Wednesday, September 21, 2022

That record written by Rocky Bhai is difficult to erase! - KGF-2

 ಖಾನ್‌ತ್ರಯರು ಒಟ್ಟಿಗೆ ನಟಿಸಿದರೂ ರಾಕಿಭಾಯ್ ಬರೆದ ಆ ದಾಖಲೆ ಅಳಿಸಲು ಕಷ್ಟ!


'KGF-2' ಸಿನಿಮಾ ಸಾವಿರ ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಹಳೇ ಬಾಕ್ಸಾಫೀಸ್ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದ್ದು ಗೊತ್ತೇಯಿದೆ. ಕನ್ನಡ ಸಿನಿಮಾವೊಂದು ಹಿಂದಿಗೆ ಡಬ್ ಆಗಿ ೪೩೪ ಕೋಟಿ ರೂ. ಕಲೆಕ್ಷನ್ ಮಾಡುತ್ತೆ ಎಂದು ಕನ್ನಡ ಸಿನಿರಸಿಕರು ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಸದ್ಯದ ಬಾಲಿವುಡ್ ಪರಿಸ್ಥಿತಿ ನೋಡುತ್ತಿದ್ದರೆ ರಾಕಿ ಭಾಯ್ ಬರೆದ ಅದೊಂದು ದಾಖಲೆ ಅಳಿಸಲು ಖಾನ್‌ತ್ರಯರ ಜೊತೆಗೆ ಹೃತಿಕ್ ರೋಷನ್, ಅಕ್ಷಯ್ ಕುಮಾರ್ ಒಂದೇ ಸಿನಿಮಾದಲ್ಲಿ ನಟಿಸಿದರೂ ಕಷ್ಟ ಅನ್ನಿಸ್ತಿದೆ. ಏಪ್ರಿಲ್ ೧೪ರಂದು ವಿಶ್ವದಾದ್ಯಂತ ತೆರೆಗಪ್ಪಳಿಸಿದ 'KGF-2' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ವಾರವಿಡೀ ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಂಡು ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ರಾಕಿಂಗ್ ಸ್ಟಾರ್ ಯಶ್ ಪರ್ಫಾರ್ಮೆನ್ಸ್ ನೋಡಿದವರು ದಂಗಾಗಿದ್ದರು. ಮಾಸ್ ಸಿನಿಮಾಗಳಿಗೆಲ್ಲಾ ರೋಲ್ ಮಾಡೆಲ್ ಎನ್ನುವಂತೆ ಚಿತ್ರವನ್ನು ಪ್ರಶಾಂತ್ ನೀಲ್ ತಿದ್ದಿ ತೀಡಿದ್ದರು. ಪ್ರತಿ ಚಿತ್ರದಲ್ಲಿ ಹೀರೊಗೆ ಒಂದೇ ಎಂಟ್ರಿ ಸೀನ್ ಇರುತ್ತೆ. ಆದರೆ 'ಕೆಜಿಎಫ್' ಸರಣಿಯ ಎರಡೂ ಸಿನಿಮಾಗಳಲ್ಲಿ ಪ್ರತಿ ಸೀನ್ ಹೀರೊ ಎಂಟ್ರಿಗೆ ಸಿಕ್ಕಷ್ಟೇ ಎಲಿವೇಷನ್ ಸಿಕ್ಕಿತ್ತು. ಹಾಲಿವುಡ್ ಸಿನಿಮಾಗಳ ರೇಂಜಿಗೆ ರಾಕಿಭಾಯ್ ಬಂಗಾರದ ಕಥೆಯನ್ನು ಹೇಳಲಾಗಿತ್ತು. ಥಿಯೇಟರ್‌ಗಳಲ್ಲಿ ಮಾತ್ರವಲ್ಲದೇ ಓಟಿಟಿಯಲ್ಲೂ ಸದ್ದು ಮಾಡಿದ ಸಿನಿಮಾ ಇತ್ತೀಚೆಗೆ ಟಿವಿಯಲ್ಲೂ ಪ್ರಸಾರವಾಗಿ ಪ್ರೇಕ್ಷಕರನ್ನು ರಂಜಿಸಿದೆ.

ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ೧೦೦ ಕೋಟಿ ರೂ. ಕಲೆಕ್ಷನ್ ಮಾಡುವುದಕ್ಕೂ ತಿಣುಕಾಡುವಂತಾಯಿತು. ಇನ್ನು ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನ ಯಾವುದೇ ಸಿನಿಮಾ ಸದ್ದು ಮಾಡ್ತಿಲ್ಲ. ತೆಲುಗಿನ 'ಪುಷ್ಪ' ಸಿನಿಮಾ ಕೂಡ ಹಿಂದಿ ಬೆಲ್ಟ್ನಲ್ಲಿ ಸಖತ್ ಕಲೆಕ್ಷನ್ ಮಾಡಿತ್ತು. ಸದ್ಯ ಯುವನಟ ನಿಖಿಲ್ ನಟನೆಯ ತೆಲುಗಿನ 'ಕಾರ್ತಿಕೇಯ'-೨ ಕೂಡ ಬಾಲಿವುಡ್‌ನಲ್ಲಿ 'ಲಾಲ್ ಸಿಂಗ್ ಚಡ್ಡಾ' ಹಾಗೂ 'ರಕ್ಷಾ ಬಂಧನ್' ಸಿನಿಮಾಗಳನ್ನು ಮೀರಿ ಕಲೆಕ್ಷನ್ ಮಾಡ್ತಿದೆ. ಇನ್ನು ರಾಕಿ ಭಾಯ್ ಬರೆದಿರುವ ಆ ದಾಖಲೆ ಅಳಿಸಲು ಬಿಟೌನ್ ಸ್ಟಾರ್‌ಗಳೆಲ್ಲಾ ಒಂದೇ ಚಿತ್ರದಲ್ಲಿ ನಟಿಸಬೇಕೆನೋ.

