸುತ್ತವೆ. ನಿಸರ್ಗ, ನೈಜವಾಗಿ ನೀಡಿದ ನೆಲ, ನೀರು, ನಿಕ್ಷೇಪಿತ ನಿಧಿಗಳೆಲ್ಲ ನಾಡಿನ ನಿಜವಾದ ನಿಧಿಗಳೇನೋ ಸರಿ. ಆದರೆ ಅವುಗಳ ನ್ಯಾಯಸಮ್ಮತ ನಿರ್ವಹಣೆ ನಾಡಿನ ನಿವಾಸಿಗಳ ನಿಪುಣತೆಯಲ್ಲಿದೆ. ಅಷ್ಟಕ್ಕೂ ರಾಷ್ಟ್ರಾಭಿವೃದ್ದಿ ಎಂದರೆ- ರಾಷ್ಟ್ರದ ಸರ್ವತೋಮುಖ  ಉತ್ಕರ್ಷ, ಉನ್ನತಿ, ಉತ್ಥಾನ, ಸರ್ವತೋಮುಖ  ಅಭಿವೃದ್ಧಿಯೆಂದರೆ ಆ ರಾಷ್ಟ್ರದ ಚಾರಿತ್ರö್ಯ ಶಿಕ್ಷಣ, ಉದ್ಯೋಗ, ವಿಜ್ಞಾನ, ಕಲೆ, ಕೌಶಲ್ಯ, ಕ್ರೀಡೆ ಹೀಗೆ ಅನೇಕ ಆಯಾಮಗಳಲ್ಲಿ ಸಾಧಿಸಿರುವ ಪರಿಣತಿ, ರಾಷ್ಟ್ರದ ಜನತೆಗಳಲ್ಲಿ ಈ ಎಲ್ಲ ಆಯಾಮಗಳ ಪರಿಣತಿ ಇದ್ದಾಗಲೇ ರಾಷ್ಟ್ರಾಭಿವೃದ್ಧಿ ರಾಷ್ಟ್ರದ ಅಭ್ಯುದಯ ಸಾಧ್ಯವಾಗುವುದು.

ಈ ಎಲ್ಲ ಆಯಾಮಗಳಲ್ಲಿ ಪರಿಣತಿ ಪಡೆಯಲು ನಾವು ಚಿಕ್ಕ ಮಕ್ಕಳಿದ್ದಾಗಲೇ ಅದಕ್ಕಾಗಿ ಪರಿಶ್ರಮಪಡಬೇಕಾಗುತ್ತದೆ. ಮಕ್ಕಳಿಗೆ ಈ ಸಂಸ್ಕಾರವನ್ನು ಕೊಡುವುದಕ್ಕಾಗಿ ನಾವು ಅನೇಕ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಅಲ್ಲದೆ ಆ ಯೋಜನೆಗಳ ಸಾಕ್ಷಾತ್ಕಾರಕ್ಕೆ ಶ್ರಮಿಸಬೇಕಾಗುತ್ತದೆ. ಈ ಎಲ್ಲ ಸಾಮರ್ಥ್ಯಗಳನ್ನು ಯಾರೂ ಹುಟ್ಟಿದಾಗಿನಿಂದಲೇ ಹೊಂದಿರಲಾರರು. ಇವುಗಳನ್ನು ನಾವು ಪ್ರಯತ್ನಪೂರ್ವಕವಾಗಿ ಪಡೆದುಕೊಳ್ಳಬೇಕಾಗುತ್ತದೆ.  ಅಂತೆಯೇ ಮಕ್ಕಳಲ್ಲಿ ಅವರ ವಿದ್ಯಾರ್ಥಿ ಜೀವನದಲ್ಲಿಯೇ ಈ  ಎಲ್ಲ ಗುಣಗಳನ್ನೂ, ವಿದ್ಯೆಗಳನ್ನೂ, ಕಲೆಗಳನ್ನೂ ಅಳವಡಿಸಬೇಕಾ ಗುತ್ತದೆ.

ಮಕ್ಕಳನ್ನು ‘ಅವರಿನ್ನೂ ಚಿಕ್ಕವರು, ರಾಷ್ಟ್ರಾಭಿವೃದ್ಧಿಯಲ್ಲಿ ಅವರೇನು ಮಾಡಬಲ್ಲರು?’ ಎನ್ನಬೇಡಿ. ‘ಮೂರು ವರ್ಷದ ಬುದ್ಧಿ ನೂರು ವರ್ಷದವರೆಗೆ’ ಎಂದು ಗಾದೆಯಿದೆ. ಆದ್ದರಿಂದಲೇ ರಾಷ್ಟ್ರದ ಅಭ್ಯುದಯಕ್ಕೆ ಆವಶ್ಯಕವಾದ ಆಯಾಮಗಳ ಪರಿಣತಿ  ಪಡೆಯಲು ಈಗಿನಿಂದಲೇ ಅವರಿಗೆ ತರಬೇತಿ ನೀಡಬೇಕು. ಇಂದಿನ ಮಕ್ಕಳೇ ನಾಳಿನ ನಾಗರಿಕರು. ಆದ್ದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮನೋಧರ್ಮ ರೂಪಗೊಳ್ಳಬೇಕು. ಅವರು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಾಗಿದ್ದಾಗಲೇ ಅವರ ದೃಷ್ಟಿಕೋನವನ್ನು ಸಂಸ್ಕರಿಸಬೇಕು. ಅ ಎಳೆಯ ಮನಸ್ಸುಗಳಲ್ಲಿಯೇ ರಾಷ್ಟ್ರಭಕ್ತಿ, ರಾಷ್ಟ್ರಾಭಿಮಾನವನ್ನು ಬಿತ್ತಿ ಪೋಷಿಸುತ್ತ ಬರಬೇಕು.

ವಿದ್ಯಾರ್ಥಿಗಳಲ್ಲಿ ಈ ಮನೋಧರ್ಮವನ್ನು ಮೂಡಿಸಲು ದೃಷ್ಟಿಕೋನವನ್ನು ಸೃಷ್ಟಿಸಲು ಶಾಲಾ ಕಾಲೇಜುಗಳು ಯೋಜನೆ ರಚಿಸಬೇಕಾಗಿದೆ. ಯಾಕೆಂದರೆ ಇಂದಿನ ವಿದ್ಯಾರ್ಥಿಗಳೇ ನಾಳೆ ನಮ್ಮ ರಾಷ್ಟ್ರದ ಅಭಿವೃದ್ಧಿಗೆ ಕ್ರಿಯಾಶೀಲರಾಗಬೇಕಾಗಿದ್ದು, ಅಂತೆಯೇ ರಾಷ್ಟ್ರದ ಉನ್ನತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಖಂಡಿತವಾಗಿಯೂ ಪ್ರಮುಖವಾದದ್ದು, ವಿಶೇಷವಾದದ್ದು. ಅವರ ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ವಿದ್ಯಾರ್ಥಿಗಳಿಗೆ ತರಬೇತಿಯನ್ನು ಪರಿಣಾಮಕಾರಿಯಾಗಿ ನೀಡಲು ಶಾಲಾ, ಕಾಲೇಜುಗಳಲ್ಲದೆ ಶಿಕ್ಷಣ ವಿಭಾಗವೂ ಸಹ ಅತ್ಯಂತ ಗಹನವಾಗಿ ವಿಚಾರಶೀಲರಾಗಬೇಕು.  ವಿದ್ಯಾರ್ಥಿಗಳಿಗೆ ಈ ರೀತಿಯ ಯೋಗ್ಯ ತರಬೇತಿ ನೀಡಲು ಪೂರಕವಾದ ಪಾಠ್ಯಕ್ರಮ ತಯಾರಿಸುವುದು ಹಾಗೂ ಅವರ ಪಠ್ಯಪುಸ್ತಕಗಳಲ್ಲಿ ಈ ಪಾಠ್ಯಕ್ರಮವನ್ನು ಅಳವಡಿಸುವುದು ತುಂಬಾ ಅವಶ್ಯಕ.

ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಒಳ್ಳೆ ಶಿಕ್ಷಣ ಪಡೆಯುವುದಲ್ಲದೆ ಒಳ್ಳೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಗ ಅವರ ಚಾರಿತ್ರö್ಯ ಗೌರವಯುತವಾಗುತ್ತದೆ. ರಾಷ್ಟ್ರಾಭಿವೃದ್ದಿಗೆ ಕೆಲ ಅವಶ್ಯಕ ಮೌಲ್ಯಗಳನ್ನು ಈಗ ವಿವೇಚಿಸೋಣ -

ದೇಶಭಕ್ತಿ - ಚಿಕ್ಕಂದಿನಿಂದಲೂ ದೇಶಪ್ರೇಮ, ದೇಶಾಭಿಮಾನವನ್ನು ಮಕ್ಕಳ ನರ ನರಗಳಲ್ಲಿ ತುಂಬಬೇಕು.  ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರೀಯ ಪರ್ವಗಳ ಕುರಿತು ಮಕ್ಕಳಲ್ಲಿ ಅಭಿಮಾನ ಹುಟ್ಟಿಸಬೇಕು. ಅವುಗಳ ವಿಷಯಕ್ಕೆ ಅರಿವನ್ನು ಮೂಡಿಸಬೇಕು. ದೇಶಭಕ್ತಿಗೆ ವಯಸ್ಸಿನ ಮಾನದಂಡ ಬೇಕಿಲ್ಲ. ಉದಾಹರಣೆಗೆ ನಮ್ಮ ಸ್ವಾತಂತ್ರö್ಯ ಹೋರಾಟದಲ್ಲಿ ಸಕ್ರಿಯ ಭಾಗವಹಿಸಿದ ಅನೇಕ ನಾಯಕರು ಶಾಲೆ, ಕಾಲೇಜ್‌ನಲ್ಲಿ ಇರುವಾಗಲೇ ಹೋರಾಟದಲ್ಲಿ ಭಾಗವಹಿಸಿದ್ದರು. 

ನನ್ನ ಬಾಲ್ಯದ ದಿನಗಳನ್ನು ನೆನೆದಾಗ ನನಗೆ ಅಭಿಮಾನ ಎನ್ನಿಸುವುದು, ನಾವೂ ಕೂಡ ಸ್ವಾತಂತ್ರö್ಯದ ಹೋರಾಟದಲ್ಲಿ ಅಳಿಲು ಸೇವೆ ಮಾಡಿದ್ದೇವೆ ಎಂದು. ನನಗಾಗ ಆರು ವರ್ಷ ಪ್ರತಿದಿನ ಬೆಳಗಿನ ಜಾವ ನಮ್ಮ ನೆರೆಯ ಮಕ್ಕಳೆಲ್ಲ ಸೇರಿ ರಾಷ್ಟ್ರಭಕ್ತಿ ಗೀತೆಗಳನ್ನು ಹೇಳುತ್ತ ಕೈಯಲ್ಲಿ ಧ್ವಜ ಹಿಡಿದುಕೊಂಡು ‘ಪ್ರಭಾತ ಫೇರಿ’ಗೆ ಹೋಗುತ್ತಿದ್ದೆವು. ತೋಟದಲ್ಲಿ ಗಿಡಗಳಿಗೆ ಸೀರೆ ಕಟ್ಟಿ ವೇದಿಕೆ ತಯಾರಿಸಿಕೊಂಡು ಭಾಷಣ ಮಾಡುತ್ತಿದ್ದೆವು. ಘೋಷಣೆ ಕೂಗುತ್ತಿದ್ದೆವು. ದಂಟಿನಿಂದ ಮಾಡಿದ ಆಟಿಗೆ ಚಕ್ಕಡಿಗಳಿಗೆ ಪುಟ್ಟ ಧ್ವಜ ಹಚ್ಚಿ ಎಳೆಯುತ್ತಿದ್ದೆವು.

ಈಗಲೂ ಮಕ್ಕಳಿಗೆ ಶಾಲೆಗಳಲ್ಲಿ ದೇಶಭಕ್ತಿ ಗೀತೆಗಳನ್ನು ಕಲಿಸಬೇಕು. ಹೋರಾಟಗಾರರ ಜೀವನ ಚರಿತ್ರೆಗಳನ್ನು ಓದಲು ಪ್ರೋತ್ಸಾಹಿಸಬೇಕು. ಅವರ ಜೀವನದ ಘಟನೆಗಳನ್ನು ನಾಟಕ ರೂಪದಲ್ಲಿ ಪ್ರದರ್ಶಿಸಬೇಕು. ಇಂದಿನ ಶಾಸನ ಪದ್ಧತಿಯ ಕುರಿತು ಚರ್ಚೆ ನಡೆಸಬೇಕು.

ಸಮಯ ಪ್ರಜ್ಞೆ - ನಮ್ಮ ಜೀವನದಲ್ಲಿ ಸಮಯ ತುಂಬಾ ಅಮೂಲ್ಯವಾದದ್ದು. ಅಂತೆಯೇ ಒಂದು ನಿಮಿಷವನ್ನೂ ಅರ್ಥಹೀನವಾಗಿ ವ್ಯಯಿಸದೆ ರಚನಾತ್ಮಕ ಕಾರ್ಯಗಳನ್ನು ಮಾಡುತ್ತ ಆರ್ಥಪೂರ್ಣವಾಗಿ ಸಮಯದ ಸದುಪಯೋಗ ಮಾಡಿಕೊಳ್ಳಬೇಕು.

ಉದ್ಯೋಗಶೀಲತೆ - ಕಾರ್ಯಶೀಲತೆ ಅಥವಾ ಇಂಗ್ಲೀಷ್‌ನಲ್ಲಿ ‘Woಡಿಞ ಛಿuಟಣuಡಿe’ಎಂದು ಹೇಳುವ ಈ ಮೌಲ್ಯವನ್ನು ನಮ್ಮದಾಗಿಸಿಕೊಳ್ಳಬೇಕು. ಸೋಮಾರಿತನವೂ ತರವಲ್ಲ ಹಾಗೇ ‘ನನ್ನ ಕೈಯಿಂದ ಆಗಲಾರದು’ ಎಂಬ ಧೋರಣೆಯೂ ತರವಲ್ಲ. ‘Woಡಿಞ is ತಿoಡಿshiಠಿ’ ಹಾಗೆ ‘ಕಾಯಕವೇ ಕೈಲಾಸ’ ಎಂಬುದನ್ನು ಮನಗಂಡು ನಾವು ಮಾಡುವ ಒಳ್ಳೆಯ ಕೆಲಸವನ್ನೇ ನಮ್ಮ ದೇವರ ಪೂಜೆ ಎಂದುಕೊಳ್ಳಲು ವಿದ್ಯಾರ್ಥಿಗಳಿಗೆ ಕಲಿಸಬೇಕು.

ಪರಿಸರ ಸಂರಕ್ಷಣೆ - ಪರಿಸರವನ್ನು ಪ್ರದೂಷಣೆಯಿಂದ ಮುಕ್ತ ಮಾಡಿದಾಗ ರಾಷ್ಟ್ರ ರೋಗಮುಕ್ತವೂ ಆಗಬಹುದು. ಆದ್ದರಿಂದ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಲು ಮಕ್ಕಳಿಗೆ ತರಬೇತಿ ನೀಡಬೇಕು. ಹಾಗೇ ಮಕ್ಕಳಲ್ಲಿ ಮರಗಿಡಗಳನ್ನು ನೆಡಲು ಪ್ರೇರೇಪಿಸಬೇಕು. ವಿದ್ಯಾರ್ಥಿದೆಶೆಯಿಂದಲೆ ಈ ಅಭ್ಯಾಸ ಅವರಿಗೆ ಆಗಬೇಕಾದ್ದು ಅವಶ್ಯಕ.

ಸಹಜೀವನ - ಮಕ್ಕಳು ಪರಸ್ಪರ ದ್ವೇಷವನ್ನು ತೊರೆದು ಐಕ್ಯತೆಯಿಂದ ಸಹಜೀವನ ನಡೆಸಲು ಕಲಿಯಬೇಕು. ಈ  ಭಾವನೆಯನ್ನು ಮನೆಯ ಜನ ಹಾಗೇ ಶಿಕ್ಷಕರು ಪೋಷಿಸಬೇಕು. “ಐಕ್ಯತೆಯಲ್ಲಿ ಶಕ್ತಿಯಿದೆ” ಎಂದು ಮನಗಾಣಿಸಬೇಕು. ಅವರು ಉಳಿದವರ ದುಃಖದಲ್ಲಿ ಸಂವೇದಿಸಲಿ.

ಧರ್ಮ ನಿರಪೇಕ್ಷತೆ - ಮಕ್ಕಳಲ್ಲಿ ಧರ್ಮ, ಜಾತಿ, ಪಂಥಗಳ ಭೇದಭಾವ ಇರುವುದು ಬೇಡ. ಚಿಕ್ಕವರಿದ್ದಾಗಿನಿಂದಲೇ ಅವರಲ್ಲಿ ವಿಶ್ವಬಂಧುತ್ವ, ವಿಶ್ವ ಕುಟುಂಬದ ಭಾವನೆ ಬೆಳೆಸಬೇಕು.

ಮಿತವ್ಯಯ - ಮೊಟ್ಟ ಮೊದಲು ಮಕ್ಕಳು ಕಾಸಿಗೆ ಮಹತ್ವ ಕೊಡದೆ ಮಾನವತೆಗೆ ಗೌರವ ನೀಡಲು. ಅಲ್ಲದೆ       ಅನವಶ್ಯಕ ವಸ್ತುಗಳಿಗಾಗಿ ದುಡ್ಡು ವ್ಯಯಿಸುವುದು ಬೇಡ. ಈ ದೃಷ್ಟಿಕೋನ ಮುಂದೆ ದೇಶದ ಸಂಪತ್ತನ್ನು ಕೂಡಾ ಅಪವ್ಯಯ ಮಾಡದಂತೆ ಸಹಕರಿಸುತ್ತದೆ.