KGF-2 ಫಸ್ಟ್ ಡೇ ರೆಕಾರ್ಡ್ ಮುರಿಯೋದು ಕಷ್ಟ! ಕನ್ನಡ ಸಿನಿಮಾಗಳು ಹಿಂದಿಗೆ ಡಬ್ ಆಗಿ ಬಿಡುಗಡೆಯಾಗುವುದೇ ಕಷ್ಟ ಅನ್ನುವ ಕಾಲವೊಂದಿತ್ತು. ಆದರೆ `KGF-2' ಹಿಂದಿ ಬೆಲ್ಟ್ನಲ್ಲಿ ಮೊದಲ ದಿನವೇ ೫೪ ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಏಪ್ರಿಲ್ ೧೪ರಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದ ಸಿನಿಮಾ ೧೫೪ ಕೋಟಿ ರೂ. ದೋಚಿ ದಾಖಲೆ ಬರೆದಿತ್ತು. ಬಾಲಿವುಡ್ ಸೂಪರ್ ಸ್ಟಾರ್‌ಗಳ ಸಿನಿಮಾಗಳೇ ಮೊದಲ ದಿನ ೫೦ ಕೋಟಿ ರೂ. ಕಲೆಕ್ಷನ್ ಮಾಡಲು ಸರ್ಕಸ್ ಮಾಡ್ತಿವೆ. ಅಂಥಾದ್ದರಲ್ಲಿ ಕನ್ನಡ ಸಿನಿಮಾವೊಂದು ಹಿಂದಿಗೆ ಡಬ್ ಆಗಿ ೫೪ ಕೋಟಿ ರೂ. ಗಳಿಸುವುದು ಅಂದರೆ ತಮಾಷೆ ಮಾತಲ್ಲ. ಬಾಲಿವುಡ್‌ನಲ್ಲಿ ಮಲ್ಟಿಸ್ಟಾರರ್ ಸಿನಿಮಾಗಳು ಬಂದರೂ ಈ ದಾಖಲೆ ಅಳಿಸುವುದು ಕಷ್ಟ ಆಗಬಹುದು. ರಾಜಮೌಳಿ `RRR' ಚಿತ್ರಕ್ಕೂ ಇದು ಸಾಧ್ಯವಾಗಲಿಲ್ಲ.

ಹಿಂದಿಯಲ್ಲಿ ಒಟ್ಟು ಕಲೆಕ್ಷನ್ ೪೩೪ ಕೋಟಿ ರೂ. ಬಾಲಿವುಡ್ ಸೂಪರ್ ಸ್ಟಾರ್‌ಗಳ ಸಿನಿಮಾಗಳೇ ೧೦೦ ಕೋಟಿ ೨೦೦ ಕೋಟಿ ಕಲೆಕ್ಷನ್ ಮಾಡಲು ಸಾಧ್ಯವಾಗುತ್ತಿಲ್ಲ. ಅಂಥಾದ್ದರಲ್ಲಿ 'KGF-2' ಹಿಂದಿ ವರ್ಷನ್ ಒಟ್ಟು ೪೩೪ ಕೋಟಿ ರೂ. ಕೋಟಿ ಬಾಚಿತ್ತು. ಡಬ್ ಸಿನಿಮಾವೊಂದು ಉತ್ತರ ಭಾರತದಲ್ಲಿ ಈ ಪಾಟಿ ಪ್ರೇಕ್ಷಕರನ್ನು ರಂಜಿಸಿದ್ದು ಇದೇ ಮೊದಲು. 'ಬಾಹುಬಲಿ' ಸರಣಿಯನ್ನು ಮೀರಿ `KGF' ಸರಣಿ ಬಾಲಿವುಡ್ ಪ್ರೇಕ್ಷಕರ ಮನಗೆದ್ದಿದ್ದು ಸುಳ್ಳಲ್ಲ. ಒಟ್ನಲ್ಲಿ ಅಷ್ಟು ಸುಲಭವಾಗಿ ಯಾವುದೇ ಸಿನಿಮಾ ಮುರಿಯಲು ಸಾಧ್ಯವಾಗದಂತಹ ದಾಖಲೆಯನ್ನು ರಾಕಿಭಾಯ್ ಬರೆದಿದ್ದಾನೆ.