ಹವ್ಯಾಸಗಳ ಪೋಷಣೆ - ಪ್ರತಿಯೊಬ್ಬ ಮಗುವಿನಲ್ಲೂ ಏನಿಲ್ಲ ಏನು ಪ್ರತಿಭೆ ಇದ್ದೇ ಇರುತ್ತದೆ. ತಂದೆ-ತಾಯಿಗಳು ಹಾಗೂ ಶಿಕ್ಷಕರು ಈ ಪ್ರತಿಭೆಯನ್ನು ಗುರುತಿಸಿ ಪೋಷಿಸಬೇಕು, ಮಕ್ಕಳನ್ನು ಪ್ರೋತ್ಸಾಹಿಸಬೇಕು. ಅದು ಸಾಹಿತ್ಯ,  ಸಂಗೀತ, ನೃತ್ಯ,  ಚಿತ್ರಕಲೆ, ಹಸ್ತಕಲೆ ಇವುಗಳಲ್ಲಿ ಒಂದಾಗಿರಬಹುದು ಅಥವಾ ಅನೇಕ ಕ್ರೀಡೆಗಳಲ್ಲಿ ಒಂದಾಗಿರಬಹುದು. ಇವುಗಳನ್ನು ಗುರುತಿಸಿ ಪೋಷಿಸಿ ಬೆಳೆಸಬೇಕು. ರಾಷ್ಟ್ರದ ಅಭಿವೃದ್ಧಿ ಅದರ ಸಾಂಸ್ಕೃತಿಕ ವಲಯದಲ್ಲೂ ವಿಕಾಸದ ಅಭ್ಯಿವ್ಯಕ್ತಿ ತೋರುತ್ತದೆ. ವಿದ್ಯಾರ್ಥಿಗಳು ತಮ್ಮ ಪಾಠದ ಜೊತೆಗೆ ಇಂಥ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತ ಪ್ರಾವೀಣ್ಯತೆ ಪಡೆಯಬೇಕು. ಅನೇಕ ರಾಷ್ಟ್ರಗಳು ತಮ್ಮ ಸಾಂಸ್ಕೃತಿಕ ಪ್ರತಿಭೆ ಹಾಗೂ ಕ್ರೀಡೆಗಳಿಗಾಗಿಯೇ ಪ್ರಸಿದ್ಧಿ ಪಡೆದಿವೆ.

ಈ ಎಲ್ಲ ವಿಷಯಗಳನ್ನು ವಿವೇಚಿಸಿದಾಗ ನಮಗೆಲ್ಲ ಮನದಟ್ಟಾಗುವ ಒಂದು ಸತ್ಯವೆಂದರೆ ಇಂದಿನ ವಿದ್ಯಾರ್ಥಿಗಳು ನಾಳಿನ ರಾಷ್ಟ್ರದ ಉತ್ಥಾನಕ್ಕೆ, ಉತ್ಕರ್ಷಕ್ಕೆ, ಉನ್ನತಿಗೆ ಸನ್ನದ್ಧರಾಗುತ್ತಿರುವ ಸೇನಾನಿಗಳು. ಅಂತೆಯೇ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಶಿಕ್ಷಣ, ಚಾರಿತ್ರö್ಯ, ಉದ್ಯಮ ಕೌಶಲ್ಯ, ರಾಷ್ಟ್ರಾಭಿಮಾನಗಳನ್ನು ಬೆಳೆಸಿಕೊಂಡು ರಾಷ್ಟ್ರದ ಗೌರವವನ್ನು ಹೆಚ್ಚಿಸಬೇಕು. “ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಮಾತನ್ನು ಮರೆಯದೆ ಸತತವಾಗಿ ರಾಷ್ಟ್ರದ ಆರಾಧನೆ, ರಾಷ್ಟ್ರದ ಸೇವೆ ಮಾಡುತ್ತ ರಾಷ್ಟ್ರದ ಹಿರಿಮೆ-ಗರಿಮೆಗಳನ್ನು ಚರಮ ಸೀಮೆಗೆ ಕೊಂಡೊಯ್ಯಬೇಕು. ಈ ಉತ್ತರದಾಯಿತ್ವವನ್ನು ಅರ್ಥ ಮಾಡಿಕೊಂಡು ಎಲ್ಲ ವಿದ್ಯಾರ್ಥಿಗಳು ರಾಷ್ಟ್ರದ ಅಭ್ಯುದಯ, ಅಭಿವೃದ್ಧಿಗಳಲ್ಲಿ ತಮ್ಮ ಪಾತ್ರದ ಔಚಿತ್ಯ ಹಾಗೂ ತಮ್ಮ ಭೂಮಿಕೆಯ ಅವಶ್ಯಕತೆ ಹಾಗೂ ಪ್ರಾಮುಖ್ಯತೆಯನ್ನು ಅರಿಯಬೇಕು. ಈ ನಿಟ್ಟಿನಲ್ಲಿ ಸಕಾರಾತ್ಮಕ ಪ್ರಯತ್ನ ನಡೆಯುವುದೆಂದು ಆಶಿಸುತ್ತೇನೆ.

The way corruption has come about

ಭ್ರಷ್ಟಾಚಾರ ನಡೆದು ಬಂದ ದಾರಿ


ಭ್ರಷ್ಟಾಚಾರವನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಅದರ ಸ್ವರೂಪದ ಬಗ್ಗೆ ಖಚಿತ ಅಭಿಪ್ರಾಯ ವಿರುವುದು ಅಗತ್ಯ. ಭ್ರಷ್ಟಾಚಾರವನ್ನು ಸರಿಯಾಗಿ ಅರ್ಥಮಾಡಿ ಕೊಂಡಾಗ ಮಾತ್ರ ಅದಕ್ಕೊಂದು ಪರಿಹಾರ ಮಾರ್ಗ ಸೂಚಿಸಲು ಸಾಧ್ಯ. ಆದರೆ ಭ್ರಷ್ಟಾಚಾರವನ್ನು ಸುಲಭವಾಗಿ ಕೆಲವೊಂದು ಪದಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅದರ ಆಳ, ವಿಸ್ತಾರ ಮತ್ತು ವೈವಿಧ್ಯತೆಯಿಂದ ಭ್ರಷ್ಟಾಚಾರ ತರ್ಕಕ್ಕೆ ಸಿಲುಕಿ ದಷ್ಟು ಸಂಕೀರ್ಣವಾಗಿದೆ. ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದೆ. ಇಂಟರ್‌ನೆಟ್‌ನಲ್ಲಿ ಗೂಗಲ್ ಸರ್ಚ್ ಇಂಜಿನ್‌ನಲ್ಲಿ `ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದೆ. ಇಂಟರ್‌ನೆಟ್ ನಲ್ಲಿ ಗೂಗಲ್ ಸರ್ಚ್ ಇಂಜಿನ್‌ನಲ್ಲಿ `ಭ್ರಷ್ಟಾಚಾರ’ ಎಂಬ ಪದ ನಮೂದಿಸಿದೊಡನೆ ಕೋಟಿಗೂ ಹೆಚ್ಚು ಲೇಖನ,  ಪುಸ್ತಕ, ವರದಿ, ಸಮೀಕ್ಷೆ ಇತ್ಯಾದಿ ಗೋಚರಿಸುತ್ತದೆ. ಅದೇ ಜಾಗದಲ್ಲಿ `ಭಾರತದಲ್ಲಿ ಭ್ರಷ್ಟಾಚಾರ’ ಎಂದು ನಮೂದಿಸಿದರೆ ಇದಕ್ಕೂ ಹೆಚ್ಚು ಸಂಖ್ಯೆಯಲ್ಲಿ ಮಾಹಿತಿ ಸಾಮಾಗ್ರಿ ದೊರೆಯುತ್ತದೆ. ಇಷ್ಟಾದರೂ ಎಲ್ಲರಿಗೂ ಒಪ್ಪಿಗೆಯಾಗುವಂತೆ ಭ್ರಷ್ಟಾಚಾರವನ್ನು ವಿವರಿಸಲು ಆಗಿಲ್ಲ. ವಿಶ್ವ ಸಂಸ್ಥೆಯು ಭ್ರಷ್ಟಾಚಾರದ ವಿರುದ್ಧ ತನ್ನ ಸಮರ ಆರಂಭಿಸುವ ಸಂದರ್ಭದಲ್ಲಿ [೨೦೦೨] ಭ್ರಷ್ಟಾಚಾರವನ್ನು ಅರ್ಥೈಸುವುದು ಬೇಡವೆಂದು ಅದರ ಬದಲಾಗಿ ಭ್ರಷ್ಟಾಚಾರದ ವಿವಿಧ ಮಾದರಿಗಳನ್ನು ಗುರುತಿಸುವುದು ಸೂಕ್ತ ಎಂಬ ನಿರ್ಧಾರ ಕೈಗೊಂಡಿತು.