'KGF-2' ಒಟ್ಟು ಕಲೆಕ್ಷನ್ ೧೩೦೦ ಕೋಟಿ ರೂ. ಮೊದಲ ದಿನವೇ ೧೫೪ ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ ಒಟ್ಟಾರೆಯಾಗಿ ಪ್ರಪಂಚದಾದ್ಯಂತ ೧೩೦೦ ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿತ್ತು. ಭಾರತೀಯ ಚಿತ್ರರಂಗದಲ್ಲಿ ಎರಡೂ ಮೂರು ಸಿನಿಮಾಗಳು ಮಾತ್ರ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಆ ಸಾಲಿಗೆ ಚಾಪ್ಟರ್-೨ ಕೂಡ ಸೇರಿಕೊಂಡಿದೆ. ಚಾಪ್ಟರ್-೩ ಬರುವ ಸಾಧ್ಯತೆಯಿದ್ದು, ಈ ಎಲ್ಲಾ ದಾಖಲೆಗಳನ್ನು ಆ ಸಿನಿಮಾ ಮುರಿಯುವ ನಿರೀಕ್ಷೆ ಇದೆ. ಯಶ್ ೧೯ಗಾಗಿ ಬಾಲಿವುಡ್ ಕಾತರ 'ಏಉಈ-೨' ನಂತರ ಯಶ್ ಜೊತೆ ಸಿನಿಮಾ ಮಾಡಲು ಬಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಮುಗಿಬಿದ್ದಿದ್ದಾರೆ. ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಬರೀ ಸ್ಯಾಂಡಲ್‌ವುಡ್ ಮಾತ್ರವಲ್ಲ ಬಾಲಿವುಡ್‌ನಲ್ಲೂ ಇದೆ. ರಾಕಿ ಭಾಯ್ ಆಗಿ ಯಶ್ ಉತ್ತರ ಭಾರತದಲ್ಲಿ ಭಾರೀ ಕ್ರೇಜ್ ಕ್ರಿಯೇಟ್ ಆಗಿದೆ. ಹಾಗಾಗಿ ಯಶ್ ನಟಿಸುವ ಮುಂದಿನ ಸಿನಿಮಾಗಳೆಲ್ಲಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹಿಂದಿಗೂ ಡಬ್ ಆಗಿ ರಿಲೀಸ್ ಆಗಲಿದೆ.

Friday, September 16, 2022

A verse from the Bhagavad Gita

ಭಗವದ್ಗೀತೆಯ ಒಂದು ಶ್ಲೋಕ


ಕ್ರೋಧಾತ್ ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿ ವಿಭ್ರಮಃ  

ಸ್ಮೃತಿಭ್ರಂಶಾದ್ ಬುದ್ಧಿನಾಶಃ ಬುದ್ಧಿನಾಶಾತ್ ವಿನಶ್ಯತಿ --

ರೊಚ್ಚಿನಿಂದ ಮಾಡಬಾರದ್ದನ್ನು ಮಾಡುವ ಬಯಕೆ (ತಪ್ಪು ಗ್ರಹಿಕೆ). ಅಂಥ ಬಯಕೆಗಳಿಂದ ವಿಧಿ-ನಿಷೇಧಗಳ ಮರೆವು. ಮರೆವಿನಿಂದ ತಿಳಿಗೇಡಿತನ, ತಿಳಿಗೇಡಿತನದಿಂದ ಸರ್ವನಾಶ!

ಒಂದು ವಸ್ತುವಿನ ನಿರಂತರ ಸಂಪರ್ಕದಿಂದ ನಮಗೆ ಅದರ ಮೇಲೆ ಮೋಹ ಬೆಳೆಯುತ್ತದೆ. ಮೊದಲು ಪರಿಚಯ, ಪರಿಚಯದಿಂದ ಸ್ನೇಹ, ನಂತರ ಆ ಸ್ನೇಹವನ್ನು ಹಚ್ಚಿಕೊಳ್ಳುವುದು(ಂಣಣಚಿಛಿhmeಟಿಣ). ನಂತರ ಅವರು ನನ್ನವರಾಗಬೇಕು ಎನ್ನುವ ಆಸೆ. ನಾವು ಆಸೆ ಪಟ್ಟಂತೆ ನೆರವೇರದಾಗ ಕ್ರೋಧ. ಈ ಕ್ರೋಧದ ಮೂಲ ಪ್ರೀತಿ! ಕೋಪಕ್ಕೆ ಮೂಲ ಕಾರಣ ಕಾಮನೆ. ನಮಗೆ ಕೋಪ ಬಾರದಂತೆ ತಡೆಯಬೇಕಾದರೆ ಮೊದಲು ಕಾಮನೆಯನ್ನು ತೊರೆಯಬೇಕು. ಆಸೆ ಕಡಿಮೆಯಾದಂತೆ ಸಿಟ್ಟು ಕಡಿಮೆಯಾಗುತ್ತದೆ. ಅಂಟಿಸಿಕೊಳ್ಳುವುದು  ಅಥವಾ ಹಚ್ಚಿಕೊಳ್ಳುವುದರಿಂದ ಆಸೆ ಆಕಾಂಕ್ಷೆಗಳು ಬೆಳೆಯುತ್ತವೆ. ಅದು ಈಡೇರದಿದ್ದಾಗ ಕೋಪ. ಕೋಪದಿಂದ ಸಮ್ಮೋಹ. ಅಂದರೆ ಅಸಂಗತವಾದ ವಿಚಾರಗಳು ತಲೆಯಲ್ಲಿ ಬಂದು ಮಾಡಬಾರದ್ದನ್ನು ಮಾಡುವ ಬಯಕೆ. ಇದರಿಂದ ಯುಕ್ತಾಯುಕ್ತಗಳನ್ನು ವಿಶ್ಲೇಷಣೆ ಮಾಡುವ ಶಕ್ತಿ ಹೊರಟು ಹೋಗಿ, ತಪ್ಪನ್ನೇ ಸರಿ ಎಂದು ಸಮರ್ಥನೆ ಮಾಡುವ  ಮಟ್ಟಕ್ಕೆ ನಾವು ಇಳಿಯುತ್ತೇವೆ. ಪಲಿತಾಂಶ: ಪ್ರತಿಕಾರ ಮಾಡಬೇಕು ಎನ್ನುವ ಹಠ. ಅದರಿಂದ ಪೂರ್ತಿ ತಿಳಿಗೇಡಿತನ ಮತ್ತು ಕೊನೆಗೆ ಆತ್ಮದ ಅಧಃಪತನ- ವಿನಾಶ-ಸರ್ವನಾಶ! 