ಮೂಲಭೂತವಾಗಿ ಭ್ರಷ್ಟಾಚಾರ ಲ್ಯಾಟಿನ್ ಪದ `ಕರಪ್ಟಸ್’ ನಿಂದ ಬಂದಿದೆ. ಕರಪ್ಟಸ್ ಎಂದರೆ ಒಡೆಯುವುದು ಅಥವಾ ಮುರಿಯುವುದು ಎಂದರ್ಥ. ನೈತಿಕ, ಸಾಮಾಜಿಕ ಅಥÀವಾ ಆಡಳಿತಾತ್ಮಕ ನಿಯಮಗಳನ್ನು ಮುರಿಯು ವುದು ಭ್ರಷ್ಟಾಚಾರವಾದೀತು. ಜರ್ಮನಿಯ ಟ್ರಾನ್ಸ್ಫರೆನ್ಸಿ ಇಂಟರ್‌ನ್ಯಾಷನಲ್ [ಟಿಐ] ಸಂಸ್ಥೆಯು ಸಾರ್ವಜನಿಕ ಅಧಿಕಾರವನ್ನು ಸ್ವಂತ ಲಾಭಕ್ಕೆ ದುರುಪಯೋಗ ಮಾಡಿಕೊಳ್ಳುವುದೇ ಭ್ರಷ್ಟಾಚಾರ ಎಂದು ಹೇಳಿತ್ತು. ಆದರೆ ಸರ್ಕಾರದ ಅನೇಕ ಯೋಜನೆಗಳು ಮತ್ತು ಕರ್ತವ್ಯಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಆರಂಭವಾದಾಗ ಈ ಅರ್ಥವನ್ನು ವಿಸ್ತಾರಗೊಳಿಸಿ `ಅಧಿಕಾರವನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುವುದು ಭ್ರಷ್ಟಾಚಾರ’ ಎಂಬ ನಿಲುವನ್ನು ತೆಗೆದುಕೊಂಡಿತು. ಸ್ಥೂಲವಾಗಿ ಹೇಳುವುದಾದರೆ ಸಾರ್ವಜನಿಕ ಸೇವಕರು ತಮ್ಮ ಸ್ಥಾನಮಾನವನ್ನು ತಮ್ಮ ಅಥವಾ ಅವರಿಗೆ ಬೇಕಾದವರ ವೈಯಕ್ತಿಕ ಲಾಭಕ್ಕೆ ದುರುಪಯೋಗ ಮಾಡಿ ಕೊಂಡರೆ ಅದು ಭ್ರಷ್ಟಾಚಾರವಾಗುತ್ತದೆ. ಭ್ರಷ್ಟಾಚಾರ ನಾಲ್ಕು ಅಂಶಗಳಿಂದ ಕೂಡಿದೆ. ಅವುಗಳೆಂದರೆ (೧) ಹುದ್ದೆಯ ಅಥವಾ ಅಧಿಕಾರದ ದುರುಪಯೋಗ (೨) ದುರಪಯೋಗದ ಲಾಭ ಪಡೆಯುವ ಫಲಾನುಭವಿಗಳು (೩) ಗೌಪ್ಯತೆ ಹಾಗೂ (೪) ಭ್ರಷ್ಟಾಚಾರದಲ್ಲಿ ಭಾಗಿಯಾಗದ ಅಮಾಯಕರ ಮೇಲೆ ಉಂಟಾಗುವ ದುಷ್ಪರಿಣಾಮ.

ಅರವತ್ತರ ದಶಕದವರೆಗೂ ಭ್ರಷ್ಟಾಚಾರವನ್ನು ನೈತಿಕ ನೆಲೆಗಟ್ಟಿನ ಮೇಲೆ ಚರ್ಚಿಸಲಾಗುತ್ತಿತ್ತು. ಅನಂತರ ಸಾರ್ವಜನಿಕ ಅಧಿಕಾರದ ದುರುಪಯೋಗದ ಹಿನ್ನೆಲೆಯಲ್ಲಿ ಭ್ರಷ್ಟಾಚಾರವನ್ನು ನೋಡುವ ಕ್ರಮ ಆರಂಭವಾಯಿತು. ಆರ್ಥಿಕ ಉದಾರೀಕರಣದ ಪ್ರಕ್ರಿಯೆ ಆರಂಭವಾದಾಗಿನಿಂದ ಭ್ರಷ್ಟಾಚಾರವನ್ನು ಮತ್ತೊಂದು ರೀತಿಯಲ್ಲಿ ಪರಿಗಣಿಸಲಾಗುತ್ತಿದೆ.

ಸರ್ಕಾರವನ್ನು ತನ್ನ ಬಿಗಿ ಮುಷ್ಠಿಯಲ್ಲಿ ಇರಿಸಿಕೊಳ್ಳಲು ಮಾರುಕಟ್ಟೆ (ಉದ್ಯಮ) ಕೈಗೊಳುವ ಎಲ್ಲ ಕ್ರಮವನ್ನು ಭ್ರಷ್ಟಾಚಾರದ ವ್ಯಾಪ್ತಿಗೆ ಸೇರಿಸಲಾಗುತ್ತಿದೆ. ಏಸಿಯಾ ಪೆಸಿಫಿಕ್ ಮಾನವ ಅಭಿವೃದ್ಧಿ ವರದಿ (೧೯೯೭)ಯು ಭ್ರಷ್ಟಾಚಾರವನ್ನು ಪ್ರಿನ್ಸಿಪಾಲ್, ಏಜೆಂಟ್ ಮತ್ತು ಕ್ಲಯೆಂಟ್ ಎಂಬ ಚೌಕಟ್ಟಿನಲ್ಲಿ ವ್ಯಾಖ್ಯಾನಿಸುತ್ತದೆ. ಪ್ರಿನ್ಸಿಪಾಲರೇ ಆ ಕೆಲಸವನ್ನು ಮಾಡಲಾಗದ ಕಾರಣ ಏಜೆಂಟ್‌ಗಳನ್ನು ನೇಮಕ ಮಾಡುತ್ತಾರೆ. ಸರ್ಕಾರದ ದೃಷ್ಠಿಯಿಂದ ನೋಡುವುದಾದರೆ ಚುನಾಯಿತ ಪ್ರತಿನಿಧಿಗಳನ್ನು ಪ್ರಿನ್ಸಿಪಾಲ್ ಎಂದು ಅಧಿಕಾರಿಗಳನ್ನು ಏಜೆಂಟ್ ಎಂದು ಪರಿಗಣಿಸಬಹುದು. ನಾಗರಿಕರು ಕ್ಲಯೆಂಟ್ ಆಗುತ್ತಾರೆ. ಖಾಸಗಿ ವಲಯದಲ್ಲಿಯೂ ಇದನ್ನು ಕಾಣಬಹುದು. ಕಂಪನಿಗಳ ಮಾಲೀಕರನ್ನು ಪ್ರಿನ್ಸಿಪಾಲ್ ಎಂದು ಮತ್ತು ಅವರು ನೇಮಕ ಮಾಡುವ ನಿರ್ವಾಹಕರು ಹಾಗೂ ಇತರೆ ಸಿಬ್ಬಂದಿಯನ್ನು ಏಜೆಂಟ್ ಎಂದು ಪರಿಗಣಿಸಬಹುದು. ಸಾರ್ವಜನಿಕ ಆಡಳಿತದಲ್ಲಾಗಲೀ ಅಥವಾ ಕಂಪನಿಯ ಆಡಳಿತಕ್ಕಾಗಲಿ ಇದೊಂದು ಉತ್ತಮ ವ್ಯವಸ್ಥೆ. ಆದರೆ ಸಮಸ್ಯೆ ಉದ್ಭವಿಸುವುದು ಏಜೆಂಟ್‌ಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ತಮಗೆ ಇಷ್ಟ ಬಂದಂತೆ ಕಾರ್ಯನಿರ್ವಹಿಸಿದಾಗ. ಸಾಮಾನ್ಯವಾಗಿ ಈ ಏಜೆಂಟ್‌ಗಳು ವ್ಯವಹಾರ ಚತುರರು. ಅವರು ಪ್ರಿನ್ಸಿಪಾಲ್‌ಗಿಂತ ಹೆಚ್ಚಿನ ಮಾಹಿತಿ ಹೊಂದಿರುತ್ತಾರೆ. ಈ ಅವಕಾಶವನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಾರೆ. 

ಭ್ರಷ್ಟಾಚಾರವೆಂದರೆ ಅದೊಂದು ಮೋಹಜಾಲ, ಪ್ರಲೋಭನೆ. ಸ್ವಾರ್ಥಕ್ಕಾಗಿ ಆಮಿಷ ನೀಡಿ ಅಧಿಕಾರಿಗಳನ್ನು ಪುಸಲಾಯಿಸುವುದು ಅಥವಾ ಗ್ರಾಹಕರ, ಸಾರ್ವಜನಿಕರ ಅಗತ್ಯಗಳನ್ನು ಪೂರೈಸಿ ಪಡೆಯುವ ಯಾವುದೇ ಸ್ವರೂಪದ ಪ್ರತಿಫಲವೂ ಭ್ರಷ್ಟಾಚಾರವೇ. ಭ್ರಷ್ಟಾಚಾರಕ್ಕೆ ಅದೆಷ್ಟು ಮುಖಗಳಿವೆ-ಎಂಬುದೇ ಒಂದು ನಿಗೂಢ ಪ್ರಶ್ನೆ.

ಸೇವೆ, ಪಕ್ಷಪಾತ (ನೆರವು) ಅಥವಾ ಯಾವುದೇ ಸ್ವಹಿತಕ್ಕಾಗಿ ಲಾಭ, ಪ್ರಯೋಜನ, ಉಡುಗೊರೆ, ಹಣ, ಸಾಲ, ಶುಲ್ಕ, ಲಂಚ, ರುಷುವತ್ತು ಅಥವಾ ಸಂತೋಷ ಪಡಿಸುವುದು ಎಂದರೇನು? ಯಾವುದೇ ಕೆಲಸವನ್ನು ಕೈಗೊಳ್ಳಲು ಒಪ್ಪಿ ಕೊಳ್ಳುವುದು ಅಥವಾ ನಿರ್ದಿಷ್ಟ ಸ್ಥಾನಮಾನವನ್ನೋ ನೌಕರಿಯನ್ನೋ ಕೊಡಿಸಲು ಭರವಸೆ ನೀಡುವುದು. ಆಸ್ತಿಪಾಸ್ತಿ ಪ್ರತಿಫಲ ೫೦೦ ಡಾಲರ್ ಅಷ್ಟೇ! ನಿಮಗೆ ಪರವಾನಗಿ ನೀಡಲು ಅನುಮತಿ ನೀಡುತ್ತೇನೆ

೫೦೦ ಡಾಲರ್ ಸಾಕು! ನೀನು ಅತಿವೇಗದಿಂದ ಕಾರು ಓಡಿಸಿದೆಯಲ್ಲಾ? ಆ ಆಪಾದನೆಯನ್ನು ಕೈಬಿಟ್ಟೆ ಎಂದಿಟ್ಟುಕೊ....

ಕೇಂದ್ರ ಸರ್ಕಾರವು ೧೯೪೭ರಲ್ಲಿ ಸಂತಾನಮ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಭ್ರಷ್ಟಾಚಾರ ನಿಗ್ರಹಕ್ಕೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸಲಹೆ ನೀಡುವುದು ಈ ಸಮಿತಿಯ ಉದ್ದೇಶವಾಗಿತ್ತು. ಸಮಿತಿಯು ಭ್ರಷ್ಟಾಚಾರವನ್ನು ತಡೆಗಟ್ಟಲು ಅನೇಕ ಉಪಯುಕ್ತ ಸೂಚನೆಗಳನ್ನು ನೀಡಿತಾದರೂ, ಭ್ರಷ್ಟಾಚಾರದ ಮೂಲ ಸ್ವರೂಪದ ಬಗ್ಗೆ ಖಚಿತವಾಗಿ ತನ್ನ ಅಭಿಪ್ರಾಯ ತಿಳಿಸಲಿಲ್ಲ. ಸಾರ್ವಜನಿಕ ಸ್ಥಾನ ಅಥವಾ ಹುದ್ದೆಯೊಂದಿಗೆ ಇರುವ ಅಧಿಕಾರದ ದುರುಪಯೋಗವೇ ಭ್ರಷ್ಟಾಚಾರ ಎಂಬುದು ಸಮಿತಿಯ ಅಭಿಪ್ರಾಯವಾಗಿತ್ತು. ಲಂಚ ಮತ್ತು ಭ್ರಷ್ಟಾಚಾರ ತಡೆಗಟ್ಟುವ ಕಾಯ್ದೆ ೧೯೪೭ ಹಾಗೂ ಇಂಡಿಯನ್ ಫೀನಲ್ ಕೋಡ್ (ಸೆಕ್ಷನ್ ೧೬೧) ಸಹ ಭ್ರಷ್ಟಾಚಾರಕ್ಕೆ ತನ್ನದೆ ಆದ ಅರ್ಥವನ್ನು ನೀಡಿದೆ. ಇವೆಲ್ಲವೂ ಭ್ರಷ್ಟಾಚಾರದ ಒಂದೆರಡು ಮಗ್ಗಲುಗಳನ್ನು ಮಾತ್ರ ಪರಿಗಣಿಸುತ್ತದೆ. ಆದರೆ ಗ್ರೀಕ್ ಚರಿತ್ರೆಯಲ್ಲಿ ಬರುವ ಅನೇಕ ಮುಖಗಳುಳ್ಳ ರಕ್ಷ `ಹೈಡ್ರಾ’ನಂತೆ ಭ್ರಷ್ಟಾಚಾರಕ್ಕೆ ಅನೇಕ ಪಾರ್ಶ್ವಗಳಿವೆ. ಈ ವಿಷಯದಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ ಹೆಚ್ಚು ಉಪಯುಕ್ತ ಎಂದು ತೋರುತ್ತದೆ. ಕೌಟಿಲ್ಯ ತನ್ನ `ಅರ್ಥಶಾಸ್ತ್ರ’ದಲ್ಲಿ ಭ್ರಷ್ಟಾಚಾರದ ಅನೇಕ ಮುಖಗಳ ಪರಿಚಯ ಮಾಡಿಕೊಟ್ಟಿದ್ದಾನೆ. ಭ್ರಷ್ಟರಿಗೆ ಯಾವ ಶಿಕ್ಷೆ ವಿಧಿಸಬೇಕು ಎಂಬುದನ್ನು ಸಹ ವಿವರಿಸಿದ್ದಾನೆ.

ಭ್ರಷ್ಟಾಚಾರವನ್ನು ಅರ್ಥ ಮಾಡಿಕೊಳ್ಳಲು ಕ್ಲಿಟ್ ಗಾರ್ಡ್ ಎಂಬ ಶಾಸ್ತ್ರಜ್ಞ ಸರಳ ಸಿದ್ದಾಂತವನ್ನು ರೂಪಿಸಿದ್ದಾನೆ. ಆತನ ಪ್ರಕಾರ ಉತ್ತರದಾಯಿತ್ವ ಇಲ್ಲದೆ ಏಕಾಧಿಕಾರದ ಜೊತೆಗೆ ವಿವೇಚನಾಧಿಕಾರ ಸೇರಿದರೆ ಅದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಇದನ್ನು ಸಾಂಕೇತಿಕವಾಗಿ ಹೀಗೆ ಹೇಳಿದ್ದಾನೆ.

ಅ=ಒ+ಆ-ಂ ಇಲ್ಲಿ ಅ ಎಂದರೆ ಕರಪ್‌ಷನ್ [ಭ್ರಷ್ಟಾಚಾರ], ಒ ಎಂದರೆ ಮೊನಾಪಲಿ [ಏಕಾಧಿಕಾರ] ಆ ಎಂದರೆ ಡಿಸ್‌ಕ್ರೀಷನ್ [ವಿವೇಚನಾಧಿಕಾರ] ಮತ್ತು ಂ ಎಂದರೆ ಅಕೌಂಟಬಲಿಟಿ [ಉತ್ತರದಾಯಿತ್ವ]. ಈ ಸಿದ್ದಾಂತದ ಪ್ರಕಾರ ಸಾರ್ವಜನಿಕ ಅಧಿಕಾರಿಗೆ ನೀಡಿರುವ ಅಧಿಕಾರ ಮತ್ತು ವಿವೇಚನಾಧಿಕಾರ ಭ್ರಷ್ಟಾಚಾರವನ್ನು ನಿರ್ಧರಿಸುತ್ತದೆ. ಅತ್ಯಂತ ಹೆಚ್ಚು ನಿಯಂತ್ರಣಕ್ಕೆ ಒಳಪಟ್ಟ ದೇಶಗಳಲ್ಲಿ ಏಕಾಧಿಕಾರ ಹೆಚ್ಚಾಗಿರುತ್ತದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಿವೇಚನಾ ಅಧಿಕಾರ ಹೆಚ್ಚಾಗಿರುತ್ತದೆ. ದುರ್ಬಲ ಆಡಳಿತ ವ್ಯವಸ್ಥೆ ಹಾಗೂ ಅದಕ್ಷತೆಯಿಂದ ಕೂಡಿದ ನಿಯಂತ್ರಣ ಪ್ರಾಧಿಕಾರಗಳು ಇದ್ದಲ್ಲಿ ಉತ್ತರದಾಯಿತ್ವ ದುರ್ಬಲ ವಾಗಿರುತ್ತದೆ. ಇದೆಲ್ಲವೂ ಭ್ರಷ್ಟಾಚಾರಕ್ಕೆ ಹಾದಿ ಮಾಡಿಕೊಡುತ್ತದೆ. ಆದ್ದರಿಂದ ಭ್ರಷ್ಟಾಚಾರವನ್ನು ನಿಗ್ರಹಿಸಬೇಕಾದರೆ ಅಧಿಕಾರಿಗಳ ಎಕಾಧಿಕಾರಕ್ಕೆ ತಡೆಹಾಕಬೇಕು. ಜೊತೆಗೆ ಅಧಿಕಾರಿಗಳ ವಿವೇಚನಾ ಅಧಿಕಾರವನ್ನು ಆದಷ್ಟು ಕಡಿಮೆ ಮಾಡಿ ಉತ್ತರದಾಯಿತ್ವ ಹೆಚ್ಚಿಸಬೇಕು. ಆರೋರಾ ಡಾಲಿ ಪ್ರಕಾರ ಭ್ರಷ್ಟಾಚಾರವನ್ನು ಮೂರು ರೀತಿ ವಿಂಗಡಿಸಬಹುದು. ಮೊದಲನೆಯ ದರಲ್ಲಿ ವ್ಯಕ್ತಿ ತನಗೆ ಅರ್ಹತೆ ಇಲ್ಲದಿದ್ದರೂ ಯಾವುದಾದರೂ ಸೌಲಭ್ಯವನ್ನು ಪಡೆಯುತ್ತಾನೆ. ಇದಕ್ಕೆ ಕಾರಣ ಇತರರು ಈ ರೀತಿ ನಡೆದುಕೊಳ್ಳಲು ಹಿಂಜರಿಯಬಹುದು ಅಥವಾ ಆ ರೀತಿ ನಡೆದುಕೊಂಡರೆ ಅದರಿಂದ ಉಂಟಾಗುವ ಫಲಿತಾಂಶಕ್ಕೆ ಹೆದರಿಕೆ ಇರಬಹುದು. ಇಲ್ಲಿ ಸೌಲಭ್ಯ ನೀಡುವ ಅಧಿಕಾರಿ ಮತ್ತು ಫಲಾನುಭವಿ ಇಬ್ಬರೂ ಒಗ್ಗಟ್ಟಾಗಿ ಭ್ರಷ್ಟಾರದಲ್ಲಿ ತೊಡಗುತ್ತಾರೆ.  ಈ ದೇಶ ಕಂಡ ಅತ್ಯಂತ ಬೃಹತ್ ಮೊತ್ತದ ಷೇರು ಹಗರಣದಲ್ಲಿ ಹರ್ಷದ್ ಮೆಹ್ತಾ ಮತ್ತು ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿದ್ದರು. ಹಗರಣದ ಬಗ್ಗೆ ತನಿಖೆ ಮಾಡಿದ ಜಾನಕಿರಾಮನ್ ಸಮಿತಿ ಯ ಪ್ರಕಾರ ಕೆಲ ಬ್ಯಾಂಕ್‌ಗಳ ನಿರ್ದೇಶಕರೂ ಇದರಲ್ಲಿ ಭಾಗಿಯಾಗಿದ್ದರು. ಎರಡನೆಯ ಮಾದರಿ ಭ್ರಷ್ಟಾಚಾರ ಏಕಮುಖವಾದದ್ದು. ಇಲ್ಲಿ ಅಧಿಕಾರದಲ್ಲಿರುವ ವ್ಯಕ್ತಿ ತನ್ನ ಅಧಿಕಾರವನ್ನು ದರ್ಪದಿಂದ ಬಳಸುವ ಮೂಲಕ ಅಥವಾ ಬಳಸುತ್ತೇನೆಂದು ಹೆದರಿಸುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗುತ್ತಾನೆ. ಉದಾಹರಣೆಗೆ ಪೊಲೀಸ್ ಸಿಬ್ಬಂದಿ ನಾಗರಿಕರನ್ನು ಹೆದರಿಸಿ, ಬೆದರಿಸಿ ಹಣ ಸುಲಿಗೆ ಮಾಡುವುದು ಅಪರೂಪವಲ್ಲ. ಇಲ್ಲಿ ಅಧಿಕಾರದ ದುರುಪಯೋಗವೇ ಭ್ರಷ್ಟಾಚಾರಕ್ಕೆ ಕಾರಣ. ಈ ಎರಡೂ ಮಾದರಿ ಭ್ರಷ್ಟಾಚಾರದಲ್ಲಿ ಒಂದಕ್ಕಿಂತ ಹೆಚ್ಚಿನವರು ಭಾಗಿಯಾಗಿರುತ್ತಾರೆ. ಕೇವಲ ಒಬ್ಬನೇ ಭಾಗಿಯಾಗುವ ಭ್ರಷ್ಟಾಚಾರವು ಇದೆ. ಅಧಿಕಾರದಲ್ಲಿರುವ ವ್ಯಕ್ತಿ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಲಾಭ ಗಳಿಸಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದೆ. ಉದಾಹರಣೆಗೆ ಸುಳ್ಳು ದಾಖಲೆ ನೀಡಿ ಪ್ರಯಾಣ ಭತ್ಯೆ ಪಡೆಯುವುದು, ಯಾವುದೇ ಕಾಯಿಲೆ ಇಲ್ಲದಿದ್ದರೂ ವೈದ್ಯರಿಂದ ಸರ್ಟಿಫಿಕೇಟ್ ಪಡೆದು ಕಚೇರಿಯಿಂದ ಹಣ ಪಡೆಯವುದು ಇತ್ಯಾದಿ. ವಿಚಕ್ಷಣ ಆಯೋಗ ಪತ್ತೆ ಹಚ್ಚುವ ಅನೇಕ ಪ್ರಕರಣಗಳು ಈ ಗುಂಪಿಗೆ ಸೇರಿವೆ.