ಬುದ್ಧಿ ನಾಶವಾದಾಗ ಮನಸ್ಸು ಸತ್ತಂತೆ. ಅದರಿಂದ ಜೀವ ನರಕದ ದಾರಿಯಲ್ಲಿ ಹೋಗುವಂತಾಗುತ್ತದೆ. ಇದು ಅಧಃಪತನದ ದಾರಿ. ನಾವು ಎತ್ತರಕ್ಕೇರಬೇಕೆಂದರೆ  ಪರಮಾತ್ಮನ ಮಹತ್ವವನ್ನು ಅರಿತು ಅವನಿಗೆ ಶರಣಾಗಬೇಕು. ಒಳ್ಳೆಯ ದಾರಿಯಲ್ಲಿ ಮನಸ್ಸು ಚಿಂತನೆ ಮಾಡಿದಾಗ ಆತ್ಮ ಎತ್ತರಕ್ಕೇರಲು ಸಾಧ್ಯ. ಇದಕ್ಕೆ ಮೊದಲು ನಾವು ಹಚ್ಚಿಕೊಳ್ಳುವುದನ್ನು(ಔveಡಿ ಚಿಣಣಚಿಛಿhmeಟಿಣ) ಕಡಿಮೆ ಮಾಡಬೇಕು. ಇದರರ್ಥ ಯಾರನ್ನೂ ಪ್ರೀತಿಸಬಾರದು, ಸ್ನೇಹ ಬೆಳೆಸಬಾರದು ಎಂದರ್ಥವಲ್ಲ. ಪ್ರೀತಿ ಇರಲಿ,ಸ್ನೇಹವಿರಲಿ, ಆದರೆ ಮೋಹ ಬೇಡ. ಬಂದಿದ್ದು ಬರಲಿ ಎನ್ನುವ ದೃಢ ನಿರ್ಧಾರವಿರಲಿ. ಹೀಗೇ ಆಗಬೇಕು-ಹಾಗೇ ಆಗಬೇಕು ಎನ್ನುವ ಅತಿಮೋಹ ದುಃಖಕ್ಕೆ ಕಾರಣ. ಎಲ್ಲವುದರ ಜೊತೆಗಿದ್ದು, ಎಲ್ಲರನ್ನೂ ಪ್ರೀತಿಸುವುದು-ಆದರೆ ಹಚ್ಚಿಕೊಳ್ಳದೇ ಇರುವುದು(ಆeಣಚಿಛಿheಜ ಚಿಣಣಚಿಛಿhmeಟಿಣ). ಇದೇ ಸಾಧನೆಯ, ಸಂತೋಷದ ಮೂಲ ಮಂತ್ರ. 

ಮನಸ್ಸು ಯಾವಾಗಲೂ ಪ್ರಸನ್ನವಾಗಿರಬೇಕು. ಪ್ರಸನ್ನತೆ ಇಲ್ಲದಿದ್ದಾಗ ಮಾನಸಿಕವಾಗಿ, ದೈಹಿಕವಾಗಿ ನಾವು ಆರೋಗ್ಯವನ್ನು ಕಳೆದುಕೊಳ್ಳುತ್ತೇವೆ. ಎಂಥಹ ಪ್ರಸಂಗದಲ್ಲೂ ತಲೆ ಕೆಡಿಸಿಕೊಳ್ಳದೆ ಹಾಯಾಗಿರುವುದು ಪ್ರಸನ್ನತೆ. ಇದನ್ನು ಗಳಿಸುವುದು ಹೇಗೆ ಎನ್ನುವ ಚಿತ್ರಣ ಮುಂದಿನ ಶ್ಲೋಕ.

Prayag means confluence of three rivers

ಪ್ರಯಾಗ ಎಂದರೆ ಮೂರು ನದಿಗಳ ಸಂಗಮ


ವ್ಯಾಸರ ಪರಮಶಿಷ್ಯ ಸೂತಮುನಿಯು ಹೇಳಿದ ಶಿವಪುರಾಣದ ಮಹಿಮೆಯನ್ನೆಲ್ಲ ಕೇಳಿದ ಪ್ರಯಾಗದ ಮಹಾಸತ್ರಯಾಗದ ಋಷಿಗಳಿಗೆಲ್ಲಾ ಸಂತೋಷವಾಗುತ್ತದೆ. ವೇದಾಂತಸಾರಯುಕ್ತವಾದ, ಅದ್ಭುತವಾದ ಶಿವಪುರಾಣವನ್ನು ತಮಗೆ ಶ್ರವಣಮಾಡಿಸಬೇಕೆಂದು ಸೂತಮುನಿಯನ್ನು ಕೇಳಿಕೊಳ್ಳುತ್ತಾರೆ. ಆಗ ಸೂತಮುನಿಯು ವೇದಸಾರಗಳಿಂದ ಕೂಡಿರುವ ಜಗತ್ತಿನಲ್ಲೆ ಉತ್ಕೃಷ್ಟವಾದ ಶಿವಪುರಾಣವನ್ನು ಹೇಳುತ್ತಾನೆ. ಶಿವಪುರಾಣದಲ್ಲಿ ಭಕ್ತಿ-ಜ್ಞಾನ-ವೈರಾಗ್ಯಗಳೆಂಬ ಮೂರು ವಿಧವಾದ ಮುಕ್ತಿಸಾಧನಗಳು ವರ್ಣಿತವಾಗಿವೆ. ವೇದಾಂತ ಪ್ರತಿಪಾದ್ಯವಾದ ಪರಬ್ರಹ್ಮವಸ್ತುವಿನ ಬಗ್ಗೆ ವಿಶೇಷವಾಗಿ ವರ್ಣಿತವಾಗಿದೆ. ಇದರಲ್ಲಿ ವೇದಗಳ ಸಾರವೂ ಇದೆ ಎಂದು ವಿವರಿಸುತ್ತಾನೆ.

ಬಹು ಪೂರ್ವಕಾಲದಲ್ಲಿ, ಅನೇಕ ಕಲ್ಪಗಳು ಕಳೆದು, ಈ ಶ್ವೇತವರಾಹಕಲ್ಪ ಬಂದಾಗ, ಸೃಷ್ಟಿಕಾರ್ಯ ನಡೆಯುತ್ತಿತ್ತು. ಆಗ ತ್ರಿವೇಣಿ ಸಂಗಮವಾದ ಪ್ರಯಾಗ ಕ್ಷೇತ್ರದಲ್ಲಿ ವಾಸಿಸುತ್ತಿದ್ದ ಋಷಿಗಳಲ್ಲಿ ಒಂದು ವಿವಾದ ಹುಟ್ಟಿತು. ಯಾವ ವಸ್ತು ಶ್ರೇಷ್ಠ? ಯಾರು ಪರಮಶ್ರೇಷ್ಠರು ಎಂಬಿತ್ಯಾದಿ ಚರ್ಚೆಗಳು ವಿಪರೀತವಾಗಿ ವಿವಾದದ ರೂಪ ಪಡೆದವು. ಪ್ರಯಾಗ ಅಂದರೆ ಮೂರು ನದಿಗಳ ಸಂಗಮ. ಈ ಮೂರು ನದಿಗಳ ಎರಡು ಕಡೆಯ ದಡಗಳು ಸೇರಿಸಿದರೆ ಒಟ್ಟು ಆರು ತೀರಗಳಾಗುತ್ತವೆ. ಇಂಥ ಆರು ತೀರ ಇರುವ ಪ್ರಯಾಗದಲ್ಲಿ ವಾಸಿಸುವ ಋಷಿಗಳಿಗೆ ಷಟ್ಕುಲೀನರೆಂದು ಕರೆಯುತ್ತಾರೆ. ಇಂಥ ಶ್ರೇಷ್ಠ ಯತಿಗಳಲ್ಲಿ ಹುಟ್ಟಿದ ಶ್ರೇಷ್ಠತೆಯ ವಿವಾದ ಬಗೆಹರಿಯದೆ, ಪರಿಹಾರಕ್ಕಾಗಿ ಬ್ರಹ್ಮನ ಬಳಿ ಹೋದರು.

ಷಟ್ಕುಲೀನ ಮುನಿಗಳೆಲ್ಲಾ ಸೃಷ್ಟಿಕರ್ತನಾದ ಬ್ರಹ್ಮನ ಬಳಿ ಹೋಗಿ ಕೈಮುಗಿದು ‘ಸಮಸ್ತ ತತ್ವಗಳಿಗಿಂತ ಮತ್ತು ಸಮಸ್ತ ವಸ್ತುಗಳಿಗಿಂತ ಶ್ರೇಷ್ಟನಾದ ಪುರುಷ ಯಾರು?’ ಎಂದು ಕೇಳುತ್ತಾರೆ. ಇಲ್ಲಿ ಸಮಸ್ತ ತತ್ವಗಳೂ ಅಂದರೆ, ಪ್ರಕೃತಿಯಿಂದ ಉಂಟಾದ ಮಹತ್ತಾದ ತತ್ವಗಳು ಅಂತ ಅರ್ಥ. ಸಮಸ್ತ ವಸ್ತುಗಳು ಅಂದರೆ, ಸೃಷ್ಟಿಯ ಚರಾಚರಜೀವಿಗಳಿಗಿಂತಲೂ ಅಂತ ಅರ್ಥ. ಮುನಿಗಳ ಪ್ರಶ್ನೆ ಏನೆಂದರೆ, ಸೃಷ್ಟಿಗೂ ಪೂರ್ವದಲ್ಲಿ ಇದ್ದ ಮತ್ತು ಈಗಿನ ಪ್ರಪಂಚಕ್ಕಿಂತಲೂ ಭಿನ್ನನಾದ ಶ್ರೇಷ್ಠನಾದವ ಯಾರು - ಎಂಬುದಾಗಿತ್ತು. ಸೃಷ್ಟಿಯ ಒಡೆಯನಾದ ಬ್ರಹ್ಮ ಎಲ್ಲಾ ರಹಸ್ಯ ಬಲ್ಲವನಾಗಿದ್ದರಿಂದ ಮುನಿಗಳು ತಮ್ಮ ಪ್ರಶ್ನೆಗೆ ಉತ್ತರ ಬಯಸಿ ಬ್ರಹ್ಮನಲ್ಲಿ ಬಂದಿದ್ದರು. ಆಗ ಬ್ರಹ್ಮ ಸೃಷ್ಟಿರಹಸ್ಯ ಹೇಳುತ್ತಾನೆ.