ಭ್ರಷ್ಟಾಚಾರ ಬಹುರೂಪಿ. ಅದು ಅನೇಕ ರೀತಿಯಲ್ಲಿ ನಡೆಯುತ್ತದೆ. ಕೆಳಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರವನ್ನು ಬ್ರೆöÊಬರಿ ಎಂದು ಕರೆಯುತ್ತಾರೆ. ಇದನ್ನು ಲಂಚ ಎನ್ನಬಹುದು. ಅಧಿಕಾರದಲ್ಲಿರುವ ವ್ಯಕ್ತಿ ಯಾವುದಾದರೂ ಕ್ರಮ ಕೈಗೊಳ್ಳಲು ಅಥವಾ ಕೈಗೊಳ್ಳದಿರಲು ನೀಡುವ ಹಣವನ್ನು ಈ ಗುಂಪಿಗೆ ಸೇರಿಸಬಹುದು. ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದಾಗ ಅದನ್ನು ಪತ್ತೆ ಹಚ್ಚುವ ಪೊಲೀಸ್‌ಗೆ ಹಣ ನೀಡಿ ಕೇಸ್ ದಾಖಲು ಮಾಡದಂತೆ ನೋಡಿಕೊಳ್ಳುವುದು ದಿನ ನಿತ್ಯ ನಡೆಯುವ ಭ್ರಷ್ಟಾಚಾರದ ಮಾದರಿ. ಇದಕ್ಕೆ ಕಿಕ್‌ಬ್ಯಾಕ್, ಬಕ್ಷೀಸ್ ಎಂದು ಕರೆಯಲಾಗಿದೆ.  ರಸ್ತೆ ಬದಿಯ ವ್ಯಾಪಾರಿಗಳು ಪೊಲೀಸ್, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು, ರೌಡಿಗಳು ಮುಂತಾದವರಿಗೆ ನೀಡುವ ಹಣ ಅಥವಾ ರೋಲ್‌ಕಾಲ್ ಒಂದು ಮಾದರಿ ಲಂಚ. ತಪ್ಪು ಮಾಹಿತಿ ನೀಡಿ ಅದರಿಂದ ಯಾವುದಾದರೂ ಸೌಲಭ್ಯ ಪಡೆಯುವುದು ಸಹ ಒಂದು ರೀತಿಯ ಭ್ರಷ್ಟಾಚಾರ,  ಕಪ್ಪು ಹಣವನ್ನು ಹೊರದೇಶದ ಬ್ಯಾಂಕ್‌ಗಳಿಗೆ ಗೌಪ್ಯವಾಗಿ ವರ್ಗಾಯಿಸುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಮನಿ ಲಾಂಡರಿಂಗ್ ಎಂದು ಕರೆಯಲ್ಪಡುವ ಈ ವ್ಯವಹಾರವೂ ಭ್ರಷ್ಟಾಚಾರದ ಮತ್ತೊಂದು ಮಾದರಿ. ಅಧಿಕಾರ ಹೊಂದಿರುವ ರಾಜಕಾರಣಿ, ಮಂತ್ರಿ ಅಥವಾ ಸಾರ್ವಜನಿಕ ಅಧಿಕಾರಿ ತನ್ನ ಸಂಬಂಧಿಕರಿಗೆ ಅಥವಾ ಸ್ನೇಹಿತರಿಗೆ ನ್ಯಾಯಬಾಹಿರವಾಗಿ ಸೌಲಭ್ಯ ಒದಗಿಸಿಕೊಡುವುದು ಸಹ ಭ್ರಷ್ಟಾಚಾರವಾಗುತ್ತದೆ. ಲಾಭ ಪಡೆಯುವವರಿಗೆ ಅರ್ಹತೆ ಇಲ್ಲದಿದ್ದರು ಅದನ್ನು ನೀಡಲಾಗುತ್ತದೆ. ಉದಾಹರಣೆಗೆ ಮುಖ್ಯಮಂತ್ರಿಗಳು ಹಾಗು ಮಂತ್ರಿಗಳು ತಮ್ಮ ಪುತ್ರ, ಪುತ್ರಿ, ಅಳಿಯ, ತಮ್ಮ ಮನೆಯಲ್ಲಿ ಅಡಿಗೆ ಮಾಡುವವರು ಮುಂತಾದವರಿಗೆ ನಿವೇಶನ ಹಂಚಿರುವುದನ್ನು ಮಹಾಲೇಖಪಾಲಕರು ತಮ್ಮ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.

ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಭ್ರಷ್ಟಾಚಾರದ ಮಾದರಿಯನ್ನು ಸ್ಪೀಡ್ ಮನಿ ಎಂದು ಕರೆಯಲಾಗಿದೆ. ಇದನ್ನು ಬಹುತೇಕ ಎಲ್ಲ ಸರ್ಕಾರಿ  ಕಚೇರಿಗಳಲ್ಲೂ ಕಾಣಬಹುದು. ವಿಶೇಷವಾಗಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಕಚೇರಿಗಳಲ್ಲಿ ಸ್ಪೀಡ್ ಮನಿ ಸಾಮಾನ್ಯ. ಇದನ್ನು ನೀಡದೆ ಯಾವುದೇ ಕೆಲಸ ಮಾಡಿಸಿಕೊಳ್ಳಲು ಆಗದ ಪರಿಸ್ಥಿತಿ ಉಂಟಾಗಿದೆ. ಸೌಲಭ್ಯವನ್ನು ಪಡೆಯಲು ಅನುಸರಿಸಬೇಕಾದ ಕ್ರಮ, ಅದಕ್ಕೆ ಸಂಬಂಧಪಟ್ಟ ಕಾನೂನುಗಳು, ಸಲ್ಲಿಸಬೇಕಾದ ದಾಖಲೆಗಳು ಎಲ್ಲವನ್ನೂ ಶೀಘ್ರವಾಗಿ ಪೂರೈಸಬೇಕಾದರೆ ಸ್ಪೀಡ್ ಮನಿ ಅಗತ್ಯ ನಾಗರಿಕರು ಪದೇ ಪದೇ ಈ ರೀತಿಯ ಭ್ರಷ್ಟಾಚಾರಕ್ಕೆ ಬಲಿಯಾಗುತ್ತಾರೆ. ಮೊತ್ತದ ದೃಷ್ಠಿಯಿಂದ ನೋಡಿದಾಗ ಇದನ್ನು ಸಣ್ಣ ಪ್ರಮಾಣದ ಭ್ರಷ್ಟಾಚಾರ ಎಂದು, ಮಂತ್ರಿಗಳು, ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳ ನಡುವೆ ನಡೆಯುವ ಬೃಹತ್ ಮೊತ್ತದ ಭ್ರಷ್ಟಾಚಾರವನ್ನು ಗ್ರಾಂಡ್ ಎಂದೂ ಕರೆಯಲಾಗಿದೆ. ಭ್ರಷ್ಟಾಚಾರಕ್ಕೆ ಯಾವುದೇ ಕಾಲ ಎಂಬುದಿಲ್ಲ. ಅದು ವರ್ಷದ ಮುನ್ನೂರ ಅರವತ್ತೆöÊದು ದಿನಗಳು ಚಾಲ್ತಿಯಲ್ಲಿರುತ್ತದೆ. ಆದರೆ ಸಣ್ಣ ಪ್ರಮಾಣದ ಭ್ರಷ್ಟಾಚಾರ ಸಾಮನ್ಯವಾಗಿ ಆರ್ಥಿಕ ಹಿಂಜರಿತದ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವಾಗ ಸಣ್ಣ ಪ್ರಮಾಣದ ಭ್ರಷ್ಟಾಚಾರ ಸಾಮಾನ್ಯವಾಗಿ ಆರ್ಥಿಕ ಹಿಂಜರಿತದ ಸಮಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರ್ಥಿಕ ಪರಿಸ್ಥಿತಿ ದುರ್ಬಲವಾಗಿರುವಾಗ ಸಣ್ಣ ಪ್ರಮಾಣದ ಭ್ರಷ್ಟಾಚಾರ ಹೆಚ್ಚುವ ಸಾಧ್ಯತೆ ಇದೆ. ಕಾರಣ ಆ ಸನ್ನಿವೇಶದಲ್ಲಿ ಅಗತ್ಯ ವಸ್ತುಗಳ ಅಭಾವವಿರುತ್ತದೆ. ಜೊತೆಗೆ ಕೃತಕ ಅಭಾವ ಸೃಷ್ಠಿಸುವ ಪ್ರಯತ್ನವು ನಡೆಯುತ್ತದೆ. ಆದ್ದರಿಂದಲೇ ಸಣ್ಣ ಪ್ರಮಾಣದ ಭ್ರಷ್ಟಾಚಾರ ಬಡವರ ಮೇಲೆ ಹೆಚ್ಚು ದುಷ್ಪರಿಣಾಮ ಉಂಟು ಮಾಡುತ್ತದೆ. ದೇಶವು ತ್ವರಿತ ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಕಾಣಿಸಿಕೊಳ್ಳುತ್ತದೆ. ಕಾರಣ ಈ ಸಂದರ್ಭದಲ್ಲಿ ಸರ್ಕಾರವು ಬೃಹತ್ ಪ್ರಮಾಣದ ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಕಾಣಿಸಿಕೊಳ್ಳುತ್ತದೆ. ಕಾರಣ ಈ ಸಂದರ್ಭದಲ್ಲಿ ಸರ್ಕಾರವು ಬೃಹತ್ ಪ್ರಮಾಣದ ಅಭಿವೃದ್ಧಿ ಕಾಮಗಾರಿ, ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತದೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಮಂತ್ರಿಗಳು, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಭ್ರಷ್ಟ ಚಟುವಟಿಕೆಗಳಲ್ಲಿ ತೊಡಗುತ್ತಾರೆ.

ವಿಲಿಯಮ್ ನಂದ ಬಿಸೆಲ್ [ಮೇಕಿಂಗ್ ಇಂಡಿಯಾ ವರ್ಕ್] ಅವರ ಪ್ರಕಾರ ಭ್ರಷ್ಟಾಚಾರವನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಬಹುದು. ಮೊದಲನೆ ಯದನ್ನು ಅವರು ಃoಣಣಟeಟಿeಛಿಞ  ಅoಡಿಡಿuಠಿಣioಟಿ ಎಂದು ಕರೆಯುತ್ತಾರೆ. ಈಗಾಗಲೆ ಹೇಳಿರುವಂತೆ ಇದು ಕೃತಕ ಅಭಾವ ಸೃಷ್ಠಿಸಿ ಅದರ ಮೂಲಕ ಹಣ ಮಾಡುವುದು. ಕೆಲವೊಮ್ಮೆ ಸರ್ಕಾರವೇ ಇದಕ್ಕೆ ಕಾರಣವಾಗುತ್ತದೆ. ಎರಡನೆ ಯದು, ಅರ್ಥವಾಗದ ಕಾನೂನುಗಳನ್ನು ಮತ್ತು ಕ್ಲಿಷ್ಟಕರ ನಿಯಮಗಳನ್ನು ರಚಿಸುವುದರ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿ ಕೊಡುವುದು. ಬಹುತೇಕ ಅನಕ್ಷರಸ್ಥರು ಇರುವ ಈ ದೇಶದಲ್ಲಿ ಸಾಮಾನ್ಯರು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಕಾನೂನು ರಚಿಸಿದರೆ ಭ್ರಷ್ಟಾಚಾರದ ಪ್ರಮಾಣ ಕಡಿಮೆ ಮಾಡಲು ಸಾಧ್ಯ. ಸರ್ಕಾರವು ಗುತ್ತಿಗೆ ಆಧಾರದ ಮೇಲೆ ಅಪಾರ ಪ್ರಮಾಣದ ಸಾಮಗ್ರಿ ಖರೀದಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಬೃಹತ್ ಮೊತ್ತದ ಭ್ರಷ್ಟಾಚಾರ ನಡೆಯುವುದನ್ನು ನೋಡಿದ್ದೇವೆ. ಲಂಚ ನೀಡುವ ಕಂಪನಿ ಅಗತ್ಯಕ್ಕೆ ತಕ್ಕಂತೆ ಗುತ್ತಿಗೆಯನ್ನು ರಚಿಸಲಾಗುತ್ತದೆ, ಇಲ್ಲವೆ ಅದರ ನಿಯಮಗಳನ್ನು ಮಾರ್ಪಾಟು ಮಾಡಲಾಗುತ್ತದೆ. ಉನ್ನತ ಮಟ್ಟದಲ್ಲಿ ನಡೆಯುವ ಈ ಟೆಂಡರ್ ಬೆಂಡಿಂಗ್  ಮೂರನೇ ಮಾದರಿ ಭ್ರಷ್ಟಾಚಾರ. ಇತ್ತೀಚೆಗೆ ೨ಜಿ  ತರಂಗಾಂತರದ ಹಂಚಿಕೆಯಲ್ಲಿ ಮಂತ್ರಿ ಒಬ್ಬರು ಅನುಸರಿಸಿದ ಮಾದರಿ ಇದಕ್ಕೆ ಸೂಕ್ತ ಉದಾಹರಣೆ. ಈ ಮಾದರಿ ಭ್ರಷ್ಟಾಚಾರಕ್ಕೆ ಬಲಿಯಾಗುವವರು ದುರ್ಬಲ ವರ್ಗದವರು. ದೈಹಿಕ ಹಿಂಸೆ, ಜೀವ ಬೆದರಿಕೆ, ಸ್ಥಳ ಮುಂತಾದ ಅಸ್ತ್ರಗಳನ್ನು ಉಪಯೋಗಿಸುವ ಮೂಲಕ ಲಂಚ ಪಡೆಯಲಾಗುತ್ತದೆ.

ಲಂಚ ಪಡೆಯುವವರನ್ನು ಎರಡು ರೀತಿ ವಿಂಗಡಿಸಿ ಭ್ರಷ್ಟಾಚಾರವನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವೂ ನಡೆದಿದೆ. ಸಣ್ಣ ಪುಟ್ಟ ಮೊತ್ತದ ಲಂಚ ಪಡೆಯುವವರನ್ನು ಹುಲ್ಲು ತಿನ್ನುವವ ರೆಂದು, ಬೃಹತ್ ಮೊತ್ತದ ಹಣ ಪಡೆಯುವವರನ್ನು ಮಾಂಸ ತಿನ್ನುವವ  ರೆಂದು ವರ್ಗೀಕರಿಸಲಾಗಿದೆ. ಉದಾಹರಣೆಗೆ ಅಂಚೆ ಪೇದೆ, ಗ್ಯಾಸ್ ಸಿಲಿಂಡರ್ ವಿತರಕ ಅಥವಾ ಮನೆ ಮುಂದಿನ ಕಸವನ್ನು ಸ್ವಚ್ಛಗೊಳಿಸುವವರು ಹಣ ಕೇಳುವವರನ್ನು ಮೊದಲನೆ ವರ್ಗಕ್ಕೆ ಸೇರಿಸಬಹುದು. ಬೃಹತ್ ಮೊತ್ತದ ಭ್ರಷ್ಟಾಚಾರದಲ್ಲಿ ತೊಡುಗುವವರು ಎರಡನೇ ಗುಂಪಿಗೆ ಸೇರುವವರು. ಸರ್ಕಾರಿ ಅಧಿಕಾರಿಗಳು ಕಾನೂನಿನ ಪ್ರಕಾರ ಸೇವೆ ನೀಡಲು ಲಂಚ ಪಡೆಯುತ್ತಾರೆ. ಅದೇ ರೀತಿ ಕಾನೂನು ಉಲ್ಲಂಘಿಸಿಯೂ ಸೇವೆ ನೀಡಿ ಲಂಚ ಪಡೆಯುವ ಅವಕಾಶ ಹೊಂದಿರುತ್ತಾರೆ. ಒಟ್ಟಾರೆ ಅಧಿಕಾರಿಗಳು ನಿಯಮದ ಪ್ರಕಾರ ಮತ್ತು ನಿಯಮಕ್ಕೆ ವಿರುದ್ಧ ನಡೆದುಕೊಂಡರೂ ಲಂಚ ಪಡೆಯಬಹುದು.