‘ಯಾವ ಪರಬ್ರಹ್ಮನನ್ನು ಮಾತುಗಳಿಂದ ವರ್ಣಿಸಲು, ಮನಸ್ಸಿನಿಂದ ಧ್ಯಾನಿಸಲೂ ಸಹ ಆಗುವುದಿಲ್ಲವೋ, ಮತ್ತು ಯಾವ ನಿತ್ಯವಸ್ತುವಾದ ಆ ಪರಬ್ರಹ್ಮದಿಂದ ಸೃಷ್ಟಿಕಾಲದಲ್ಲಿ ಬ್ರಹ್ಮ-ವಿಷ್ಣು-ರುದ್ರ-ಇಂದ್ರ ಮೊದಲಾದ ದೇವತೆಗಳೂ ಪಂಚಮಹಾಭೂತಗಳೂ ಇಂದ್ರಿಯಗಳೆಲ್ಲ ಉತ್ಪನ್ನವಾದವೋ, ಅಂತಹ ಜಗದೊಡೆಯನೂ ಸರ್ವಜ್ಞನೂ ಆದ ದೇವದೇವನಾದ ಪರಮೇಶ್ವರನು ಒಬ್ಬನಿದ್ದಾನೆ. ಇಲ್ಲಿ ನಿರ್ಗುಣ ಸ್ವರೂಪವಾದ ಪರಬ್ರಹ್ಮವು ನಿರ್ದೇಶಿಸಲ್ಪಟ್ಟಿದೆ. ಈ ನಿರ್ಗುಣ ಬ್ರಹ್ಮಸ್ವರೂಪವನ್ನು ಮಾತುಗಳಿಂದ ವರ್ಣಿಸುವುದಿರಲಿ, ಮನಸ್ಸಿನಲ್ಲಿ ಸಹ ಹೀಗೆಯೇ ಇರುವುದೆಂದು ಊಹಿಸಿ, ಧ್ಯಾನಮಾಡಲು ಸಹ ಸಾಧಾರಣ ಜನರಿಗೆ ಸಾಧ್ಯವಿಲ್ಲ. ತಪಸ್ವಿಗಳೂ ಸಹ ಪರಬ್ರಹ್ಮನನ್ನು ಸಾಕ್ಷಾತ್ಕರಿಸಲು ಬಹು ಶ್ರಮಪಡುವಷ್ಟು ಅಗಾಧ ಸ್ವರೂಪ ಅವನದು. ಈಗ ನಮಗೆ ಕಾಣುತ್ತಿರುವ ಪ್ರಪಂಚವು ಸೃಷ್ಟಿಪೂರ್ವದಲ್ಲಿ ಈ ಸ್ಥಿತಿಯಲ್ಲಿ ಇರಲಿಲ್ಲ.

‘ಸೃಷ್ಟಿಗೆ ಪೂರ್ವದಲ್ಲಿ ದೃಶ್ಯಪದಾರ್ಥಗಳು ಒಂದೂ ಇರಲಿಲ್ಲ. ಪರಬ್ರಹ್ಮವಸ್ತು ಒಂದೇ ತಾನೇ ತಾನಾಗಿ ಎಲ್ಲೆಲ್ಲಿಯೂ ವ್ಯಾಪಿಸಿತ್ತು. ನಿರ್ಗುಣಾತ್ಮಕವಾದ ಪರಬ್ರಹ್ಮನಲ್ಲಿ ಸೃಷ್ಟಿಮಾಡಬೇಕೆಂಬ ಇಚ್ಛೆ ಬಂದೊಡನೆಯೇ ಪ್ರಕೃತಿಗಳಲ್ಲಿ ರೂಪಾಂತರಗಳುಂಟಾಯಿತು. ಬಳಿಕ ಪ್ರಕೃತಿಯಿಂದ ಮಹದಾಧಿತತ್ವಗಳೂ, ಅವುಗಳಿಂದ ಪಂಚಭೂತಾದಿಗಳೂ ಉದ್ಭವಿಸಿದವು. ಆ ಪಂಚಭೂತಗಳ ಪಂಚೀಕರಣಕ್ರಮದಿಂದ ನಾವು ಈಗ ಕಾಣುತ್ತಿರುವ ದೃಶ್ಯಪ್ರಪಂಚ ಸೃಷ್ಟಿಯಾಯಿತು. ಸತ್ವ-ರಜಸ್ಸು-ತಮೋಗುಣಗಳ ಸಮಾವಸ್ಥೆಯಲ್ಲಿ ಇರುವ ವಸ್ತುವೇ ನಿರ್ಗುಣಾತ್ಮಕ. ಈ ಮೂರು ಗುಣಗಳಲ್ಲಿ ಯಾವುದೊಂದು ಗುಣವೂ ಹೆಚ್ಚುಕಡಿಮೆ ಇಲ್ಲದ, ಸಮಾವಸ್ಥೆಯಲ್ಲಿ ಇರುತ್ತದೆ. ಸೃಷ್ಟಿಕಾಲದಲ್ಲಿ ಈ ಗುಣಗಳು ವ್ಯತ್ಯಸ್ತವಾಗಿ ವಿಷಮಾವಸ್ಥೆಗೆ ಬಂದಾಗ ಹೆಚ್ಚು ಕಡಿಮೆಯಾಗಿ ಮಾರ್ಪಡುವುದು. ಅದೇ ಸೃಷ್ಟಿ ಎಂದು ಸಾಂಖ್ಯದರ್ಶನದಲ್ಲಿ ಹೇಳಲಾಗಿದೆ’ ಅಂತ ಬ್ರಹ್ಮ ಹೇಳುತ್ತಾನೆ.

Thursday, September 15, 2022

Human relationships getting complicated...!

ಮನುಷ್ಯ ಸಂಬಂಧಗಳು ಸಂಕೀರ್ಣವಾಗುತ್ತಿವೆ...! 

ನಂಬಿಕೆ ಮೊಳೆಯುವ ಬದಲು ದ್ವೇಷ ಚಿಗುರೊಡೆಯುತ್ತಿದೆ. ಸಂಬಂಧಗಳು ವಿಶ್ವಾಸ ಬಂಧದಲ್ಲಿ ವಿಸ್ತರಿಸುವ ಬದಲು ಕ್ಷೀಣಿಸುತ್ತಿರುವುದಕ್ಕೆ ಮನಸ್ಸಿನೊಳಗೆ ಬಿತ್ತುತ್ತಿರುವ ಅಪನಂಬಿಕೆ ಬಿತ್ತನೆಗಳೇ ಮೂಲ ಕಾರಣ. ಜೊಳ್ಳು ಬಿತ್ತಿ ಒಳ್ಳೆಯ ಫಲ ಹೇಗೆ ಸಿಗುವುದಿಲ್ಲವೋ, ಹಾಗೇ ನಮ್ಮ ಸಂಬಂಧಗಳಿಗೆ ತೋರಿಕೆಯ ಲೇಪ ಹಾಕಿ ಬಿಗಿಯುವುದರಿಂದ ಸಡಿಲವಾಗುತ್ತಿದೆ. ಹಿಂದೆಲ್ಲ ಕೂಡುಕುಟುಂಬಗಳಿದ್ದವು; ನೂರಾರು ಜನ ಒಂದುಗೂಡಿ ಬದುಕು ಕಟ್ಟಿಕೊಳ್ಳುತ್ತಿದ್ದರು. ಇಂಥ ಅವಿಭಕ್ತ ಕುಟುಂಬಗಳು ಸಡಿಲಗೊಂಡಿದ್ದು ಸಹ ಮನೆಯ ಸದಸ್ಯರ ಅಪನಂಬಿಕೆ-ಅಸೂಯಾಪರ ಮನಃಸ್ಥಿತಿಗಳಿಂದ.

ಅವಿಭಕ್ತ ಕುಟುಂಬಗಳು ಕ್ಷೀಣಿಸಿದ ನಂತರ ಮುಂದುವರೆದ ವಿಭಕ್ತ ಕುಟುಂಬಗಳಲ್ಲೂ ಹತ್ತಾರು ಮಂದಿ ಬದುಕುತ್ತಿದ್ದರು. ಈಗಿನ ೨೧ನೇ ಶತಮಾನದ ಹೊತ್ತಿಗೆ ಮೂರ್ನಾಲ್ಕು ಮಂದಿಗೆ ಕುಟುಂಬಗಳು ಸೀಮಿತಗೊಂಡಿವೆ. ಹೀಗಿದ್ದರೂ ಮನೆಯಲ್ಲಿ ಅಪನಂಬಿಕೆ-ಅಸಮಾಧಾನಗಳು ಇಮ್ಮಡಿಸುತ್ತಲೇ ಇವೆ. ಇದರಿಂದ ಸುಮಧುರ ಬಾಂಧವ್ಯಗಳು ಹಾಳಾಗುತ್ತಿವೆ. ಸಂಸಾರವೆಂಬ ಸುಂದರ ವ್ಯವಸ್ಥೆ ಕುರೂಪವಾಗುತ್ತಿವೆ. ದಿನಕಳೆದಂತೆ ಸಾರ ಕಳೆದುಕೊಳ್ಳುತ್ತಿರುವ ಸಂಸಾರವೆಂಬ ಸಾಗರ ಬತ್ತಿದರೆ ಮನುಷ್ಯಕುಲ ನಾಶವಾದಂತೆ ಎಂಬ ಪ್ರಜ್ಞೆ ಯಾರಲ್ಲೂ ಕಾಣದಿರುವುದು ಆತಂಕಕಾರಿಯಾಗಿದೆ.

ಹಿಂದೆಲ್ಲಾ ಮನುಷ್ಯಸಂಬಂಧಗಳ ಮಧ್ಯೆ ಗೋಡೆಗಳೆದ್ದು ಮನೆ-ಮನಗಳನ್ನು ಪ್ರತ್ಯೇಕಿಸುತ್ತಿದ್ದವು. ಈಗ ಮನುಷ್ಯರ ವಾಸ ಊರು-ಕೇರಿಗಳನ್ನು ದಾಟಿ ದೇಶಗಳ ಗಡಿಯಾಚೆ ವಿಸ್ತರಿಸುತ್ತಿರುವುದರಿಂದ ಹತ್ತಾರು ತಲೆಮಾರುಗಳ ವಂಶವೃಕ್ಷಗಳು ಸಂಬಂಧದ ಬೆಸುಗೆ ಕಾಣದೆ ಒಣಗುತ್ತಿವೆ. ತನ್ನ ಮಕ್ಕಳು, ಮೊಮ್ಮಕ್ಕಳು ಬಾಳಿ ಬದುಕಲೆಂದು ಕಡುಕಷ್ಟ ಕಾಲದಲ್ಲಿ ಹೊಟ್ಟೆಬಟ್ಟೆ ಕಟ್ಟಿ ಕಟ್ಟಿದ ಸೂರುಗಳು ಬಾಳುವ ಕುಡಿಗಳಿಲ್ಲದೆ ಸೊರಗಿ ಹೋಗುತ್ತಿವೆ. ಮನೆಗೆ ವಾರಸುದಾರರಿಲ್ಲದೆ ತಮ್ಮ ಕಣ್ಣೆದುರೇ ಪಾಳು ಬೀಳುತ್ತಿರುವ ಮನೆಯನ್ನು ನೋಡಲಾಗದೆ, ನೋಡಿದರೂ ಏನೂ ಮಾಡಲಾಗದೆ ವೃದ್ದಾಶ್ರಮ ಸೇರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅನಾಥಾಶ್ರಮಗಳಿಗಿಂತ ವೃದ್ಧಾಶ್ರಮಗಳು ಹೆಚ್ಚಾಗಿವೆ ಅನ್ನುವ ಮಾತು ಕುಹಕ ಮಾತ್ರವಲ್ಲ, ಈ ಸಮಾಜದ ದುರಂತ ಪರಿಸ್ಥಿತಿಯ ಪ್ರತಿಬಿಂಬವಾಗಿದೆ.