ಭ್ರಷ್ಟಾಚಾರದ ಸ್ವರೂಪವನ್ನು ಭೌಗೋಳಿಕವಾಗಿಯೂ ವಿಶ್ಲೇಷಿಸಬಹುದು. ಇದರ ಬಗ್ಗೆ ಅನೇಕ ಸಂಶೋಧನೆಗಳು ನಡೆದಿದ್ದು, ಭಾರತದಲ್ಲಿರುವ ಭ್ರಷ್ಟಾಚಾರ ಕ್ಕೂ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿರುವ ಭ್ರಷ್ಟಾಚಾರಕ್ಕೂ ಕೆಲವೊಂದು ವ್ಯತ್ಯಾಸಗಳಿವೆ. ದಿವಂಗತ ಮೆಹಬೂಬ್ ಉಲ್ ಹಕ್ ಅವರ ಪ್ರಕಾರ ದಕ್ಷಿಣ ಏಷ್ಯಾದ ದೇಶಗಳಲ್ಲಿರುವ ಭ್ರಷ್ಟಾಚಾರ ನಾಲ್ಕು ಅಪಾಯಕಾರಿ ಗುಣಗಳನ್ನು ಹೊಂದಿದೆ. ಪ್ರಥಮವಾಗಿ ದಕ್ಷಿಣ ಏಷ್ಯಾದ ಭ್ರಷ್ಟಾಚಾರ ಹೆಚ್ಚಾಗಿ ಸಂಭವಿಸು ವುದು ಮೇಲ್ಮಟ್ಟದಲ್ಲಿ. ಆದ ಕಾರಣ ಭ್ರಷ್ಟಾಚಾರ ಅಭಿವೃದ್ಧಿಗೆ ಕಂಟಕವಾಗುತ್ತದೆ. ಮೇಲ್ಮಟ್ಟದಲ್ಲಿ ಕೈಗೊಳ್ಳುವ ನಿರ್ಧಾರ ರಾಷ್ಟ್ರದ ನೀತಿ ನಿಯಮಗಳ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಎರಡನೆಯದಾಗಿ, ದಕ್ಷಿಣ ಏಷ್ಯಾದಲ್ಲಿನ ಭ್ರಷ್ಟಾಚಾರದ ಹಣಕ್ಕೆ ಚಕ್ರಗಳಿಲ್ಲ. ರೆಕ್ಕೆಗಳಿವೆ. ಭ್ರಷ್ಟಾಚಾರದಿಂದ ಬಂದ ಹಣವನ್ನು ಕೂಡಲೇ ವಿದೇಶಗಳಿಗೆ ರವಾನಿಸಲಾಗುತ್ತದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಭ್ರಷ್ಟಾಚಾರದ ಹಣದ ಸ್ವಲ್ಪ ಅಂಶವಾದರೂ ಅಲ್ಲಿನ ಉದ್ಯಮಕ್ಕೆ ಮರು ವಿನಿಯೋಗವಾಗುತ್ತದೆ. ಮೂರನೆಯ ಗುಣ ಭಾರತಕ್ಕೆ ಸೂಕ್ತವಾಗಿ ಅನ್ವಯ ವಾಗುತ್ತದೆ. ಅದೇನೆಂದರೆ, ದಕ್ಷಿಣ ಏಷ್ಯಾದಲ್ಲಿ ಭ್ರಷ್ಟಾಚಾರ ಬಡ್ತಿಗೆ ಕಾರಣ ವಾಗುತ್ತದೆ, ಸೆರೆಮನೆಗಲ್ಲ. ಭ್ರಷ್ಟರೆಂದು ತಿಳಿದು ಬಂದರೂ ಅವರಿಗೆ ಉತ್ತಮ ಸ್ಥಾನಮಾನ, ಬಡ್ತಿ, ತಾವು ಕೇಳಿದ ಜಾಗಕ್ಕೆ/ಹುದ್ದೆಗೆ ವರ್ಗಾವಣೆ ಇತ್ಯಾದಿ ಸೌಲಭ್ಯ ದೊರೆಯುತ್ತದೆ. ಆದರೆ ಮುಂದುವರೆದ ಬಹುತೇಕ ದೇಶಗಳಲ್ಲಿ ತನಿಖೆ ಚುರುಕಾಗಿದ್ದು, ಭ್ರಷ್ಟರನ್ನು ಅತಿಶೀಘ್ರವಾಗಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಕಡೆಯದಾಗಿ ದಕ್ಷಿಣ ಏಷ್ಯಾದಲ್ಲಿ ಬಡತನದ ಮಧ್ಯೆ ಭ್ರಷ್ಟಾಚಾರ ನಡೆಯುತ್ತದೆ. ಆ ಸಂಖ್ಯೆಯ ಬಹುತೇಕ ವರ್ಗ ಬಡತನ, ಅನಾರೋಗ್ಯ, ಅನಕ್ಷರತೆ ಇತ್ಯಾದಿ ಸಮಸ್ಯೆಯಲ್ಲಿ ಮುಳುಗಿರುವಾಗ ಕೆಲವೇ ಮಂದಿ ಲಂಚದ ಲಾಭ ಪಡೆಯುತ್ತಾರೆ.

ನಿವೃತ್ತ ಸೇನಾಧಿಕಾರಿ ರಮೇಶ್ ವಾಸುಡಿಯೋ ಭ್ರಷ್ಟಾಚಾರದ ಮುಖ್ಯ ಗುಣಗಳನ್ನು ಪಟ್ಟಿ ಮಾಡಿದ್ದಾರೆ. ಇದು ಭ್ರಷ್ಟಾಚಾರಕ್ಕೆ ಕಾರಣಗಳು ಆಗಬಹುದು. ಆ ಪಟ್ಟಿ ಹೀಗಿದೆ:

* ತನಗೆ ಅರ್ಹತೆ ಇಲ್ಲದಿದ್ದರೂ ಯಾವುದಾದರೂ ಒಂದು ಸೌಲಭ್ಯ ಅಗತ್ಯವಿರುವ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆ ಇರಬೇಕು.

* ಆ ವ್ಯಕ್ತಿ ಅಥವಾ ಸಂಸ್ಥೆಗೆ ಲಂಚ ನೀಡುವ ಯೋಗ್ಯತೆ ಮತ್ತು ಮನಸ್ಸು ಇರಬೇಕು.

* ಸೇವೆ ನೀಡುವ ವ್ಯಕ್ತಿಗೆ ಆ ಸೇವೆ ನೀಡುವ ಅಧಿಕಾರ ಇರಬೇಕು. ಆ ಸೇವೆಯನ್ನು ನೀಡುವ ಮನಸ್ಸು ಹೊಂದಿರ ಬೇಕು ಮತ್ತು ಲಂಚ ಪಡೆಯುವು ದರಲ್ಲಿ ಆಸಕ್ತಿ ಇರಬೇಕು.

* ವ್ಯವಹಾರವೆಲ್ಲವೂ ಗೌಪ್ಯವಾಗಿ ನಡೆಯಬೇಕು.

* ವ್ಯವಹಾರ ಯಾರಿಗೂ ತಿಳಿಯದಂತೆ ನೋಡಿಕೊಳ್ಳಲು ಒಬ್ಬ ಮಧ್ಯವರ್ತಿ ಇರುತ್ತಾನೆ. 

* ಈ ವ್ಯವಹಾರವು ಫಲಾನುಭವಿಗೆ ಅಥವಾ ಸಂಸ್ಥೆಗೆ ನಷ್ಟ ಆಗುತ್ತದೆ.

* ಲಂಚ ಪಡೆಯುವವರಲ್ಲಿ ಸ್ವಾಭಾವಿಕವಾದ ಅಳುಕು ಮತ್ತು ಭಯ ಇರುತ್ತದೆ.

* ಲಂಚ ಕೊಡುವವನಿಗೆ ತಾನು ಪಡೆದ ಸೇವೆಯ ಬಗ್ಗೆ ಸಮಾಧಾನ ಇರುತ್ತದೆ. ಸಾಮಾನ್ಯವಾಗಿ ಲಂಚ ನೀಡುವವರಲ್ಲಿ ಯಾವುದೇ ಅಳುಕು ಇರುವುದಿಲ್ಲ.

* ದೇಶ, ಭಾಷೆ, ಜಾತಿ, ಕುಲ, ಲಿಂಗಭೇದ ಇತ್ಯಾದಿ ಯಾವುದೂ ಲಂಚಕ್ಕೆ ಅನ್ವಯಿಸುವುದಿಲ್ಲ. 

* ಭ್ರಷ್ಟಾಚಾರದ ವ್ಯವಹಾರ ಅತ್ಯಂತ ವಿಶ್ವಾಸದಿಂದ ಕೂಡಿದ್ದು.

* ಸಾಮಾನ್ಯವಾಗಿ ಲಂಚದ ವ್ಯವಹಾರದಲ್ಲಿ ಕಪ್ಪುಹಣ, ಬೇನಾಮಿ ಆಸ್ತಿ ಒಳಗೊಂಡಿರುತ್ತದೆ.

* ಭ್ರಷ್ಟರು ಸಾಮಾನ್ಯವಾಗಿ ಒಂಟಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಅದನ್ನು ಒಂದು ಗುಂಪು ನಿರ್ವಹಿಸುತ್ತದೆ.

* ಭ್ರಷ್ಟಾಚಾರಕ್ಕೆ ಬಹು ದೊಡ್ಡ ಕಾರಣ ವಸ್ತು/ಸೇವೆಗಳ ಅಭಾವ.