ಸಂಬಂಧಗಳು ಹಾಳಾಗುತ್ತಿರುವುದರ ಹಿಂದೆ ಮನುಷ್ಯರ ಸಲ್ಲದ ದುರಾಸೆಗಳು ಮೂಲ ಕಾರಣವಾಗುತ್ತಿವೆ. ಹಣ ಮತ್ತು ಗುಣದ ನಡುವಿನ ವ್ಯತ್ಯಾಸ ಮತ್ತು ಅದರ ಫಲದ ಅರಿವಿಲ್ಲದ ಜನ, ಸಂಬಂಧಗಳನ್ನು ಬೆಲೆ ಕಟ್ಟಿ ತೂಗಿನೋಡುವ ಅಸಹ್ಯಕರ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಇದರಿಂದ ನಿತ್ಯ ಅನಾರೋಗ್ಯಕರ ಪೈಪೋಟಿಯ ವಾತಾವರಣ ಸೃಷ್ಟಿಯಾಗಿದೆ. ಇಂಥ ಕೃತಕ ಜಗತ್ತಿನಲ್ಲಿ ತಮ್ಮ ಮಾನ-ಪ್ರಾಣಗಳನ್ನು ಹಣದ ನೋಟಿನಲ್ಲಿ ಸಿಂಗರಿಸುವ ಪ್ರಯತ್ನ ಅವ್ಯಾಹತವಾಗಿ ಸಾಗುತ್ತಿದೆ. ತಮ್ಮ ಜೀವನದಲ್ಲಿ ಕಳೆದುಕೊಳ್ಳುತ್ತಿರುವುದೇನು, ತಮ್ಮ ಬದುಕಿಗೆ ಅಮೂಲ್ಯವಾದುದೇನು, ಎಂಬ ಸತ್ಯ ತಿಳಿಯದೆ ಪ್ರತಿ ಜೀವಕ್ಕೂ ಅಗತ್ಯವಾದ ಸುಖ-ಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಮನೆ ಒಳಗೂ-ಹೊರಗೂ, ಮನದೊಳಗೂ ಮನದ ಹೊರಗೂ ನೆಮ್ಮದಿ ಕಾಣದೆ ಚಡಪಡಿಸುತ್ತಿರುವ ಮನುಷ್ಯರ ನಡವಳಿಕೆ ವಿನಾಶದ ಮುನ್ಸೂಚನೆ ಅನಿಸುತ್ತೆ. ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಬರುತ್ತೆ ಅನ್ನೋ ನಾಣ್ನುಡಿಯಂತೆ ಮನುಷ್ಯ ವಿಪರೀತವಾಗಿ ಯೋಚಿಸುತ್ತಾ ವಿಚಿತ್ರವಾಗಿ ಆಡುತ್ತಿದ್ದಾನೆನಿಸುತ್ತೆ.

ಮನುಷ್ಯರ ಒಟ್ಟಾರೆ ಗುಣಗಳು ಜೀವನ್ಮುಖಿಯಾಗಿ ಹೊಮ್ಮುತ್ತಿಲ್ಲ, ಮೃತ್ಯುಮುಖಿಯಾಗಿ ಕಾಣುತ್ತಿವೆ. ಮನುಷ್ಯ ತನ್ನ ತಾನು ಸುಧಾರಿಸಿಕೊಳ್ಳದೆ, ಸಮಾಜವನ್ನು, ಆಮೂಲಕ ಈ ದೇಶವನ್ನು ಸುಧಾರಿಸಲಾರ. ಒಂದು ದೇಶ ಚೆನ್ನಾಗಿರಬೇಕಾದರೆ, ಆ ದೇಶದ ಜನರೂ ಚೆನ್ನಾಗಿರಬೇಕು. ಹಾಗೇ, ಒಂದು ದೇಹ ಉತ್ತಮವಾಗಿರಬೇಕಾದರೆ ಅದರೊಳಗಿನ ಮನಸ್ಸೂ ಉತ್ತಮವಾಗಿರಬೇಕು. ದೇಶದೊಳಗಿನ ಜನ ಒಳ್ಳೆ ಆಲೋಚನೆ ಮಾಡಿದರೆ ದೇಶಕ್ಕೆ ಒಳ್ಳೆಯದಾಗುತ್ತದೆ. ಜನ ಕೆಟ್ಟ ಆಲೋಚನೆಯಲ್ಲಿ ಮುಳುಗಿದರೆ, ದೇಶ ಸಹ ಕೆಟ್ಟದರಲ್ಲಿ ಮುಳುಗಿ ಹೋಗುತ್ತದೆ. ಹಾಗೇ ನಮ್ಮ ದೇಹ ಸಹ ಒಳ್ಳೇ ಚಿಂತನೆ ಮಾಡದಿದ್ದರೆ, ಕೆಟ್ಟು ಹೋಗುತ್ತದೆ. ನಾವು, ನಮ್ಮ ಕುಟುಂಬ ಚೆನ್ನಾಗಿದ್ದರೆ, ಈ ದೇಶ ಚೆನ್ನಾಗಿರುತ್ತದೆ ಎಂಬ ಸತ್ಯ ಅರ್ಥವಾದಾಗ ‘ಸಚ್ಚಿದಾನಂದ’ದ ದರ್ಶನವಾಗುತ್ತದೆ.